TOP NEWS

ISRO: ಇಸ್ರೋದಿಂದ ಉಚಿತ ಆನ್‌ಲೈನ್ ಕೋರ್ಸ್: AI ಹಾಗೂ ML ತಂತ್ರಜ್ಞಾನ ಕಲಿಕೆಗೆ ಸುವರ್ಣಾವಕಾಶ!

Skill Up with ISRO Free AI and ML Training in Hydro Informatics Announced

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ISRO) ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ತಂತ್ರಜ್ಞಾನದಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳು ಹಾಗೂ ವೃತ್ತಿಪರರಿಗಾಗಿ ಉಚಿತ ಆನ್‌ಲೈನ್ ಕೋರ್ಸ್ ಒಂದನ್ನು ಆಯೋಜಿಸಿದೆ. ‘ಜಲ ಸಂಪನ್ಮೂಲ ವಲಯದಲ್ಲಿ ಹೈಡ್ರೋ-ಇನ್ಫರ್ಮ್ಯಾಟಿಕ್ಸ್‌ಗಾಗಿ AI/ML’ ಎಂಬ ಶೀರ್ಷಿಕೆಯಡಿಯಲ್ಲಿ ಈ ತರಬೇತಿ ಕಾರ್ಯಕ್ರಮ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 4 ರ ಒಳಗಾಗಿ ಯಾವುದೇ ಶುಲ್ಕವಿಲ್ಲದೆ ಆನ್‌ಲೈನ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ.

ಈ ಕೋರ್ಸ್‌ನಲ್ಲಿ ಏನ್ನೆಲ್ಲಾ ಹೇಳಿಕೊಡಲಾಗುತ್ತೆ?

ಡೆಹ್ರಾಡೂನ್‌ನಲ್ಲಿ ನೆಲೆಸಿರುವ ಇಸ್ರೋದ ಪ್ರಮುಖ ಅಂಗಸಂಸ್ಥೆಯಾದ ‘ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ರಿಮೋಟ್ ಸೆನ್ಸಿಂಗ್’ (IIRS) ಈ ವಿಶೇಷ ಕೋರ್ಸ್ ಅನ್ನು ನಿರ್ವಹಿಸಲಿದೆ. ಜಲ ಸಂಪನ್ಮೂಲ ನಿರ್ವಹಣೆ ಹಾಗೂ ಹೈಡ್ರೋ-ಇನ್ಫರ್ಮ್ಯಾಟಿಕ್ಸ್ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಮಿಷನ್ ಲರ್ನಿಂಗ್ ತಂತ್ರಜ್ಞಾನಗಳನ್ನು ಹೇಗೆ ಯಶಸ್ವಿಯಾಗಿ ಬಳಸುವುದು ಎಂಬುದರ ಕುರಿತು ಅಭ್ಯರ್ಥಿಗಳಿಗೆ ಸಮಗ್ರ ಡಿಜಿಟಲ್ ಜ್ಞಾನ ಮತ್ತು ತರಬೇತಿ ನೀಡುವುದು ಈ ಕಾರ್ಯಕ್ರಮದ ಮುಖ್ಯ ಗುರಿಯಾಗಿದೆ.

ಈ ತರಬೇತಿಯ ಸಂಪೂರ್ಣ ಪ್ರಕ್ರಿಯೆಯು ಡಿಜಿಟಲ್ ರೂಪದಲ್ಲೇ ನಡೆಯಲಿದ್ದು, ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ತರಬೇತಿಯ ನೇರ ಹಾಗೂ ಸಂವಾದಾತ್ಮಕ ತರಗತಿಗಳನ್ನು ಐಐಆರ್‌ಎಸ್ ಸಂಸ್ಥೆಯ ಅಧಿಕೃತ ಯೂಟ್ಯೂಬ್ ಚಾನೆಲ್ ಮೂಲಕ ಪ್ರಸಾರ ಮಾಡಲಾಗುತ್ತದೆ. ಇದರೊಂದಿಗೆ, ಅಭ್ಯರ್ಥಿಗಳ ಅಭ್ಯಾಸಕ್ಕಾಗಿ ದೈನಂದಿನ ಅಧ್ಯಯನ ಸಾಮಗ್ರಿಗಳು, ರೆಕಾರ್ಡ್ ಮಾಡಿದ ವೀಡಿಯೊ ಉಪನ್ಯಾಸಗಳು ಹಾಗೂ ರಸಪ್ರಶ್ನೆಗಳನ್ನು ಇಸ್ರೋದ ‘ಲರ್ನಿಂಗ್ ಮ್ಯಾನೇಜ್‌ಮೆಂಟ್ ಸಿಸ್ಟಮ್’ (LMS) ಮೂಲಕ ಒದಗಿಸಲಾಗುತ್ತದೆ. ಕೋರ್ಸ್‌ನ ಅವಧಿಯಲ್ಲಿ ನೀಡಲಾಗುವ ದೈನಂದಿನ ರಸಪ್ರಶ್ನೆಗಳಲ್ಲಿ ಪ್ರತಿಯೊಬ್ಬ ಅಭ್ಯರ್ಥಿಯೂ ಭಾಗವಹಿಸುವುದು ಕಡ್ಡಾಯವಾಗಿದ್ದು, ಇದನ್ನು ಆಧಾರವಾಗಿಟ್ಟುಕೊಂಡು ಅಭ್ಯರ್ಥಿಯ ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ಆಸಕ್ತಿಯನ್ನು ಮೌಲ್ಯಮಾಪನ ಮಾಡಲಾಗುತ್ತದೆ.

ಈ ಕೋರ್ಸ್‌ ಸೇರುವುದು ಹೇಗೆ?

ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ನಿಗದಿಪಡಿಸಿದ ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳಿಗೆ ಇಸ್ರೋ ವತಿಯಿಂದ ಅಧಿಕೃತ ‘ಭಾಗವಹಿಸುವಿಕೆ ಪ್ರಮಾಣಪತ್ರ’ (Participation Certificate) ನೀಡಲಾಗುವುದು. ಈ ಉಚಿತ ಪ್ರಮಾಣಪತ್ರವನ್ನು ಅಭ್ಯರ್ಥಿಗಳು ಇಸ್ರೋದ ‘e-class LMS’ ಪೋರ್ಟಲ್‌ಗೆ ಲಾಗಿನ್ ಆಗುವ ಮೂಲಕ ನೇರವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಈ ತರಬೇತಿ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು ಅಕ್ಟೋಬರ್ ೪ ಕೊನೆಯ ದಿನವಾಗಿದ್ದು, ಅಕ್ಟೋಬರ್ ೫ ರಿಂದ ಅಕ್ಟೋಬರ್ ೧೦ ರವರೆಗೆ ತರಗತಿಗಳು ನಡೆಯಲಿವೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಇಸ್ರೋದ ಅಧಿಕೃತ ವೆಬ್‌ಸೈಟ್ ಆದ isrolms.iirs.gov.in/edusatregistration ಗೆ ಭೇಟಿ ನೀಡಿ ಉಚಿತವಾಗಿ ನೋಂದಣಿ ಮಾಡಿಕೊಳ್ಳಬಹುದು.

ಇದನ್ನೂ ಓದಿ: ಬೃಹತ್ ಉದ್ಯೋಗ ಕಡಿತದ ಬೆನ್ನಲ್ಲೇ ಕಠಿಣ ಹೊಸ ರೂಲ್ಸ್ ಜಾರಿ ಮಾಡಿದ ಉಬರ್‌

Leave a Reply

Your email address will not be published. Required fields are marked *