Big News: ನಿಠಾರಿ ಸರಣಿ ಕೊಲೆ ಪ್ರಕರಣದಲ್ಲಿ ಖುಲಾಸೆಯಾಗಿದ್ದ ಸುರೇಂದ್ರ ಕೋಲಿ ಆತ್ಮಹತ್ಯೆ!

big news From Prison to Tea Stall Nithari Case Accused Surendra Koli Ends Life in Haridwar

ನವದೆಹಲಿ: ಹಲವು ವರ್ಷಗಳ ಕಾಲ ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ನಿಠಾರಿ ಸರಣಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ನಂತರ ನ್ಯಾಯಾಲಯದಿಂದ ಖುಲಾಸೆಗೊಂಡಿದ್ದ ಸುರೇಂದ್ರ ಕೋಲಿ ಉತ್ತರಾಖಂಡದ ಹರಿದ್ವಾರದಲ್ಲಿ ಶುಕ್ರವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹರಿದ್ವಾರದಲ್ಲಿ ಕಳೆದ ಕೆಲವು ದಿನಗಳಿಂದ ಸಣ್ಣ ಚಹಾ ಅಂಗಡಿ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದ ಸುರೇಂದ್ರ ಕೋಲಿ, ತಮ್ಮ(Big News) ಅಂಗಡಿಯ ಒಳಗಡೆಯೇ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಇಷ್ಟಕ್ಕೂ ಆಗಿದ್ದೇನು?

ಉತ್ತರ ಹರಿದ್ವಾರದ ಸಪ್ತ ಸರೋವರ ಪ್ರದೇಶದಲ್ಲಿರುವ ಲಾಲ್ ಮಾತಾ ದೇವಾಲಯದ ಎದುರಿನ ಚಹಾ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಹರಿದ್ವಾರದ ನಗರ ಕೊತ್ವಾಲಿ ವ್ಯಾಪ್ತಿಯ ಸಪ್ತಋಷಿ ಪೊಲೀಸ್ ಔಟ್‌ಪೋಸ್ಟ್‌ಗೆ ಸಪ್ತ ಸರೋವರ ರಸ್ತೆಯ ಅಂಗಡಿಯೊಂದರಲ್ಲಿ ವ್ಯಕ್ತಿಯೊಬ್ಬರು ಶವವಾಗಿ ಪತ್ತೆಯಾಗಿರುವ ಕುರಿತು ಮಾಹಿತಿ ಲಭಿಸಿತ್ತು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮೃತನನ್ನು ನಿಠಾರಿ ಪ್ರಕರಣದಲ್ಲಿ ಖುಲಾಸೆಗೊಂಡಿದ್ದ ಸುರೇಂದ್ರ ಕೋಲಿ ಎಂದು ಗುರುತಿಸಿದ್ದಾರೆ. ಮೂಲತಃ ಅಲ್ಮೋರಾದ ಭಿಕ್ಯಾಸೇನ್‌ನ ಮಂಗ್ರುಖಾಲ್ ಗ್ರಾಮದ ನಿವಾಸಿಯಾಗಿದ್ದ ಕೋಲಿ ಅವರ ಕುಟುಂಬಸ್ಥರಿಗೂ ಈ ವಿಷಯವನ್ನು ತಿಳಿಸಲಾಗಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ಸುರೇಂದ್ರ ಕೋಲಿ ಕಳೆದ ಕೆಲವು ಸಮಯದಿಂದ ಹರಿದ್ವಾರದಲ್ಲಿ ಬಾಡಿಗೆ ಅಂಗಡಿಯೊಂದನ್ನು ಪಡೆದು ಚಹಾ ವ್ಯಾಪಾರ ಮಾಡುತ್ತಿದ್ದರು. ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ನಗರ ಕೊತ್ವಾಲ್ ಕುಂದನ್ ಸಿಂಗ್ ರಾಣಾ ಅವರು ಘಟನೆಯನ್ನು ಖಾತರಿಪಡಿಸಿದ್ದು, ಸುತ್ತಮುತ್ತಲಿನ ಜನರ ಬಳಿ ಮಾಹಿತಿ ಸಂಗ್ರಹಿಸಲಾಗುತ್ತಿದೆ ಹಾಗೂ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಸಾವಿಗೆ ನಿಖರ ಕಾರಣ ಏನೆಂಬುದು ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ತಿಳಿದುಬರಲಿದೆ.

ಸುರೇಂದ್ರ ಕೋಲಿ ಯಾರು?

೨೦೦೬ರಲ್ಲಿ ಹೊರಬಿದ್ದ ಭೀಕರ ನಿಠಾರಿ ಸರಣಿ ಕೊಲೆ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸುರೇಂದ್ರ ಕೋಲಿ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು. ವಿಚಾರಣೆಯ ಹಂತದಲ್ಲಿ ಕೆಳ ಹಂತದ ನ್ಯಾಯಾಲಯಗಳು ಇವರಿಗೆ ಹಲವು ಪ್ರಕರಣಗಳಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿದ್ದವು. ಆದರೆ ನಂತರ ಅಲಹಾಬಾದ್ ಹೈಕೋರ್ಟ್ ಇವರನ್ನು ಹಲವು ಪ್ರಕರಣಗಳಿಂದ ಖುಲಾಸೆಗೊಳಿಸಿತ್ತು. ಇದನ್ನು ಎತ್ತಿಹಿಡಿದಿದ್ದ ಸುಪ್ರೀಂ ಕೋರ್ಟ್, ೨೦೨೫ರ ಜುಲೈನಲ್ಲಿ ನಿಠಾರಿ ಪ್ರಕರಣಕ್ಕೆ ಸಂಬಂಧಿಸಿದ ೧೨ ಪ್ರಕರಣಗಳಲ್ಲಿ ಕೋಲಿ ಅವರ ಬಿಡುಗಡೆಯನ್ನು ಎತ್ತಿಹಿಡಿಯಿತು. ತದನಂತರ ಅದೇ ವರ್ಷದ ನವೆಂಬರ್‌ನಲ್ಲಿ ಕೊನೆಯದಾಗಿ ಬಾಕಿ ಇದ್ದ ಪ್ರಕರಣದಲ್ಲೂ ಸುಪ್ರೀಂ ಕೋರ್ಟ್ ಅವರನ್ನು ದೋಷಮುಕ್ತಗೊಳಿಸಿ, ತಕ್ಷಣವೇ ಜೈಲಿನಿಂದ ಬಿಡುಗಡೆ ಮಾಡುವಂತೆ ಆದೇಶಿಸಿತ್ತು. ಜೈಲಿನಿಂದ ಹೊರಬಂದು ಹೊಸ ಬದುಕು ಕಟ್ಟಿಕೊಳ್ಳಲು ಯತ್ನಿಸುತ್ತಿದ್ದ ಕೋಲಿ ಅವರ ಈ ಶಂಕಿತ ಆತ್ಮಹತ್ಯೆ ಇದೀಗ ಹೊಸ ತನಿಖೆಗೆ ಕಾರಣವಾಗಿದೆ.

ಇದನ್ನೂ ಓದಿ: ಡಿಜಿಟಲ್ ಜಗತ್ತಿನಲ್ಲಿ ಮೋದಿ ಹೊಸ ಇತಿಹಾಸ: ಯೂಟ್ಯೂಬ್‌ನಲ್ಲಿ 3 ಕೋಟಿ, ಇನ್‌ಸ್ಟಾಗ್ರಾಮ್‌ನಲ್ಲಿ 10 ಕೋಟಿ ಫಾಲೋವರ್ಸ್ ಗಳಿಸಿದ ಏಕೈಕ ನಾಯಕ

Leave a Reply

Your email address will not be published. Required fields are marked *