ಮೈಸೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ನೇತೃತ್ವದ ನೂತನ ಸರ್ಕಾರ ಅಧಿಕಾರ ಸ್ವೀಕರಿಸಿ ಯಶಸ್ವಿಯಾಗಿ ನೂರು ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ, ಮೈಸೂರು ಅರಮನೆ ಇಂದಿನಿಂದ ಸತತ ನಾಲ್ಕು ದಿನಗಳ ಕಾಲ ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಆಕರ್ಷಕ ವರ್ಣರಂಜಿತ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಲಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಈ ವಿಶೇಷ ಪ್ರದರ್ಶನವನ್ನು ಅದ್ಧೂರಿಯಾಗಿ ಆಯೋಜಿಸಲಾಗಿದೆ. ಈ ದೀಪಾಲಂಕಾರದ ಸಂಭ್ರಮದ ಜೊತೆಗೆ, ಐತಿಹಾಸಿಕ ಜಯರಾಮ ಮಹಾದ್ವಾರದಲ್ಲಿ ಸರ್ಕಾರದ ಮಹತ್ವಾಕಾಂಕ್ಷೆಯ ಅಭಿವೃದ್ಧಿ ಯೋಜನೆಗಳು ಹಾಗೂ ಜನಪ್ರಿಯ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಮತ್ತು ಯಶೋಗಾಥೆಯನ್ನು ಬಿಂಬಿಸುವ ಅದ್ಭುತ ಎಲ್‌ಇಡಿ (LED) ಪ್ರದರ್ಶನಗಳು, ಧ್ವನಿ ಹಾಗೂ ಬೆಳಕಿನ ವಿಶೇಷ ಸಂಯೋಜನೆ ಮತ್ತು ತ್ರಿ-ಡಿ (3D) ಮ್ಯಾಪಿಂಗ್ ಪ್ರದರ್ಶನಗಳು ಸಾರ್ವಜನಿಕರನ್ನು ಆಕರ್ಷಿಸಲಿವೆ.
100 ದಿನಗಳಲ್ಲಿ ಡಿಕೆಶಿ ಮಾಡಿದ ಸಾಧನೆ ಇದು
ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರದ ಚುಕ್ಕಾಣಿ ಹಿಡಿದು ಪೂರೈಸಿರುವ ಈ ಅಲ್ಪಾವಧಿಯಲ್ಲಿಯೇ ರಾಜ್ಯದ ಜನಪರ ಹಾಗೂ ದೂರದೃಷ್ಟಿಯ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡು ಯಶಸ್ವಿಯಾಗಿ ಜಾರಿಗೆ ತಂದಿದ್ದಾರೆ. ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಬಸ್ ಪ್ರಯಾಣದ ಸೌಲಭ್ಯ ಕಲ್ಪಿಸುವುದು, ಸಾರ್ವಜನಿಕರ ಕುಂದುಕೊರತೆಗಳು ಹಾಗೂ ಅಹವಾಲುಗಳನ್ನು ನೇರವಾಗಿ ಆಲಿಸಿ ತ್ವರಿತವಾಗಿ ಪರಿಹರಿಸುವ ಸಲುವಾಗಿ ಪ್ರತ್ಯೇತವಾಗಿ ‘ಪ್ರಜಾಸೇವಾ ಇಲಾಖೆ’ಯನ್ನು ಸ್ಥಾಪಿಸಿರುವುದು ಸರ್ಕಾರದ ಪ್ರಮುಖ ಸಾಧನೆಗಳಾಗಿವೆ. ಇದರೊಂದಿಗೆ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ರೀತಿಯ ಸೋರಿಕೆಗಳು ಉಂಟಾಗದಂತೆ ತಡೆಯಲು ಕಟ್ಟುನಿಟ್ಟಾದ ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ರೌಡಿ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಗ್ರಹಿಸಲು ರಾಜ್ಯದ ಪ್ರತಿ ಜಿಲ್ಲೆಗೂ ಪ್ರತ್ಯೇಕ ವಿಶೇಷ ಪಡೆಗಳನ್ನು ರಚಿಸಲಾಗಿದೆ.
72 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿಗೆ ಕ್ರಮ
ಕೇಂದ್ರ ಸರ್ಕಾರದ ನೀತಿ ಆಯೋಗದ ಮಹತ್ವದ ಸಭೆಯಲ್ಲಿ ಪಾಲ್ಗೊಂಡು ಕರ್ನಾಟಕ ರಾಜ್ಯದ ಹಿತಾಸಕ್ತಿಯ ಬೇಡಿಕೆಗಳನ್ನು ಪ್ರಬಲವಾಗಿ ಮಂಡಿಸಲಾಗಿದೆ. ರಾಜ್ಯದಲ್ಲಿ ನೂತನ ಸಿಎಸ್‌ಆರ್ (CSR) ನೀತಿ ಕ್ರಮಗಳನ್ನು ತರಲಾಗಿದ್ದು, ಮುಂಬರುವ ಬರಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಹಾಗೂ ನಿರ್ವಹಿಸಲು ವಿಭಾಗವಾರು ಉನ್ನತ ಮಟ್ಟದ ಪರಿಶೀಲನಾ ಸಭೆಗಳನ್ನು ನಡೆಸಿ ಅಗತ್ಯವಿರುವ ಎಲ್ಲಾ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ವಿಶೇಷ ಒತ್ತು ನೀಡಲಾಗಿದೆ. ಕೊಪ್ಪಳ, ರಾಯಚೂರು, ವಿಜಯನಗರ, ಬಳ್ಳಾರಿ ಜಿಲ್ಲೆಗಳ ರೈತರಿಗೆ ಹಾಗೂ ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ರೈತ ಕುಲಕ್ಕೆ ಜೀವನಾಡಿಯಾಗಿರುವ ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯಕ್ಕೆ ಹೊಸ ಸ್ಪಿಲ್‌ವೇ ಗೇಟ್‌ಗಳನ್ನು ಅಳವಡಿಸಿ ಯಶಸ್ವಿಯಾಗಿ ಉದ್ಘಾಟಿಸಲಾಗಿದೆ. ‘ಬಿಯಾಂಡ್ ಬೆಂಗಳೂರು’ ಪರಿಕಲ್ಪನೆಯಡಿ ಕೇವಲ ರಾಜಧಾನಿಗೆ ಮಾತ್ರ ಸೀಮಿತವಾಗದೆ, ಎರಡು ಮತ್ತು ಮೂರನೇ ಹಂತದ ಇತರೆ ಪ್ರಮುಖ ನಗರಗಳಲ್ಲಿಯೂ ನೂತನ ಕೈಗಾರಿಕೆಗಳನ್ನು ಸ್ಥಾಪಿಸಲು ಉತ್ತೇಜನ ನೀಡಲಾಗುತ್ತಿದೆ. ಇದರೊಂದಿಗೆ ಯುವ ಜನತೆಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಒಟ್ಟು 72 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳ ಮೂಲಕ ಮುಂಬರುವ ದಿನಗಳಲ್ಲಿ ‘ದೃಢ ಕರ್ನಾಟಕ’ದ ನಿರ್ಮಾಣದ ಕನಸನ್ನು ಸಾಕಾರಗೊಳಿಸಲು ಮುಖ್ಯಮಂತ್ರಿಗಳು ಅತ್ಯಂತ ಮಹತ್ವದ ಹೆಜ್ಜೆಗಳನ್ನು ಇಡುತ್ತಿದ್ದಾರೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಎಂ.ಎನ್. ಅನುಚೇತ್ ಅವರು ವಿವರಣೆ ನೀಡಿದ್ದಾರೆ.
ಇದನ್ನೂ ಓದಿ: ಜೈಲಿನಲ್ಲಿ ಮೊಬೈಲ್ ಬಳಕೆ: ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ಪ್ರಜ್ವಲ್ ರೇವಣ್ಣ
