ಬೆಂಗಳೂರು: ದೇಶಾದ್ಯಂತ ನಿರಂತರವಾಗಿ ಹೆಚ್ಚಾಗುತ್ತಿರುವ ‘ಡಿಜಿಟಲ್ ಅರೆಸ್ಟ್’ (Digital Arrest) ರೂಪದ ಸೈಬರ್ ಅಪರಾಧಗಳ ವಿರುದ್ಧ ಕೇಂದ್ರ ತನಿಖಾ ಸಂಸ್ಥೆ (CBI) ತನ್ನ ಸಮರವನ್ನು ತೀವ್ರಗೊಳಿಸಿದೆ. ‘ಆಪರೇಷನ್ ಚಕ್ರ-VI’ ಭಾಗವಾಗಿ ದೇಶಾದ್ಯಂತ ವ್ಯಾಪಿಸಿರುವ ಬೃಹತ್ ಸೈಬರ್ ವಂಚನೆ ಜಾಲಗಳ ಮೇಲೆ ಸಿಬಿಐ ಅಧಿಕಾರಿಗಳು ಭಾರಿ ಪ್ರಮಾಣದ ದಾಳಿ ನಡೆಸಿದ್ದಾರೆ. ದೇಶದ ನಾಗರಿಕರಿಗೆ ಗಂಭೀರ ಬೆದರಿಕೆಯಾಗಿ ಪರಿಣಮಿಸಿರುವ ಈ ಡಿಜಿಟಲ್ ಅರೆಸ್ಟ್ ಪ್ರಕರಣಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಗೌರವಾನ್ವಿತ ಸುಪ್ರೀಂ ಕೋರ್ಟ್, ಈ ಜಾಲದ ಸೂತ್ರಧಾರರು ಹಾಗೂ ಅವರಿಗೆ ನೆರವಾಗುತ್ತಿರುವ ಜಾಲದ ವಿರುದ್ಧ ಕಠಿಣ ಮತ್ತು ಸಂಘಟಿತ ಕ್ರಮ ಕೈಗೊಳ್ಳುವಂತೆ ಸಿಬಿಐಗೆ ಸ್ಪಷ್ಟ ನಿರ್ದೇಶನ ನೀಡಿತ್ತು. ಉನ್ನತ ನ್ಯಾಯಾಲಯದ ಈ ಆದೇಶದ ಬೆನ್ನಲ್ಲೇ ಸಿಬಿಐ ಅಧಿಕಾರಿಗಳು ದೇಶದಾದ್ಯಂತ ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ.
ಡಿಜಿಟಲ್ ವಂಚಕರಿಗೆ ಸಿಬಿಐ ಬಲೆ
ಸಂಘಟಿತ ಸೈಬರ್ ಅಪರಾಧಗಳ ವಿರುದ್ಧದ ನಿರಂತರ ಹೋರಾಟವನ್ನು ಮುಂದುವರಿಸಿರುವ ಸಿಬಿಐ, ದೇಶದ ವಿವಿಧ ರಾಜ್ಯಗಳಿಂದ ಡಿಜಿಟಲ್ ಅರೆಸ್ಟ್ಗೆ ಸಂಬಂಧಿಸಿದ ಹಲವಾರು ಪ್ರಮುಖ ಪ್ರಕರಣಗಳ ತನಿಖೆಯನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ. ಪೊಲೀಸರು ಅಧಿಕಾರಿಗಳು, ಸಿಬಿಐ ಅಥವಾ ಇತರೆ ತನಿಖಾ ಸಂಸ್ಥೆಗಳು ಹಾಗೂ ಸರ್ಕಾರಿ ಅಧಿಕಾರಿಗಳಂತೆ ನಟಿಸುವ ಸೈಬರ್ ಅಪರಾಧಿಗಳು, ಅಮಾಯಕ ಸಾರ್ವಜನಿಕರನ್ನು ಆನ್ಲೈನ್ ಮೂಲಕ ಭಯಭೀತಗೊಳಿಸಿ ಡಿಜಿಟಲ್ ಬಂಧನದಲ್ಲಿಡುತ್ತಿದ್ದರು. ತದನಂತರ ಅವರಿಂದ ಕೋಟ್ಯಂತರ ರೂಪಾಯಿ ಹಣವನ್ನು ಬಲವಂತವಾಗಿ ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಳ್ಳುತ್ತಿದ್ದರು. ಈ ಜಾಲದ ಮೂಲವನ್ನು ಹುಡುಕಲು ಸಿಬಿಐ ಅಧಿಕಾರಿಗಳು ತಾಂತ್ರಿಕ ಹಾಗೂ ಆರ್ಥಿಕ ಮಾಹಿತಿಗಳನ್ನು ಆಳವಾಗಿ ವಿಶ್ಲೇಷಣೆ ನಡೆಸಿದ್ದರು.
ಈ ಸೈಬರ್ ವಂಚನೆಗೆ ಸಂಬಂಧಿಸಿದಂತೆ ಪ್ರಮುಖ ಮೂರು ದೂರುಗಳ ಆಧಾರದ ಮೇಲೆ ಸಿಬಿಐ ದೇಶದ 20 ರಾಜ್ಯಗಳ ಬರೋಬ್ಬರಿ 89 ಸ್ಥಳಗಳಲ್ಲಿ ಏಕಕಾಲಕ್ಕೆ ಬೃಹತ್ ಶೋಧ ಕಾರ್ಯಚರಣೆ ನಡೆಸಿದೆ. ವಂಚನೆಯಿಂದ ಬಂದ ಹಣದ ಹರಿವನ್ನು ಪತ್ತೆಹಚ್ಚಲು, ಜಾಲದ ಹಿಂದಿರುವ ಪ್ರಮುಖ ರೂವಾರಿಗಳು ಹಾಗೂ ಫಲಾನುಭವಿಗಳನ್ನು ಗುರುತಿಸಲು ಮತ್ತು ಸಾಕ್ಷ್ಯಗಳನ್ನು ನಾಶಪಡಿಸುವ ಮುನ್ನವೇ ಅವುಗಳನ್ನು ವಶಪಡಿಸಿಕೊಳ್ಳಲು ಈ ಕಾರ್ಯಾಚರಣೆ ನಡೆಸಲಾಯಿತು. ಬ್ಯಾಂಕ್ ಖಾತೆಗಳ ವಿವರಗಳು ಮತ್ತು ಆನ್ಲೈನ್ ಖಾತೆಗಳ ಲಾಗಿನ್ ದತ್ತಾಂಶಗಳನ್ನು ಅತ್ಯಂತ ಕಟ್ಟುನಿಟ್ಟಾಗಿ ಪರಿಶೀಲಿಸಿ ಈ ದಾಳಿಯನ್ನು ಅತ್ಯಂತ ಯೋಜಿತವಾಗಿ ಕಾರ್ಯರೂಪಕ್ಕೆ ತರಲಾಗಿತ್ತು.
ಮೂವರು ಆರೋಪಿಗಳ ಬಂಧನ
ಸಿಬಿಐ ಕೈಗೆತ್ತಿಕೊಂಡಿರುವ ಈ ಮೂರು ಪ್ರಮುಖ ಪ್ರಕರಣಗಳಲ್ಲಿ ಅತ್ಯಂತ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಮೊದಲ ಪ್ರಕರಣವು ಖ್ಯಾತ ಬಿಟ್ಸ್ ಪಿಲಾನಿ (BITS Pilani) ಸಂಸ್ಥೆಗೆ ಸಂಬಂಧಿಸಿದ್ದಾಗಿದ್ದು, ಇಲ್ಲಿ ವಂಚಕರು ಪೊಲೀಸ್ ಅಧಿಕಾರಿಗಳಂತೆ ನಟಿಸಿ ಸಂತ್ರಸ್ತರೊಬ್ಬರನ್ನು ಸತತ 3 ತಿಂಗಳ ಕಾಲ ಡಿಜಿಟಲ್ ಬಂಧನದಲ್ಲಿಟ್ಟು ಬರೋಬ್ಬರಿ 7.67 ಕೋಟಿ ರೂಪಾಯಿ ವಂಚಿಸಿದ್ದರು. ಎರಡನೇ ಪ್ರಕರಣ ಗುಜರಾತ್ನಲ್ಲಿ ನಡೆದಿದ್ದು, ಇಲ್ಲೂ ಸಹ ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ಬಂದ ವಂಚಕರು ವ್ಯಕ್ತಿಯೊಬ್ಬರನ್ನು 3 ತಿಂಗಳು ಕಾಲ ಡಿಜಿಟಲ್ ಅರೆಸ್ಟ್ನಲ್ಲಿಟ್ಟು 19.24 ಕೋಟಿ ರೂಪಾಯಿ ದೋಚಿದ್ದರು. ಇನ್ನು ಮೂರನೇ ಪ್ರಕರಣ ನಮ್ಮ ಕರ್ನಾಟಕಕ್ಕೆ ಸಂಬಂಧಿಸಿದ್ದಾಗಿದ್ದು, ಇಲ್ಲಿ ಸಂತ್ರಸ್ತರೊಬ್ಬರನ್ನು ಒಂದು ತಿಂಗಳ ಕಾಲ ಡಿಜಿಟಲ್ ಬಂಧನದಲ್ಲಿಟ್ಟು ಬರೋಬ್ಬರಿ 15.45 ಕೋಟಿ ರೂಪಾಯಿ ದೋಚಲಾಗಿತ್ತು.
ಈ ಸರಣಿ ದಾಳಿಗಳ ಸಂದರ್ಭದಲ್ಲಿ ವಂಚನೆಗೆ ಬಳಸಲಾದ ಬ್ಯಾಂಕಿಂಗ್ ದಾಖಲೆಗಳು, ಖಾತೆ ನಿರ್ವಹಣೆ ಪುಸ್ತಕಗಳು, ಡಿಜಿಟಲ್ ಸಾಧನಗಳು ಹಾಗೂ ಅನೇಕ ಪ್ರಮುಖ ಸಾಕ್ಷ್ಯಗಳನ್ನು ಸಿಬಿಐ ವಶಪಡಿಸಿಕೊಂಡಿದೆ. ವಿವಿಧ ರಾಜ್ಯಗಳ ಗಡಿಗಳನ್ನು ದಾಟಿ ಕಾರ್ಯನಿರ್ವಹಿಸುತ್ತಿರುವ ಈ ಸೈಬರ್ ಜಾಲದ ತಾಂತ್ರಿಕ ಹಾಗೂ ಆರ್ಥಿಕ ಮೂಲಸೌಕರ್ಯವನ್ನು ಹಂತ ಹಂತವಾಗಿ ಭೇದಿಸಲು ಈ ಸಾಕ್ಷ್ಯಗಳನ್ನು ವಿಧಿವಿಜ್ಞಾನ (ಫೊರೆನ್ಸಿಕ್) ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
ಈ ಬೃಹತ್ ಕಾರ್ಯಾಚರಣೆಯ ವೇಳೆ ಸಿಬಿಐ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿದೆ. ತನಿಖೆಯ ವೇಳೆ ಇವರು ವಂಚನೆಯ ಹಣವನ್ನು ಸ್ವೀಕರಿಸುವುದು, ಅದನ್ನು ವಿವಿಧ ಖಾತೆಗಳಿಗೆ ಹಂಚುವುದು ಹಾಗೂ ಹಣದ ಮೂಲವನ್ನು ಮರೆಮಾಚುವಲ್ಲಿ ನೇರ ಪಾತ್ರ ವಹಿಸಿರುವುದು ಸಾಬೀತಾಗಿದೆ. ಹರಿಯಾಣದ ನಿವಾಸಿ ಆಕಾಶ್ ಎಂಬಾತ ತನ್ನ ಸ್ವಂತ ಖಾತೆಗೆ 1.95 ಕೋಟಿ ರೂಪಾಯಿ ವಂಚನೆಯ ಹಣವನ್ನು ಪಡೆದುಕೊಂಡು, ಅದೇ ದಿನ ಆ ಹಣವನ್ನು ತಕ್ಷಣವೇ ಇತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿ ಮನಿ ಲಾಂಡರಿಂಗ್ನಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ. ಕೋಲ್ಕತ್ತಾದ ರಾಜಾ ಕರ್ಮಾಕರ್ ಎಂಬಾತ ತನ್ನ ಸಂಸ್ಥೆಯ ಖಾತೆಗೆ 1.5 ಕೋಟಿ ರೂಪಾಯಿ ವಂಚನೆಯ ಹಣವನ್ನು ಪಡೆದಿದ್ದ. ಇನ್ನು ಜ್ಯೋತಿ ರಾಣಿ ಎಂಬ ಮಹಿಳೆ ತನ್ನ ಖಾತೆಗೆ ಬಂದ ಹಣದಲ್ಲಿ ಸ್ವಲ್ಪ ಭಾಗವನ್ನು ನಗದಾಗಿ ಹಿಂಪಡೆದು, ಬಾಕಿ ಹಣವನ್ನು ಇತರೆ ಖಾತೆಗಳಿಗೆ ರವಾನಿಸಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದಳು.
ಈ ಬೃಹತ್ ಜಾಲದಲ್ಲಿ ಭಾಗಿಯಾಗಿರುವ ಉಳಿದ ಆರೋಪಿಗಳು ಹಾಗೂ ಸೂತ್ರಧಾರರನ್ನು ಪತ್ತೆಹಚ್ಚಲು ಸಿಬಿಐ ಶೋಧ ಕಾರ್ಯವನ್ನು ಇನ್ನಷ್ಟು ತೀವ್ರಗೊಳಿಸಿದೆ. ಸುಪ್ರೀಂ ಕೋರ್ಟ್ ನೀಡಿರುವ ಸ್ಪಷ್ಟ ಮಾರ್ಗದರ್ಶನದಂತೆ ಡಿಜಿಟಲ್ ಅರೆಸ್ಟ್ ಮತ್ತು ಸಂಘಟಿತ ಸೈಬರ್ ಅಪರಾಧ ಜಾಲಗಳ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯೊಂದಿಗೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಸಿಬಿಐ ಬದ್ಧವಾಗಿದೆ. ದೇಶದ ನಾಗರಿಕರ ಸುರಕ್ಷತೆಗೆ ಕಂಟಕವಾಗಿರುವ ಪ್ರತಿಯೊಬ್ಬ ಅಪರಾಧಿಯನ್ನು ಕಾನೂನಿನ ಚೌಕಟ್ಟಿಗೆ ತಂದು ಶಿಕ್ಷೆ ಗುರಿಪಡಿಸುವವರೆಗೆ ಈ ತನಿಖೆ ಮುಂದುವರಿಯಲಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಎಟಿಎಂ ಕ್ಯಾಶ್ ವಾಹನ ಹಾಗೂ ಕೆಎಸ್ಆರ್ಟಿಸಿ ಬಸ್ ನಡುವೆ ರಸ್ತೆ ಅಪಘಾತ, ನಾಲ್ವರಿಗೆ ಗಂಭೀರ ಗಾಯ
