ಮೈಸೂರು: ರಾಜ್ಯದ ಅತ್ಯಂತ ಪ್ರಸಿದ್ಧ ಹಾಗೂ ವಿಶ್ವವಿಖ್ಯಾತ ವನ್ಯಜೀವಿ ಧಾಮಗಳಾದ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿ ನಡೆಸಲು ಕಾತುರದಿಂದ ಕಾಯುತ್ತಿದ್ದ ಪ್ರಕೃತಿ ಪ್ರೇಮಿಗಳಿಗೆ ಅರಣ್ಯ ಇಲಾಖೆ ತೀವ್ರ ಆಘಾತ ನೀಡಿದೆ. ಇಂದಿನಿಂದಲೇ ಜಾರಿಗೆ ಬರುವಂತೆ ಈ ಎರಡೂ ರಾಷ್ಟ್ರೀಯ ಉದ್ಯಾನವನಗಳಲ್ಲಿ ಜೀಪ್ ಹಾಗೂ ಬಸ್ ಸಫಾರಿ ದರಗಳನ್ನು ಗಣನೀಯವಾಗಿ ಹೆಚ್ಚಳ (Big News) ಮಾಡಲಾಗಿದೆ., ವಾರಾಂತ್ಯದಲ್ಲಿ ಕುಟುಂಬ ಸಮೇತ ಪ್ರವಾಸ ಕೈಗೊಳ್ಳುವ ಸಾರ್ವಜನಿಕರಿಗೆ ಈ ನಿರ್ಧಾರ ದೊಡ್ಡ ಆರ್ಥಿಕ ಹೊರೆಯನ್ನು ತಂದೊಡ್ಡಲಿದೆ.
ಬಸ್ ಮತ್ತು ಜೀಪ್ ಸಫಾರಿ ಶುಲ್ಕ ಹೆಚ್ಚಳ:
ಅರಣ್ಯ ಇಲಾಖೆ ಹೊರಡಿಸಿರುವ ನೂತನ ಪರಿಷ್ಕೃತ ದರಪಟ್ಟಿಯ ಪ್ರಕಾರ, ಬಸ್ ಸಫಾರಿಗೆ ತೆರಳುವ ವಯಸ್ಕರಿಗೆ ಪ್ರವೇಶ ಶುಲ್ಕವನ್ನು ಬರೋಬ್ಬರಿ 1,000 ರೂಪಾಯಿಗೆ ಹಾಗೂ ಮಕ್ಕಳಿಗೆ 500 ರೂಪಾಯಿಗೆ ನಿಗದಿಪಡಿಸಲಾಗಿದೆ. ಇನ್ನು ವನ್ಯಜೀವಿಗಳನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಲು ಬಯಸುವವರ ನೆಚ್ಚಿನ ಆಯ್ಕೆಯಾದ ಜೀಪ್ ಸಫಾರಿಗೆ ತೆರಳುವ ವಯಸ್ಕರಿಗೆ 1,500 ರೂಪಾಯಿ ಮತ್ತು ಮಕ್ಕಳಿಗೆ 750 ರೂಪಾಯಿ ಶುಲ್ಕ ನಿಗದಿ ಮಾಡಲಾಗಿದೆ. ಇದರಿಂದಾಗಿ ಕಾಡಿನ ಅನುಭವ ಪಡೆಯಲು ಬಯಸುವ ಪ್ರವಾಸಿಗರ ಜೇಬಿಗೆ ನೇರವಾಗಿ ಕತ್ತರಿ ಬಿದ್ದಂತಾಗಿದೆ.
ಕ್ಯಾಮೆರಾ ಹಾಗೂ ಪಾರ್ಕಿಂಗ್ ದರದಲ್ಲೂ ಏರಿಕೆ:
ಕೇವಲ ಪ್ರಯಾಣಿಕರ ಸಫಾರಿ ದರ ಮಾತ್ರವಲ್ಲದೆ, ವನ್ಯಜೀವಿ ಛಾಯಾಗ್ರಾಹಕರು ಮತ್ತು ಪ್ರವಾಸಿಗರು ಬಳಸುವ ಕ್ಯಾಮೆರಾಗಳ ಮೇಲೂ ಹೆಚ್ಚುವರಿ ಶುಲ್ಕ ವಿಧಿಸಲಾಗಿದೆ. 200 ಎಂಎಂ ಗಿಂತ ಹೆಚ್ಚಿನ ಸಾಮರ್ಥ್ಯದ ಪ್ರಬಲ ಲೆನ್ಸ್ ಕ್ಯಾಮೆರಾಗಳನ್ನು ಕಾಡಿನೊಳಗೆ ಒಯ್ಯಲು 1,500 ರೂಪಾಯಿ ಪ್ರತ್ಯೇಕ ಶುಲ್ಕ ನೀಡಬೇಕಾಗುತ್ತದೆ. ಇದರ ಜೊತೆಗೆ ಸಫಾರಿ ಕೇಂದ್ರಗಳ ಬಳಿ ವಾಹನ ನಿಲುಗಡೆ (ಪಾರ್ಕಿಂಗ್) ದರವನ್ನು ಕೂಡ ಪರಿಷ್ಕರಿಸಲಾಗಿದ್ದು, ಕಾರುಗಳಿಗೆ 100 ರೂಪಾಯಿ, ಲಘು ವಾಹನಗಳಿಗೆ 200 ರೂಪಾಯಿ ಹಾಗೂ ಬಸ್ಸ್‌ಗಳಿಗೆ 300 ರೂಪಾಯಿಗಳಂತೆ ಶುಲ್ಕ ನಿಗದಿಪಡಿಸಲಾಗಿದೆ.
ಇಂದಿನಿಂದಲೇ ಹೊಸ ನಿಯಮ ಜಾರಿ:
ಅರಣ್ಯ ಇಲಾಖೆ ಪ್ರಕಟಿಸಿರುವ ಈ ನೂತನ ಪರಿಷ್ಕೃತ ದರಗಳು ಬಂಡೀಪುರ ಪ್ರವಾಸೋದ್ಯಮ ವಲಯ, ನಾಗರಹೊಳೆ ಪರಿಸರ ಪ್ರವಾಸೋದ್ಯಮ ವಲಯ ಸೇರಿದಂತೆ ಪ್ರಮುಖ ಗೇಟ್‌ಗಳಾದ ಕಾಕನಕೋಟೆ, ದಮ್ಮನಕಟ್ಟೆ ಹಾಗೂ ನಾಣಚ್ಚಿ ಗೇಟ್‌ಗಳ ಎಲ್ಲಾ ಸಫಾರಿ ಕೇಂದ್ರಗಳಿಗೂ ತಕ್ಷಣದಿಂದಲೇ ಅನ್ವಯವಾಗಲಿವೆ. ಸಾಲು ಸಾಲು ರಜೆಗಳ ಸಮಯದಲ್ಲಿ ಹಾಗೂ ವಾರಾಂತ್ಯಗಳಲ್ಲಿ ಕಾಡಿನ ಸೌಂದರ್ಯ ಸವಿಯಲು ಯೋಜನೆ ರೂಪಿಸುತ್ತಿದ್ದ ಸಾಧಾರಣ ಕುಟುಂಬಗಳಿಗೆ ಮತ್ತು ಪ್ರವಾಸಿಗರಿಗೆ ಈ ದರ ಏರಿಕೆ ನುಂಗಲಾರದ ತಂಗೂಳಾಗಿ ಪರಿಣಮಿಸಿದೆ.
ಇದನ್ನೂ ಓದಿ: ನಿಗಮ ಮಂಡಳಿ ಅಧ್ಯಕ್ಷರಿಗೆ ರಾಜೀನಾಮೆ ನೀಡಲು ಸಿಎಂ ಡಿಕೆಶಿ ಖಡಕ್ ಸೂಚನೆ!
