ಬೆಂಗಳೂರು: ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರದ ರೂಪದಲ್ಲಿ ನೀಡಲಾಗುತ್ತಿರುವ ಮೊಟ್ಟೆಯ ದರವನ್ನು ಹೆಚ್ಚಿಸುವ ಕುರಿತು ಶೀಘ್ರದಲ್ಲೇ ಹಣಕಾಸು ಇಲಾಖೆಯೊಂದಿಗೆ ಮಾತುಕತೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ (Madhu Bangarappa) ಅವರು ಭರವಸೆ ನೀಡಿದ್ದಾರೆ.
ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ರಾಮೋಜಿಗೌಡ ಅವರು ಎತ್ತಿದ ವಿಷಯಕ್ಕೆ ಉತ್ತರಿಸಿದ ಸಚಿವರು, ಶಾಲಾ ಮಕ್ಕಳ ಪೋಷಕಾಂಶಗಳ ಮಟ್ಟವನ್ನು ಕಾಯ್ದುಕೊಳ್ಳಲು ಸರ್ಕಾರ ಬದ್ಧವಾಗಿದ್ದು, ಪ್ರಸ್ತುತ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಅನುದಾನ ಹೆಚ್ಚಿಸುವ ಪ್ರಸ್ತಾವನೆಯನ್ನು ಪರಿಶೀಲಿಸಲಾಗುತ್ತಿದೆ ಎಂದರು.
ವಿಧಾನಪರಿಷತ್‌ನಲ್ಲಿ ಮೊಟ್ಟೆ ದರ ಏರಿಕೆ ಧ್ವನಿ:
ಕಲಾಪದ ವೇಳೆ ಕಾಂಗ್ರೆಸ್ ಶಾಸಕ ರಾಮೋಜಿಗೌಡ ಮಾತನಾಡಿ, “ಸರ್ಕಾರ ಪ್ರಸ್ತುತ ಪ್ರತಿ ಮೊಟ್ಟೆಗೆ 6 ರೂಪಾಯಿ ಅನುದಾನ ನೀಡುತ್ತಿದೆ. ಆದರೆ ಮಾರುಕಟ್ಟೆಯಲ್ಲಿ ಕಳೆದ ಒಂದು ವರ್ಷದಿಂದಲೂ ಮೊಟ್ಟೆಯ ಬೆಲೆ 8 ರೂಪಾಯಿಗಿಂತ ಹೆಚ್ಚಾಗಿದೆ. ಸರ್ಕಾರ ನೀಡುವ 6 ರೂಪಾಯಿಯಲ್ಲಿ ಶಾಲಾ ಹಂತ ತಲುಪುವಾಗ ಕೇವಲ 5 ರೂಪಾಯಿ ಮಾತ್ರ ಸಿಗುತ್ತಿದ್ದು, ಇದರಿಂದ ಶಿಕ್ಷಕರು ಹಾಗೂ ಶಾಲಾ ಆಡಳಿತ ಮಂಡಳಿಗಳು ತೀವ್ರ ಸಂಕಷ್ಟ ಎದುರಿಸುತ್ತಿವೆ. ಹೀಗಾಗಿ ಸರ್ಕಾರ ತಕ್ಷಣವೇ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಹಣ ಬಿಡುಗಡೆ ಮಾಡಬೇಕು ಅಥವಾ ಮೊಟ್ಟೆ ಪೂರೈಕೆಯ ಹೊಣೆಯನ್ನು ಸಂಪೂರ್ಣವಾಗಿ ಖಾಸಗಿ ಏಜೆನ್ಸಿಗಳಿಗೆ ವಹಿಸಬೇಕು” ಎಂದು ತೀವ್ರವಾಗಿ ಒತ್ತಾಯಿಸಿದರು.
ಇದೇ ವೇಳೆ ಶಿಕ್ಷಕರ ಮೇಲೆ ಬೀಳುತ್ತಿರುವ ಬೋಧನೇತರ ಕೆಲಸಗಳ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ ರಾಮೋಜಿಗೌಡ, “ಶಿಕ್ಷಕರನ್ನು ಬೋಧನೆ ಹೊರತುಪಡಿಸಿ ಎಸ್‌ಐಆರ್ (SIR), ಚುನಾವಣಾ ಕರ್ತವ್ಯಗಳು ಹಾಗೂ ಜಾತಿ ಗಣತಿಯಂತಹ ಇತರ ಕ್ಷೇತ್ರ ಕಾರ್ಯಗಳಿಗೆ ವ್ಯಾಪಕವಾಗಿ ಬಳಸಿಕೊಳ್ಳಲಾಗುತ್ತಿದೆ. ಇದರಿಂದಾಗಿ ಶಾಲೆಗಳಲ್ಲಿ ಮಕ್ಕಳಿಗೆ ಸರಿಯಾಗಿ ಪಾಠ ಮಾಡಲು ಸಾಧ್ಯವಾಗುತ್ತಿಲ್ಲ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಿಕ್ಷಕರನ್ನು ಯಾವುದೇ ಕಾರಣಕ್ಕೂ ಬೋಧನೇತರ ಕಾರ್ಯಗಳಿಗೆ ನಿಯೋಜಿಸಬಾರದು” ಎಂದು ಸರ್ಕಾರದ ಗಮನ ಸೆಳೆದರು.
ರಾಷ್ಟ್ರೀಯ ದರ ಆಧರಿಸಿ ಕ್ರಮ: ಸಚಿವ ಮಧು ಬಂಗಾರಪ್ಪ
ಶಾಸಕರ ಪ್ರಶ್ನೆ ಹಾಗೂ ಆಕ್ಷೇಪಗಳಿಗೆ ಶಾಸನಸಭೆಯಲ್ಲಿ ಸುದೀರ್ಘ ಉತ್ತರ ನೀಡಿದ ಸಚಿವ ಮಧು ಬಂಗಾರಪ್ಪ, “ಸಾಮಾನ್ಯವಾಗಿ ನಾವು ರಾಷ್ಟ್ರೀಯ ಮಟ್ಟದಲ್ಲಿ ನಿರ್ಧಾರವಾಗುವ ಮೊಟ್ಟೆ ದರವನ್ನು ಆಧರಿಸಿ ರಾಜ್ಯದಲ್ಲೂ ದರ ನಿಗದಿಪಡಿಸುತ್ತೇವೆ. ವಿದ್ಯಾರ್ಥಿಗಳ ಹಾಜರಾತಿ ಕಡಿಮೆ ಇರುವ ಶಾಲೆಗಳಲ್ಲಿ ಮೊಟ್ಟೆಯ ಬಜೆಟ್ ಸರಿದೂಗುತ್ತಿದೆಯಾದರೂ, ಶೇ. 100 ರಷ್ಟು ಹಾಜರಾತಿ ಇರುವ ಶಾಲೆಗಳಲ್ಲಿ ಈ ದರ ವ್ಯತ್ಯಾಸದಿಂದ ನಿಜಕ್ಕೂ ಸಮಸ್ಯೆಯಾಗುತ್ತಿರುವುದು ನಮ್ಮ ಗಮನಕ್ಕೂ ಬಂದಿದೆ” ಎಂದರು.
ಮುಂದುವರಿದು ಮಾತನಾಡಿದ ಸಚಿವರು, “ರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತುತ ಮೊಟ್ಟೆಯ ದರ 7 ರೂಪಾಯಿಗೆ ತಲುಪಿದೆ. ಈ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ವಿತರಿಸುವ ಮೊಟ್ಟೆಯ ದರವನ್ನು ಹೆಚ್ಚಿಸಲು ಆರ್ಥಿಕ ಇಲಾಖೆಯ ಅನುಮೋದನೆ ಅಗತ್ಯವಿದೆ. ಶೀಘ್ರದಲ್ಲೇ ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಅಗತ್ಯ ಅನುದಾನ ಕಲ್ಪಿಸುವ ಮೂಲಕ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು” ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಆರ್‌ಎಸ್‌ಎಸ್ ಪ್ರಣಾಮ: ಬಿಜೆಪಿ ಎಂಎಲ್‌ಸಿ ರವಿಕುಮಾರ್ ವಿರುದ್ಧ ದೂರು
