TOP NEWS

Ethanol: ಹಳೆಯ ವಾಹನಗಳಿಗೆ ಇ10 ಪೆಟ್ರೋಲ್ ನೀಡಲು ಸಿಇಎ ಸಲಹೆ: ಪ್ರತ್ಯೇಕ ಇಂಧನ ಲಭ್ಯತೆಗೆ ಬಿಡುಗಡೆಯಾಯ್ತು ಹೊಸ ಪ್ರತಿಪಾದನೆ

CEA Advises Ethanol 10 Petrol for Older Vehicles Proposal for Separate Fuel Option Raised

ನವದೆಹಲಿ: ದೇಶಾದ್ಯಂತ ಶೇಕಡಾ 20 ರಷ್ಟು ಎಥನಾಲ್ ಮಿಶ್ರಿತ ‘ಇ20’ ಪೆಟ್ರೋಲ್ ವಿತರಣೆ ಜಾರಿಯಲ್ಲಿದ್ದರೂ, ಹಳೆಯ ವಾಹನಗಳ ಹಿತದೃಷ್ಟಿಯಿಂದ ‘ಇ10’ ಪೆಟ್ರೋಲ್ (Ethanol) ಅನ್ನು ಮತ್ತೆ ಮಾರುಕಟ್ಟೆಗೆ ತರಬೇಕು ಎಂದು ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ವಿ. ಅನಂತ ನಾಗೇಶ್ವರನ್ ಪ್ರತಿಪಾದಿಸಿದ್ದಾರೆ.

ಸಾರ್ವಜನಿಕರ ಆತಂಕವೂ ಕಡಿಮೆಯಾಗಲಿದೆ

ದೈತ್ಯ ಎಥನಾಲ್ ಯೋಜನೆಯನ್ನು ಮುಂದುವರಿಸುತ್ತಲೇ, ಹಳೆಯ ವಾಹನ ಮಾಲೀಕರಿಗೆ ಇ10 ಅಥವಾ ಇ20 ಪೆಟ್ರೋಲ್ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಬೇಕು ಎಂದು ಅವರು ಹಾಗೂ ಆಕಾಶ್ ಪೂಜಾರಿ ಜಂಟಿಯಾಗಿ ಬರೆದಿರುವ ಲೇಖನದಲ್ಲಿ ಉಲ್ಲೇಖಿಸಿದ್ದಾರೆ. ದೇಶದಲ್ಲಿ ಸುಮಾರು 7.5 ರಿಂದ 8 ಕೋಟಿ ದ್ವಿಚಕ್ರ ವಾಹನಗಳು ಇ10 ಮಾದರಿಯ ಇಂಧನಕ್ಕೆ ತಕ್ಕಂತೆ ತಯಾರಾಗಿದ್ದು, ಇ20 ಬಳಕೆಯಿಂದ ಇಂಜಿನ್ನಲ್ಲಿನ ರಬ್ಬರ್ ಸೀಲ್‌ಗಳು ಮತ್ತು ಕಾರ್ಬ್ಯುರೇಟರ್ ಭಾಗಗಳು ಬೇಗನೆ ಹಾಳಾಗುವ ಆತಂಕವಿದೆ ಎಂದು ನಾಗೇಶ್ವರನ್ ಕಳವಳ ವ್ಯಕ್ತಪಡಿಸಿದ್ದಾರೆ. ಹಳೆಯ ವಾಹನಗಳಿಗೆ ರೇಟ್ರೋಫಿಟಿಂಗ್ (ಬದಲಾವಣೆ) ಮಾಡುವವರೆಗೆ ಇ10 ಇಂಧನ ಲಭ್ಯವಿದ್ದರೆ ಸಾರ್ವಜನಿಕರ ಆತಂಕವೂ ಕಡಿಮೆಯಾಗಲಿದೆ ಎಂಬುದು ಅವರ ಅಭಿಪ್ರಾಯ.

ಇದೇ ವೇಳೆ, ಇ20 ಪೆಟ್ರೋಲ್‌ನಿಂದ ಮೈಲೇಜ್ ಶೇ. 30 ರಷ್ಟು ಕಡಿಮೆಯಾಗುತ್ತದೆ ಎಂಬ ಅಪಪ್ರಚಾರವನ್ನು ತಳ್ಳಾಕಿರುವ ಅವರು, ಶೇ. 20 ಎಥನಾಲ್ ಮಿಶ್ರಣದಿಂದ ಕೇವಲ ಶೇ. 6 ರಿಂದ 7 ರಷ್ಟು ಮಾತ್ರ ಇಂಧನ ಸಾಮರ್ಥ್ಯ ವ್ಯತ್ಯಾಸವಾಗುತ್ತದೆ ಎಂದಿದ್ದಾರೆ. ಆದರೆ ಆಹಾರ ಭದ್ರತೆ, ನೀರು ಮತ್ತು ಜಮೀನಿನ ಬಳಕೆಯ ಮೇಲಾಗುವ ಪರಿಣಾಮಗಳನ್ನು ಪರಿಗಣಿಸಿ ಧೋರಣೆ ರೂಪಿಸುವುದು ಅಗತ್ಯ ಎಂದು ಅವರು ಹೇಳಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ಧ ಅರವಿಂದ್ ಕೇಜ್ರಿವಾಲ್ ಬೇಸರ

ಈ ವಿಚಾರ ರಾಜಕೀಯ ರಂಗದಲ್ಲೂ ಸದ್ದು ಮಾಡಿದ್ದು, ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಸಿಇಎ ಲೇಖನವನ್ನು ಹಂಚಿಕೊಂಡು ಕೇಂದ್ರ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ, ಆಲ್ ಇಂಡಿಯಾ ಡಿಸ್ಟಿಲರ್ಸ್ ಅಸೋಸಿಯೇಷನ್ (ಎಐಡಿಎ) ಉಪಾಧ್ಯಕ್ಷ ಕುಶಾಲ್ ಮಿತ್ತಲ್ ಈ ಸಲಹೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. 2016 ರಿಂದಲೇ ಪರೀಕ್ಷೆ ನಡೆಸಿ 2022 ರಲ್ಲಿ ವಾಹನ ತಯಾರಕರ ಜೊತೆ ಚರ್ಚಿಸಿಯೇ ಇ20 ಯೋಜನೆಯನ್ನು ತರಲಾಗಿದೆ. ಕಚ್ಚಾ ತೈಲ ಆಮದು ಕಡಿಮೆ ಮಾಡಲು ಮತ್ತು ದೇಶೀಯ ರೈತರಿಗೆ ಬೆಂಬಲ ನೀಡಲು ಇ20 ಅಗತ್ಯವಿದ್ದು, ಭಾವನಾತ್ಮಕ ಕಾರಣಗಳಿಗೆ ಯಾವುದೇ ಹಿಂಜರಿಕೆ ಸರಿಯಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ಹಳೆಯ ವಾಹನಗಳು ರಸ್ತೆಯಿಂದ ತೆರವಾಗಲು ವರ್ಷಗಳೇ ಬೇಕಾಗುವುದರಿಂದ, ಪೆಟ್ರೋಲ್ ಬಂಕ್‌ಗಳಲ್ಲಿ ಇ10 ಮತ್ತು ಇ20 ಎರಡೂ ಇಂಧನಗಳನ್ನು ಲಭ್ಯವಾಗಿಸುವ ಕುರಿತು ಸರ್ಕಾರ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಅಮೆರಿಕ ಭಾರತೀಯರಿಗೆ ಗಗನಕುಸುಮವೇ?

Leave a Reply

Your email address will not be published. Required fields are marked *