ರಾಯ್ಪುರ: ‘ಮಾವೋವಾದಿ’ ಅಥವಾ ‘ನಕ್ಸಲೈಟ್’ ಎಂಬ ಪದವನ್ನು ಕೇಳಿದ ತಕ್ಷಣ ನಮಗೆ ನೆನಪಿಗೆ ಬರುವುದು ದಟ್ಟ ಅರಣ್ಯದೊಳಗೆ ಆಧುನಿಕ ಶಸ್ತ್ರಾಸ್ತ್ರಗಳನ್ನು ಹಿಡಿದು ನಿಂತಿರುವ ಹೋರಾಟಗಾರರು. ಆದರೆ, ಹಿಂಸೆಯ ಹಾದಿ ಬಿಟ್ಟು ಸಮಾಜದ ಮುಖ್ಯವಾಹಿನಿಗೆ ಮರಳಿದ ನಂತರ ಅವರ ಜೀವನ ಎಷ್ಟು ಅದ್ಭುತವಾಗಿ ಬದಲಾಗಬಹುದು ಎಂಬುದಕ್ಕೆ ಛತ್ತೀಸ್ಗಢದಲ್ಲಿ ನಡೆದ ಅಪರೂಪದ ಘಟನೆಯೊಂದು ಸಾಕ್ಷಿಯಾಗಿದೆ. ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಅಂಗವಾಗಿ ರಾಯ್ಪುರದಲ್ಲಿ ಆಯೋಜಿಸಲಾಗಿದ್ದ ವಿಶೇಷ ಫ್ಯಾಷನ್ ಶೋನಲ್ಲಿ ಛತ್ತೀಸ್ಗಢದ ಬಸ್ತಾರ್ ವಲಯದ ಮಾಜಿ ಮಹಿಳಾ ಮಾವೋವಾದಿಗಳು ಅತ್ಯಂತ ಆತ್ಮವಿಶ್ವಾಸದಿಂದ ರ್ಯಾಂಪ್ ವಾಕ್ (Ramp Walk) ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಕೋಸಾ ಸಿಲ್ಕ್ ಉಟ್ಟು ಕ್ಯಾಟ್ವಾಕ್
ರಾಯ್ಪುರದ ಪಂಡಿತ್ ದೀನ್ದಯಾಳ್ ಉಪಾಧ್ಯಾಯ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಒಂದಾನೊಂದು ಕಾಲದಲ್ಲಿ ಕೈಯಲ್ಲಿ ಗನ್ ಹಿಡಿಯುತ್ತಿದ್ದ ಈ ಮಹಿಳೆಯರು, ಪ್ರಾದೇಶಿಕ ಉಡುಪಾದ ಸಾಂಪ್ರದಾಯಿಕ ‘ಕೋಸಾ ಸಿಲ್ಕ್’ ಹಾಗೂ ಕೈಮಗ್ಗದ ಆಕರ್ಷಕ ಸೀರೆಗಳನ್ನು ಉಟ್ಟು ಕ್ಯಾಟ್ವಾಕ್ ಮಾಡಿದರು. ಇವರ ಈ ಅದ್ಭುತ ಪರಿವರ್ತನೆ ಮತ್ತು ಸೌಂದರ್ಯವನ್ನು ಕಂಡು ಸಬೀಕರು ಚಪ್ಪಾಳೆ ತಟ್ಟುವ ಮೂಲಕ ಪ್ರೋತ್ಸಾಹಿಸಿದರು. ಇದು ಕೇವಲ ಒಂದು ಸಾಧಾರಣ ಫ್ಯಾಷನ್ ಶೋ ಆಗಿರಲಿಲ್ಲ, ಬದಲಿಗೆ ಹಿಂಸಾಚಾರ ಮತ್ತು ಸಂಘರ್ಷದ ಬದುಕನ್ನು ತೊರೆದು ಸಮಾಜದ ಮುಖ್ಯವಾಹಿನಿಗೆ ಬಂದು ಗೌರವದ ಜೀವನ ನಡೆಸಲು ಬಯಸಿರುವ ಮಹಿಳೆಯರ ಪುನರ್ವಸತಿ, ಸಬಲೀಕರಣ ಮತ್ತು ಹೊಸ ಜೀವನದ ಸಂಕೇತವಾಗಿತ್ತು. ಈ ವಿಶೇಷ ಸಂದರ್ಭದಲ್ಲಿ ಛತ್ತೀಸ್ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯ್ ಅವರು ಈ ಮಹಿಳೆಯರನ್ನು ಭೇಟಿಯಾಗಿ ಅವರೊಂದಿಗೆ ಸಂವಾದ ನಡೆಸಿ, ಅವರ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು.
#WATCH | Raipur, Chhattisgarh: Former women Naxals, who once carried weapons in the dense forests of Bastar, walked the ramp to huge applause at a National Handloom Day event in Raipur after joining the mainstream. (07.08) pic.twitter.com/51mc8lEXWE
— ANI (@ANI) August 13, 2026
ದಶಕಗಳಿಂದ ಎಡಪಂಥೀಯ ಉಗ್ರಗಾಮಿ ಪೀಡಿತ ಪ್ರದೇಶಗಳಿಂದ ಬಂದಿದ್ದ ಈ ಮಹಿಳೆಯರು ಇಂದು ನವ ಜೀವನವನ್ನು ಕಟ್ಟಿಕೊಳ್ಳುತ್ತಿದ್ದಾರೆ. ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ ಬಳಿಕ ಇವರಲ್ಲಿ ಹಲವರು ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ, ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ ಮತ್ತು ತಮಗೆ ಸಿಗುತ್ತಿರುವ ಹೊಸ ಅವಕಾಶಗಳನ್ನು ಬಳಸಿಕೊಂಡು ಸಮಾಜದಲ್ಲಿ ಗೌರವಾನ್ವಿತ ಸ್ಥಾನ ಗಳಿಸುತ್ತಿದ್ದಾರೆ. ವೇದಿಕೆಯ ಮೇಲೆ ಅವರು ತೋರಿದ ಧೈರ್ಯ ಮತ್ತು ಆತ್ಮವಿಶ್ವಾಸವು, ದಾರಿ ತಪ್ಪಿದ ಯುವಜನತೆಗೆ ಮುಖ್ಯವಾಹಿನಿಗೆ ಮರಳಲು ಹೊಸ ಭರವಸೆ ಮತ್ತು ಪ್ರೇರಣೆ ನೀಡುವಂತಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್
ಸದ್ಯ ಈ ವಿಶಿಷ್ಟ ರ್ಯಾಂಪ್ ವಾಕ್ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ದೇಶಾದ್ಯಂತ ನೆಟ್ಟಿಗರಿಂದ ಪ್ರಶಂಸೆಯ ಮಹಾಪೂರವೇ ಹರಿದುಬರುತ್ತಿದೆ. ಕೆಲವು ವರ್ಷಗಳ ಹಿಂದೆ ಇಂತಹದೊಂದು ದೃಶ್ಯವನ್ನು ಊಹಿಸಿಕೊಳ್ಳಲೂ ಸಾಧ್ಯವಿರಲಿಲ್ಲ ಎಂದು ಹಲವರು ಉದ್ಗರಿಸಿದ್ದಾರೆ. ಎಕ್ಸ್ (ಟ್ವಿಟರ್) ಬಳಕೆದಾರರೊಬ್ಬರು ಪ್ರತಿಕ್ರಿಯಿಸಿ, “ಇದು ನಂಬಲಸಾಧ್ಯವಾದ ದೃಶ್ಯ, ಮಹಿಳಾ ಸಬಲೀಕರಣದ ನಿಜವಾದ ರೂಪ ಇಲ್ಲಿದೆ” ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು, “ಇವರನ್ನು ನೋಡಿದರೆ ಹಿಂದೆ ನಕ್ಸಲರಾಗಿದ್ದರು ಎಂದು ನಂಬಲು ಸಾಧ್ಯವೇ ಇಲ್ಲ, ಇಂತಹ ಸಕಾರಾತ್ಮಕ ಸುದ್ದಿಗಳು ಮಾಧ್ಯಮಗಳಲ್ಲಿ ಇನ್ನು ಹೆಚ್ಚು ಪ್ರಚಾರ ಪಡೆಯಬೇಕು” ಎಂದು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆಯಾಗಿ, ಕತ್ತಲೆಯ ಹಾದಿಯಿಂದ ಬಣ್ಣದ ಲೋಕದ ರ್ಯಾಂಪ್ ವರೆಗಿನ ಈ ಮಾಜಿ ಮಹಿಳಾ ನಕ್ಸಲರ ಜರ್ನಿ ಇಡೀ ದೇಶದ ಗಮನ ಸೆಳೆದಿದೆ.
ಇದನ್ನೂ ಓದಿ: ಇನ್ಮುಂದೆ ‘ವಂದೇ ಮಾತರಂ’ಗೆ ಅಡ್ಡಿಪಡಿಸಿದರೆ 3 ವರ್ಷ ಜೈಲು; ರಾಷ್ಟ್ರಪತಿ ಅಂಕಿತ!
