ಬೆಂಗಳೂರು: ರಾಜಧಾನಿಯ (Bengaluru) ಡಾ. ರಾಜ್ಕುಮಾರ್ ಸ್ಮಾರಕದ ಬಳಿ ನಡೆಯುತ್ತಿದ್ದ ಬಿಡಿಎ (BDA) ಅಂಡರ್ಪಾಸ್ (Tragedy) ಕಾಮಗಾರಿ ವೇಳೆ ಭೀಕರ ದುರಂತ ಸಂಭವಿಸಿದೆ. ಏಕಾಏಕಿ ಮಣ್ಣು ಕುಸಿದು ಬಿದ್ದ ಪರಿಣಾಮ ಇಬ್ಬರು ಕಾರ್ಮಿಕರು ದುರ್ಮರಣಕ್ಕೀಡಾಗಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಎಫ್ಟಿಐ (FTI) ಸರ್ಕಲ್ ಬಳಿ ಈ ಘಟನೆ ನಡೆದಿದೆ.
ಘಟನೆಯ ವಿವರ: ಎಫ್ಟಿಐ ಸರ್ಕಲ್ ಬಳಿ ಬಿಡಿಎ ವತಿಯಿಂದ ಅಂಡರ್ಪಾಸ್ ನಿರ್ಮಾಣಕ್ಕಾಗಿ ಸುಮಾರು 20 ಅಡಿಯಷ್ಟು ಆಳದ ಬೃಹತ್ ಗುಂಡಿ ತೋಡಲಾಗಿತ್ತು. ಆರ್ಸಿಸಿ (RCC) ಅಳವಡಿಸಲು ಗುಂಡಿಯೊಳಗೆ ಸಂಗ್ರಹವಾಗಿದ್ದ ನೀರನ್ನು ಹೊರಹಾಕುತ್ತಿದ್ದಾಗ ಈ ದುರಂತ ಸಂಭವಿಸಿದೆ. ಈ ವೇಳೆ ಸ್ಥಳದಲ್ಲಿ ಐದು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಮಣ್ಣು ಜರುಗುತ್ತಿರುವುದನ್ನು ಗಮನಿಸಿದ ಮೂವರು ಕಾರ್ಮಿಕರು ತಕ್ಷಣವೇ ಓಡಿ ಬಚಾವಾಗಿದ್ದಾರೆ. ಆದರೆ, ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿಕೊಂಡಿದ್ದಾರೆ.
ಸ್ಥಳೀಯರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಜಂಟಿಯಾಗಿ ತಕ್ಷಣವೇ ರಕ್ಷಣಾ ಕಾರ್ಯಾಚರಣೆ ನಡೆಸಿದರಾದರೂ ಇಬ್ಬರು ಕಾರ್ಮಿಕರನ್ನು ಬದುಕಿಸಲು ಸಾಧ್ಯವಾಗಿಲ್ಲ. ಮಣ್ಣಿನಡಿ ಹೂತುಹೋಗಿದ್ದ ಪರಿಮಳ್ (31) ಎಂಬ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮತ್ತೊಬ್ಬ ಕಾರ್ಮಿಕ ಸೋನಾರಾಮ್ (26) ಎಂಬಾತನನ್ನು ತೀವ್ರ ಆಟಾಟೋಪದ ನಂತರ ಹೊರತೆಗೆದು ಕಣ್ವ ಆಸ್ಪತ್ರೆಗೆ ದಾಖಲಿಸುವ ಮಾರ್ಗಮಧ್ಯೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾನೆ. ಘಟನೆಯಲ್ಲಿ ಸದಾನಂದ್, ಸುನೀಲ್ ಹಾಗೂ ಇಮ್ತಿಯಾಯಾಜ್ ಎಂಬುವವರು ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ತನಿಖೆಗೆ ಬಿಡಿಎ ಆಯುಕ್ತರ ಆದೇಶ: ದುರಂತದ ಕುರಿತು ಪ್ರತಿಕ್ರಿಯಿಸಿರುವ ಬಿಡಿಎ ಆಯುಕ್ತ ಕ್ಯಾಪ್ಟನ್ ಮಣಿವಣ್ಣನ್, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕುತ್ತಿದ್ದಾರೆ. ಗಾಯಾಳುಗಳಿಗೆ ಅತ್ಯುತ್ತಮ ವೈದ್ಯಕೀಯ ನೆರವು ನೀಡಲು ಸೂಚಿಸಲಾಗಿದೆ. ನಿರ್ಲಕ್ಷ್ಯ ವಹಿಸಿದ ಗುತ್ತಿಗೆದಾರರು ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ಮುಂದಿನ 24 ಗಂಟೆಗಳ ಒಳಗೆ ಸೂಕ್ತ ಪರಿಹಾರ ಧನ ವಿತರಿಸಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಜೊತೆಗೆ ಈ ಇಡೀ ಅವಘಡದ ಕುರಿತು ತಕ್ಷಣವೇ ಸಮಗ್ರ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಕಲಬುರಗಿಯಲ್ಲಿ ಭೀಕರ ದುರಂತ: ಪತ್ನಿ ಮೇಲಿನ ಅನುಮಾನಕ್ಕೆ ಮನೆಯಲ್ಲೇ ಜಿಲೆಟಿನ್ ಬ್ಲಾಸ್ಟ್; ತಂದೆ, ಮಗಳು ಸಾವು!
ಕಲಬುರಗಿ: ಪತ್ನಿಯ ನಡತೆಯ ಮೇಲೆ ಅನುಮಾನಗೊಂಡು ವ್ಯಕ್ತಿಯೊಬ್ಬ ಇಡೀ ಕುಟುಂಬವನ್ನೇ ಮುಗಿಸಲು ಹೋಗಿ, ತಾನೂ ಸೇರಿದಂತೆ ಮಗಳನ್ನು ಬಲಿಪಡೆದಿರುವ (Crime) ಭೀಕರ ಘಟನೆ ಆಳಂದ ತಾಲೂಕಿನ ಮಟಕಿ ತಾಂಡಾದಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದೆ. ಮನೆಯೊಳಗೆ ಜಿಲೆಟಿನ್ ಕಡ್ಡಿಗಳನ್ನು ಸ್ಫೋಟಿಸಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಪತ್ನಿ ಸೇರಿ ನಾಲ್ವರು ರಕ್ತದ ಮಡುವಿನಲ್ಲಿ ಬಿದ್ದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಏನಿದು ಘಟನೆ?
ಶಿವಲಾಲ್ ಬಲಿರಾಮ್ ರಾಠೋಡ್ (50) ಹಾಗೂ ಈತನ 15 ವರ್ಷದ ಮಗಳು ಮೀರಾ ಜಿಲೆಟಿನ್ ಬ್ಲಾಸ್ಟ್ನ ತೀವ್ರತೆಗೆ ಪ್ರಾಣ ಕಳೆದುಕೊಂಡ ದುರ್ದೈವಿಗಳು. ಆರೋಪಿ ಶಿವಲಾಲ್ ಸ್ಥಳೀಯ ಕಲ್ಲು ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿಂದಲೇ ಯಾರಿಗೂ ತಿಳಿಯದಂತೆ ಜಿಲೆಟಿನ್ ಕಡ್ಡಿಗಳನ್ನು ಮನೆಗೆ ತಂದಿಟ್ಟುಕೊಂಡಿದ್ದ ಎನ್ನಲಾಗಿದೆ. ಕಳೆದ ಕೆಲವು ದಿನಗಳಿಂದ ಪತ್ನಿಯ ಚಾರಿತ್ರ್ಯದ ಮೇಲೆ ತೀವ್ರವಾಗಿ ಅನುಮಾನ ಪಡುತ್ತಿದ್ದ ಈತ, ಮಂಗಳವಾರ ಬೆಳಗ್ಗೆ ಕುಟುಂಬದವರೆಲ್ಲರೂ ಮನೆಯಲ್ಲೇ ಇದ್ದ ಸಂದರ್ಭದಲ್ಲಿ ಏಕಾಏಕಿ ಸ್ಫೋಟಕಕ್ಕೆ ಬೆಂಕಿ ಹಚ್ಚಿದ್ದಾನೆ.
4 ಜನರ ಪರಿಸ್ಥಿತಿ ಚಿಂತಾಜನಕ
ಜಿಲೆಟಿನ್ ಕಡ್ಡಿಗಳು ಭೀಕರವಾಗಿ ಸ್ಫೋಟಗೊಂಡ ರಭಸಕ್ಕೆ ಮನೆ ಜರ್ಜರಿತವಾಗಿದ್ದು, ಶಿವಲಾಲ್ ಪತ್ನಿ ಸವಿತಾ ಹಾಗೂ ಮನೆಯಲ್ಲಿದ್ದ ಪ್ರಕಾಶ್, ಸುರೇಖಾ ಮತ್ತು ವಿವೇಕ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಮುಂದೂಡಿಕೆ; ನಟ ದರ್ಶನ್ ಗ್ಯಾಂಗ್ಗೆ ತಾತ್ಕಾಲಿಕ ರಿಲೀಫ್!
