TOP NEWS

Amarnath Yatra: ಮಳೆ ಹಾಗೂ ಪ್ರವಾಹದ ಭೀತಿ, ಸ್ಥಗಿತಗೊಂಡ ಅಮರನಾಥ ಯಾತ್ರೆ

Amarnath Yatra Halted Temporarily Amid Flash Flood and Landslide Warnings

ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಹವಾಮಾನ ವೈಪರೀತ್ಯ ಹಾಗೂ ಮುಂದಿನ ಕೆಲವು ದಿನಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ, ಜಮ್ಮುವಿನಿಂದ ಆರಂಭವಾಗುವ ಪ್ರಸಿದ್ಧ ಶ್ರೀ ಅಮರನಾಥ ಯಾತ್ರೆಯನ್ನು (Amarnath Yatra) ಶನಿವಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದರೊಂದಿಗೆ ಇತ್ತೀಚಿನ ದಿನಗಳಲ್ಲಿ ಯಾತ್ರೆಗೆ ಬರುವ ಭಕ್ತರ ಸಂಖ್ಯೆಯಲ್ಲೂ ಇಳಿಮುಖವಾಗಿರುವುದು ಕೂಡ ಈ ನಿರ್ಧಾರಕ್ಕೆ ಮತ್ತೊಂದು ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಯಾಣಕ್ಕೆ ಅನುಮತಿ ನೀಡದ ಅಧಿಕಾರಿಗಳು

ಮುಂಜಾಗ್ರತಾ ಕ್ರಮವಾಗಿ ಜಮ್ಮುವಿನ ಭಗವತಿನಗರ ಮೂಲ ಶಿಬಿರದಿಂದ ಕಾಶ್ಮೀರ ಕಣಿವೆಯತ್ತ ಹೊರಡಬೇಕಿದ್ದ ಯಾತ್ರಿಕರ ಯಾವುದೇ ಹೊಸ ತಂಡಕ್ಕೆ ಶನಿವಾರ ಬೆಳಿಗ್ಗೆ ಪ್ರಯಾಣ ಬೆಳೆಸಲು ಅನುಮತಿ ನೀಡಿಲ್ಲ. ಸದ್ಯದ ಪರಿಸ್ಥಿತಿಯನ್ನು ಜಿಲ್ಲಾಡಳಿತವು ಹತ್ತಿರದಿಂದ ಗಮನಿಸುತ್ತಿದ್ದು, ಹವಾಮಾನದ ಏರುಪೇರು ಹಾಗೂ ಕಾಶ್ಮೀರವನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಪ್ರಮುಖ ರಸ್ತೆಯಾದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಸ್ಥಿತಿಗತಿಯನ್ನು ಪರಿಶೀಲಿಸಿ ಮುಂದಿನ ದಿನಗಳಲ್ಲಿ ಭಕ್ತರ ಸಂಚಾರದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯ ಪ್ರಕಾರ, ಜಮ್ಮು ವಲಯದ ಕೆಲವು ಭಾಗಗಳಲ್ಲಿ ಆಗಸ್ಟ್ 11 ರವರೆಗೆ ಭಾರಿ ನಡುಮಳೆಯಾಗುವ ಸಾಧ್ಯತೆಯಿದ್ದು, ಹಠಾತ್ ಪ್ರವಾಹ ಹಾಗೂ ಭೂಕುಸಿತ ಉಂಟಾಗುವ ಆತಂಕವಿದೆ. ಇನ್ನು ಶನಿವಾರ ಮುಂಜಾನೆ ಈ ಭಾಗದಲ್ಲಿ ಸಾಧಾರಣ ಮಳೆಯಾಗಿದ್ದರೂ ಸಹ, ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸದ್ಯಕ್ಕೆ ವಾಹನ ಸಂಚಾರ ಸುಗಮವಾಗಿದೆ ಎಂದು ಸಂಚಾರ ನಿಯಂತ್ರಣ ಕೊಠಡಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಆಗಸ್ಟ್‌ 28 ರಂದು ಮುಕ್ತಾಯವಾಗಲಿದೆ ಯಾತ್ರೆ

ದಕ್ಷಿಣ ಕಾಶ್ಮೀರ ಹಿಮಾಲಯದ ಸುಮಾರು 3,880 ಮೀಟರ್ ಎತ್ತರದಲ್ಲಿರುವ ಪವಿತ್ರ ಅಮರನಾಥ ಗುಹಾ ದೇವಾಲಯಕ್ಕೆ ವಾರ್ಷಿಕ ತೀರ್ಥಯಾತ್ರೆಯು ಜುಲೈ 3 ರಂದು ಆರಂಭವಾಗಿದ್ದು, ರಕ್ಷಾಬಂಧನದ ದಿನವಾದ ಆಗಸ್ಟ್ 28 ರಂದು ಮುಕ್ತಾಯಗೊಳ್ಳಲಿದೆ. ಈ ಬಾರಿಯ 57 ದಿನಗಳ ಸುದೀರ್ಘ ಯಾತ್ರೆಯಲ್ಲಿ ಇದುವರೆಗೆ ದಾಖಲೆಯ 4.75 ಲಕ್ಷಕ್ಕೂ ಹೆಚ್ಚು ಭಕ್ತರು ಪವಿತ್ರ ಶಿವಲಿಂಗದ ದರ್ಶನ ಪಡೆದಿದ್ದಾರೆ ಎಂದು ತೀರ್ಥಯಾತ್ರಾ ಮಂಡಳಿ ಮಾಹಿತಿ ನೀಡಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿಯಾದ ರಾಘವ್ ಚಡ್ಡಾ: ‘ಎಂದಿಗೂ ನೆನಪಿನಲ್ಲಿ ಉಳಿಯುವ ಬೆಳಗು’ ಎಂದ ಸಂಸದ!

Leave a Reply

Your email address will not be published. Required fields are marked *