ಟೆಹ್ರಾನ್: ಟರ್ಕಿ ಮತ್ತು ಪಾಕಿಸ್ತಾನದೊಂದಿಗೆ ಸೌದಿ ಅರೇಬಿಯಾ ಮಾಡಿಕೊಂಡಿರುವ ಹೊಸ ಜಂಟಿ ರಕ್ಷಣಾ ಒಪ್ಪಂದವನ್ನು ಇರಾನ್ ತೀವ್ರವಾಗಿ ಟೀಕಿಸಿದೆ. ಈ ಕಾಗದದ ಒಪ್ಪಂದಗಳು ಸೌದಿಗೆ ಶಾಶ್ವತ ಭದ್ರತೆಯನ್ನು ತಂದುಕೊಡಲು ಸಾಧ್ಯವಿಲ್ಲ ಎಂದು ಇರಾನ್ (Iran) ಸಂಸತ್ತಿನ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿ ಸಮಿತಿಯ ಸದಸ್ಯ ಇಬ್ರಾಹಿಂ ರೆಜಾಯಿ ವ್ಯಂಗ್ಯವಾಡಿದ್ದಾರೆ.
ಅಮೆರಿಕಕ್ಕೆ ಸಂಪೂರ್ಣವಾಗಿ ಶರಣಾಗಿದ್ದರೂ ಸೌದಿಗೆ ಭದ್ರತೆ ಸಿಗಲಿಲ್ಲ
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಈ ಕುರಿತು ಬರೆದುಕೊಂಡಿರುವ ಅವರು, ವರ್ಷಗಳ ಕಾಲ ಅಮೆರಿಕಕ್ಕೆ ಸಂಪೂರ್ಣವಾಗಿ ಶರಣಾಗಿದ್ದರೂ ಸೌದಿಗೆ ಭದ್ರತೆ ಸಿಗಲಿಲ್ಲ. ಹಾಗೆಯೇ ಈಗ ಟರ್ಕಿ ಮತ್ತು ಪಾಕಿಸ್ತಾನದ ಜತೆಗಿನ ಒಪ್ಪಂದದಿಂದಲೂ ಯಾವುದೇ ಪ್ರಯೋಜನವಾಗುವುದಿಲ್ಲ ಎಂಬುದನ್ನು ಸೌದಿ ಅರೇಬಿಯಾ ತಿಳಿದುಕೊಳ್ಳಬೇಕು ಎಂದು ಹೇಳಿದ್ದಾರೆ. ಸೌದಿ ತನ್ನ ನೀತಿಗಳನ್ನು ತಿದ್ದುಕೊಂಡರೆ, ಭದ್ರತೆಗಾಗಿ ಇತರ ದೇಶಗಳ ಮುಂದೆ “ಬೇಡುವ” ಅಗತ್ಯ ಬರುವುದಿಲ್ಲ ಎಂದೂ ಅವರು ಕುಟುಕಿದ್ದಾರೆ.
ಇತ್ತೀಚೆಗೆ ಸೌದಿ ಅರೇಬಿಯಾದ ಮೆಕ್ಕಾದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಸೌದಿಯ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್, ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್ ಮತ್ತು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಅವರು ‘ಮೆಕ್ಕಾ ಜಂಟಿ ರಕ್ಷಣಾ ಒಪ್ಪಂದ’ಕ್ಕೆ ಸಹಿ ಹಾಕಿದ್ದರು. ಪ್ರಸ್ತುತ ಇರಾನ್ ಹಾಗೂ ಅಮೆರಿಕ ನಡುವೆ ನಡೆಯುತ್ತಿರುವ ಯುದ್ಧವು ಪರ್ಷಿಯನ್ ಕೊಲ್ಲಿ ಮತ್ತು ಕೆಂಪು ಸಮುದ್ರದ ಹಡಗು ಸಂಚಾರಕ್ಕೂ ಧಕ್ಕೆ ತಂದಿರುವ ಬೆನ್ನಲ್ಲೇ ಈ ಮೂರು ದೇಶಗಳು ರಕ್ಷಣಾ ಒಪ್ಪಂದ ಮಾಡಿಕೊಂಡಿವೆ.
ಸೌದಿಯ ಸುರಕ್ಷತೆ ಹೆಚ್ಚಾಗುವುದಿಲ್ಲ
ಸೌದಿ ಅರೇಬಿಯಾದ ತೈಲ ಸಂಸ್ಕರಣಾಗಾರಗಳು ಮತ್ತು ಪ್ರಮುಖ ಮೂಲಸೌಕರ್ಯಗಳ ಮೇಲೆ ಇರಾನ್ ಹಾಗೂ ಹೌತಿ ಬಂಡುಕೋರರು ಸರಣಿ ಕ್ಷಿಪಣಿ, ಡ್ರೋನ್ ದಾಳಿಗಳನ್ನು ನಡೆಸಿದ್ದವು. ಈ ಹಿನ್ನೆಲೆಯಲ್ಲಿ ತನ್ನ ಭದ್ರತೆಯನ್ನು ಬಲಪಡಿಸಿಕೊಳ್ಳಲು ಸೌದಿ ಈ ನಿರ್ಧಾರಕ್ಕೆ ಬಂದಿದೆ. ಈ ಒಪ್ಪಂದದ ಪ್ರಕಾರ, ಮೂರು ದೇಶಗಳಲ್ಲಿ ಯಾವುದಾದರೂ ಒಂದು ದೇಶದ ಮೇಲೆ ದಾಳಿಯಾದರೆ ಅದನ್ನು ಉಳಿದೆರಡು ದೇಶಗಳ ಮೇಲಿನ ದಾಳಿ ಎಂದೇ ಪರಿಗಣಿಸಲಾಗುತ್ತದೆ. ಆದರೂ, ಈ ಒಪ್ಪಂದದಿಂದ ಸೌದಿಯ ಸುರಕ್ಷತೆ ಹೆಚ್ಚಾಗುವುದಿಲ್ಲ ಎಂಬುದು ಇರಾನ್ನ ವಾದವಾಗಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿಯಾದ ರಾಘವ್ ಚಡ್ಡಾ: ‘ಎಂದಿಗೂ ನೆನಪಿನಲ್ಲಿ ಉಳಿಯುವ ಬೆಳಗು’ ಎಂದ ಸಂಸದ!
