ನವದೆಹಲಿ: ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರಣಾವತ್ (Kangana Ranaut) ಅವರು ಶುಕ್ರವಾರ ಯುವ ಜನಾಂಗದ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದು, ‘ಜೆನ್-ಝಿ’ (Gen Z) ಯುವ ಪೀಳಿಗೆಯನ್ನು ದೇಶದ ‘ಅತ್ಯಂತ ದೊಡ್ಡ ಶಕ್ತಿ’ ಎಂದು ಬಣ್ಣಿಸಿದ್ದಾರೆ. ನಮ್ಮ ಸರ್ಕಾರ ಇಷ್ಟು ಸುದೀರ್ಘ ಕಾಲ ಅಧಿಕಾರದಲ್ಲಿರಲು ಇದೇ ಯುವ ಪೀಳಿಗೆ ನೀಡಿದ ಜನಾದೇಶವೇ ಕಾರಣ ಎಂದು ಅವರು ಹೇಳಿದ್ದಾರೆ. ಪ್ರತಿಭಟನೆಗಳ ಸಂದರ್ಭದಲ್ಲಿ ಕೆಲವೇ ಕೆಲವು ಜನರು ಮಾಡುವ ನಿಂದನೀಯ ಅಥವಾ ಗದ್ದಲದ ನಡವಳಿಕೆಯನ್ನು ನೋಡಿ ಇಡೀ ಯುವ ಸಮುದಾಯವನ್ನು ತಪ್ಪಾಗಿ ನಿರ್ಣಯಿಸುವುದು ನ್ಯಾಯವಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಪ್ರತಿಭಟನೆಯಲ್ಲಿ ಕೂಗಾಡುವ 10-15 ಜನರು ಮಾತ್ರ ಇಡೀ ಜೆನ್-ಝಿ ಪೀಳಿಗೆಯನ್ನು ಪ್ರತಿನಿಧಿಸುವುದಿಲ್ಲ, ಈ ಯುವ ಜನಾಂಗದ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ಕಂಗನಾ ತಿಳಿಸಿದ್ದಾರೆ.
ಕೆಲ ಜನರು ಮಾತ್ರ ಜೆನ್-ಝಿ ಯುವಕರ ಹೆಸರಿಗೆ ಮಸಿ ಬಳಿಯುತ್ತಿದ್ದಾರೆ
ಪ್ರತಿಭಟನೆಗಳಲ್ಲಿ ಭಾಗವಹಿಸುವ ಯುವಕರು ಕೂಡ ಶಾಂತಿಯುತವಾಗಿ ಮತ್ತು ಜವಾಬ್ದಾರಿಯುತವಾಗಿ ನಡೆದುಕೊಳ್ಳಬಹುದು ಎಂಬುದಕ್ಕೆ ಜಾರ್ಖಂಡ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳೇ ಸಾಕ್ಷಿ ಎಂದು ಕಂಗನಾ ಉದಾಹರಿಸಿದ್ದಾರೆ. ಅಲ್ಲಿನ ವಿದ್ಯಾರ್ಥಿಗಳು ಅತ್ಯಂತ ಜವಾಬ್ದಾರಿಯುತವಾಗಿ ಮತ್ತು ಶಾಂತಿಯುತವಾಗಿ ತಮ್ಮ ಧರಣಿ ನಡೆಸುತ್ತಿದ್ದಾರೆ ಎಂದು ಅವರು ಶ್ಲಾಘಿಸಿದ್ದಾರೆ. ಇದರೊಂದಿಗೆ ಭಾರತದ ಯುವ ಕ್ರೀಡಾಪಟುಗಳ ಸಾಧನೆಯನ್ನು ನೆನೆದ ಅವರು, ಪದಕ ಗೆದ್ದು ಬಂದಿರುವ ದೇಶದ ಹಲವು ಯುವ ಕ್ರೀಡಾಪಟುಗಳು ತಮ್ಮ ಯಶಸ್ಸನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ದೇಶಕ್ಕೆ ಅರ್ಪಿಸಿದ್ದಾರೆ. ಹೀಗಾಗಿ ಕೇವಲ ಬೆರಳೆಣಿಕೆಯಷ್ಟು ಜನರು ಮಾತ್ರ ಜೆನ್-ಝಿ ಯುವಕರ ಹೆಸರಿಗೆ ಮಸಿ ಬಳಿಯುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುತ್ತಿರುವ ಪ್ರತಿಪಕ್ಷಗಳ ವಿರುದ್ಧ ಕಂಗನಾ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿಪಕ್ಷಗಳ ಗದ್ದಲದಿಂದಾಗಿ ಸಾರ್ವಜನಿಕರು ಭಾರಿ ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರದ ಕೆಲಸಗಳನ್ನಾಗಲಿ ಅಥವಾ ದೇಶಕ್ಕೆ ಅಗತ್ಯವಿರುವ ಮಸೂದೆಗಳನ್ನಾಗಲಿ ಒಪ್ಪಿಕೊಳ್ಳದ ಪ್ರತಿಪಕ್ಷಗಳ ವಿನಾಶಕಾರಿ ಮನಸ್ಥಿತಿ ಇಡೀ ದೇಶಕ್ಕೆ ಸ್ಪಷ್ಟವಾಗಿ ಕಾಣಿಸುತ್ತಿದೆ. ಚುನಾವಣೆಯಲ್ಲಿ ಸೋತು ದೇಶದ ಜನ ಇವರನ್ನು ತಿರಸ್ಕರಿಸಿದಾಗ ಇವರು ಕಣ್ಣೀರಿಡಲು ಶುರು ಮಾಡುತ್ತಾರೆ ಎಂದು ಟೀಕಿಸಿದ್ದಾರೆ.
ಜನರೇಷನ್ ಆಫ್ ಗಟರ್ ಎಂದಿದ್ದ ಕಂಗನಾ
ವಿಶೇಷವೆಂದರೆ, ಕಂಗನಾ ರಣಾವತ್ ಅವರ ಈ ಇತ್ತೀಚಿನ ಹೇಳಿಕೆ ಎಲ್ಲರ ಗಮನ ಸೆಳೆದಿದೆ. ಏಕೆಂದರೆ, ಕೇವಲ ಒಂದು ವಾರದ ಹಿಂದೆಯಷ್ಟೇ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಇದೇ ಜೆನ್-ಝಿ ಯುವಕರನ್ನು, ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಯುವ ಹಿಂದೂ ಮಹಿಳೆಯರನ್ನು ತೀವ್ರವಾಗಿ ನಿಂದಿಸಿ ವಿವಾದ ಸೃಷ್ಟಿಸಿದ್ದರು. ಆ ವೇಳೆ ಅವರನ್ನು ‘ಜನರೇಷನ್ ಗಟರ್’ (ಚರಂಡಿ ಪೀಳಿಗೆ) ಎಂದು ಕರೆದಿದ್ದ ಕಂಗನಾ, ತಮ್ಮ ಜೀವನದಲ್ಲೇ ಇಷ್ಟು ಅಸಹ್ಯವನ್ನು ಒಂದೇ ಕಡೆ ನೋಡಿಲ್ಲ ಎಂದಿದ್ದರು. ಪಾಶ್ಚಿಮಾತ್ಯ ಸಂಸ್ಕೃತಿಗೆ ಮರುಳಾಗಿರುವ ಇಂತಹ ಮಹಿಳೆಯರು ಮಾದಕ ದ್ರವ್ಯ, ಮದ್ಯ ಸೇವನೆ ಮಾಡುವುದನ್ನು ಹೆಮ್ಮೆಯಿಂದ ಪ್ರದರ್ಶಿಸುತ್ತಾರೆ ಮತ್ತು ಪೋಷಕರ ದುಡ್ಡಿನಲ್ಲಿ ಬದುಕುತ್ತಾರೆ. ಇವರು ಓದಿನಲ್ಲೂ ಮುಂದಿಲ್ಲ, ಅತ್ತ ಗೃಹಿಣಿಯರಾಗಿಯೂ ಇರಲು ಯೋಗ್ಯರಲ್ಲ ಎಂದು ಕಟುವಾಗಿ ಟೀಕಿಸಿದ್ದರು. ಆದರೆ ಈಗ ಕಂಗನಾ ಅದೇ ಯುವ ಪೀಳಿಗೆಯನ್ನು ದೇಶದ ಶಕ್ತಿ ಎಂದು ಹೊಗಳುವ ಮೂಲಕ ಸಂಪೂರ್ಣ ಉಲ್ಟಾ ಹೊಡೆದಿದ್ದಾರೆ.
ಇದನ್ನೂ ಓದಿ: ಕ್ಷೇತ್ರ ಮರುವಿಂಗಡಣೆ ಬಿಲ್ ಪಾಸ್ ಮಾಡಲು ಎನ್ಡಿಎಗೆ ಇದೆ ಸಂಖ್ಯಾಬಲ: ಪಿಎಂ ಮೋದಿ!
