ಬೆಂಗಳೂರು: ಕರ್ನಾಟಕದ ಹಿರಿಯ ರಾಜಕಾರಣಿ, ದಿವಂಗತ ಎನ್. ಧರ್ಮಸಿಂಗ್ ಅವರ ಬೆಂಗಳೂರಿನ ನಿವಾಸದಲ್ಲಿ ಇಂದು ಹಬ್ಬದ ವಾತಾವರಣದ ಜೊತೆಗೆ ಭಾವುಕ ಕ್ಷಣಗಳು ಎದುರಾಗಿವೆ. ಜೇವರ್ಗಿ ಕ್ಷೇತ್ರದ ಶಾಸಕರಾಗಿರುವ ಧರ್ಮಸಿಂಗ್ ಅವರ ಪುತ್ರ ಡಾ. ಅಜಯ್ ಸಿಂಗ್ (Ajay Singh) ಅವರಿಗೆ ಕೊನೆಗೂ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿದ್ದು, ಈ ಸಂತಸದ ಸುದ್ದಿ ಕೇಳಿ ಅವರ ತಾಯಿ ಪ್ರಭಾವತಿ ಧರ್ಮಸಿಂಗ್ ಕಣ್ಣೀರು ಹಾಕಿದ್ದಾರೆ.
ಮಗನನ್ನ ತಬ್ಬಿಕೊಂಡ ತಾಯಿ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟಕ್ಕೆ ಅಜಯ್ ಸಿಂಗ್ ಸೇರ್ಪಡೆಯಾಗುತ್ತಿರುವುದು ಅಧಿಕೃತಗೊಳ್ಳುತ್ತಿದ್ದಂತೆಯೇ ಇಡೀ ಕುಟುಂಬದಲ್ಲಿ ಸಂತಸ ಮನೆಮಾಡಿದೆ. ಮಗನ ಸಾಧನೆಯನ್ನು ಕಂಡು ತಾಯಿ ಪ್ರಭಾವತಿ ಅವರು ಆನಂದಬಾಷ್ಪ ಸುರಿಸುತ್ತಾ ಮಗನನ್ನು ತಬ್ಬಿಕೊಂಡು ಹರಸಿದರು. ಅಜಯ್ ಸಿಂಗ್ ಅವರು ಕೂಡ ತಾಯಿಯ ಪಾದ ಮುಟ್ಟಿ ಆಶೀರ್ವಾದ ಪಡೆದುಕೊಂಡರು. ನಂತರ ತಮ್ಮ ತಂದೆ, ಮಾಜಿ ಸಿಎಂ ಧರ್ಮಸಿಂಗ್ ಅವರ ಭಾವಚಿತ್ರಕ್ಕೆ ಪ್ರಣಾಮ ಸಲ್ಲಿಸಿ ನಮಸ್ಕರಿಸಿದರು. ಪ್ರತಿ ಬಾರಿ ಸಂಪುಟ ರಚನೆಯ ಸಂದರ್ಭದಲ್ಲೂ ಅಜಯ್ ಸಿಂಗ್ ಅವರಿಗೆ ಸಚಿವ ಸ್ಥಾನ ಕೈತಪ್ಪುತ್ತಿತ್ತು, ಹೀಗಾಗಿ ಈ ಯಶಸ್ಸು ಇಡೀ ಕುಟುಂಬದ ದಶಕಗಳ ಕನಸು ನನಸಾದ ಕ್ಷಣವಾಗಿತ್ತು.
ಕ್ಷೇತ್ರದ ಅಭಿವೃದ್ಧಿಗೆ ಹೊಸ ಚೈತನ್ಯ
ಕಲ್ಯಾಣ ಕರ್ನಾಟಕ ಭಾಗದ ಜೇವರ್ಗಿ ಕ್ಷೇತ್ರದಿಂದ ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಡಾ. ಅಜಯ್ ಸಿಂಗ್, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಹಾಗೂ ಪ್ರಭಾವಿ ಯುವ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. 2004 ರಿಂದ 2006 ರವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಧರ್ಮಸಿಂಗ್ ಅವರು 2017 ರಲ್ಲಿ ಇಹಲೋಕ ತ್ಯಜಿಸಿದ್ದರು. ಅವರ ಅಗಲಿಕೆಯ ಬಳಿಕ ಸಿಂಗ್ ಕುಟುಂಬಕ್ಕೆ ಸಿಕ್ಕಿರುವ ಅತಿ ದೊಡ್ಡ ರಾಜಕೀಯ ಉಡುಗೊರೆ ಇದಾಗಿದೆ. ಅಜಯ್ ಸಿಂಗ್ ಅವರ ಮಂತ್ರಿಗಿರಿ ಜೇವರ್ಗಿ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಹೊಸ ಚೈತನ್ಯ ನೀಡಲಿದೆ ಎಂಬ ಆಶಾಭಾವನೆ ಮೂಡಿದೆ.
ಬೆಂಗಳೂರಿನ ಲೋಕಭವನದಲ್ಲಿ ಇಂದು ನಡೆಯಲಿರುವ ಹೊಸ ಸಚಿವರ ಪ್ರಮಾಣವಚನ ಸಮಾರಂಭದ ಹಿನ್ನೆಲೆಯಲ್ಲಿ ನಗರದ ಕೇಂದ್ರ ಭಾಗದಲ್ಲಿ ಸಂಚಾರ ವ್ಯವಸ್ಥೆಯನ್ನು ಗಣನೀಯವಾಗಿ ಮಾರ್ಪಾಡು ಮಾಡಲಾಗಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಮಧ್ಯಾಹ್ನ ೨ ಗಂಟೆಯಿಂದ ರಾತ್ರಿ ೮ ಗಂಟೆಯವರೆಗೆ ಪ್ರಮುಖ ರಸ್ತೆಗಳನ್ನು ಬಂದ್ ಮಾಡಲಾಗಿದ್ದು, ಮಧ್ಯಾಹ್ನ ೨ ರಿಂದ ರಾತ್ರಿ ೧೦ ಗಂಟೆಯವರೆಗೆ ಇಡೀ ಬೆಂಗಳೂರು ನಗರದಾದ್ಯಂತ ಭಾರಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.
ವಿಶೇಷ ವಿಐಪಿ ಪಾಸ್ ಹೊಂದಿರುವ ವಾಹನಗಳಿಗೆ ಮಾತ್ರ ನಿಗದಿತ ರಸ್ತೆಗಳಲ್ಲಿ ಪ್ರವೇಶವಿದ್ದು, ಸಾಮಾನ್ಯ ವಾಹನಗಳಿಗೆ ಬಿ.ಆರ್.ವಿ ಜಂಕ್ಷನ್‌ನಿಂದ ಸಿ.ಟಿ.ಒ ಹಾಗೂ ಲೋಕಭವನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಮುಚ್ಚಲಾಗಿದೆ. ಇದರೊಂದಿಗೆ ಬಾಳೇಕುಂದ್ರಿ ಜಂಕ್ಷನ್‌ನಿಂದ ಅಂಬೇಡ್ಕರ್ ರಸ್ತೆ, ಕೆ.ಆರ್. ವೃತ್ತದಿಂದ ಕಾಫಿ ಬೋರ್ಡ್ ಜಂಕ್ಷನ್‌ವರೆಗೆ ಮತ್ತು ಕ್ವೀನ್ಸ್ ಜಂಕ್ಷನ್ ಹಾಗೂ ಸೇಂಟ್ ಮಾರ್ಕ್ಸ್ ರಸ್ತೆಯಿಂದ ಸಿ.ಟಿ.ಒ ಕಡೆಗೆ ಸಾಗುವ ಮಾರ್ಗಗಳಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದೆ.
ವಾಹನ ಸವಾರರಿಗೆ ಪರ್ಯಾಯ ಮಾರ್ಗಗಳು:
- ಬಿ.ಆರ್.ವಿ ಜಂಕ್ಷನ್ ಕಡೆಯಿಂದ ಸಂಚರಿಸುವವರು ಶಿವಾಜಿನಗರದ ರಸ್ತೆ ಮೂಲಕ ಅನಿಲ್ ಕುಂಬ್ಳೆ ಜಂಕ್ಷನ್ ತಲುಪಬಹುದು.
- ಶಿವಾಜಿನಗರ ಹಾಗೂ ಕ್ವೀನ್ಸ್ ರಸ್ತೆ ಕಡೆಯಿಂದ ಬರುವ ವಾಹನಗಳು ಬಾಳೇಕುಂದ್ರಿ ಜಂಕ್ಷನ್ ಮೂಲಕ ಕನ್ನಿಂಗ್‌ಹ್ಯಾಮ್ ರಸ್ತೆಯತ್ತ ಸಾಗಬೇಕಾಗುತ್ತದೆ.
- ಕೆ.ಆರ್. ಸರ್ಕಲ್‌ನಿಂದ ಕಾಫಿ ಬೋರ್ಡ್ ಕಡೆಗೆ ಹೋಗುವ ಸವಾರರು ನೃಪತುಂಗ ರಸ್ತೆಯನ್ನು ಬಳಸಲು ಕೋರಲಾಗಿದೆ.
ಪಾರ್ಕಿಂಗ್ ನಿಯಮಗಳು ಹಾಗೂ ಸ್ಥಳಾವಕಾಶ: ಲೋಕಭವನ, ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ, ಎಲ್.ಎಚ್. ರಸ್ತೆ, ಕಬ್ಬನ್ ಪಾರ್ಕ್ ಒಳಗಿನ ಮಾರ್ಗಗಳು ಹಾಗೂ ನೃಪತುಂಗ ರಸ್ತೆ ಸೇರಿದಂತೆ ಸುತ್ತಮುತ್ತಲಿನ ಯಾವುದೇ ಮುಖ್ಯ ರಸ್ತೆಗಳಲ್ಲಿ ವಾಹನ ನಿಲ್ಲಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಪಾಸ್ ಪಡೆದ ಗಣ್ಯರ ವಾಹನಗಳಿಗೆ ವಿಧಾನಸೌಧ, ವಿಕಾಸಸೌಧ ಮತ್ತು ನೆಹರು ತಾರಾಲಯದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಇನ್ನು ಸಾಮಾನ್ಯ ಸಾರ್ವಜನಿಕರು ತಮ್ಮ ವಾಹನಗಳನ್ನು ಕಂಠೀರವ ಕ್ರೀಡಾಂಗಣ, ಯುಬಿ ಸಿಟಿ, ಶಿವಾಜಿನಗರದ ಮಲ್ಟಿಲೆವೆಲ್ ಪಾರ್ಕಿಂಗ್ ಅಥವಾ ಅರಮನೆ ಮೈದಾನದ ಆವರಣದಲ್ಲಿ ನಿಲ್ಲಿಸಲು ಸೂಚಿಸಲಾಗಿದೆ.
ಇದನ್ನೂ ಓದಿ: ಕರ್ನಾಟಕ ಡೊಮಿಸೈಲ್ ಪ್ರಮಾಣಪತ್ರ ಪಡೆಯಲು ಕಂದಾಯ ಇಲಾಖೆ ಹೊಸ ಗೈಡ್‌ಲೈನ್ಸ್: ಯಾರೆಲ್ಲಾ ಅರ್ಹರು? ಇಲ್ಲಿದೆ ಮಾಹಿತಿ
