ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದದ ಬೆನ್ನಲ್ಲೇ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಕರ್ನಾಟಕ ಪ್ರವಾಸ ಮುಂದೂಡಿಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಆಗಸ್ಟ್ 13 ರಂದು ರಾಜ್ಯಾದ್ಯಂತ ‘ಕರ್ನಾಟಕ ಬಂದ್’ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ, ಪ್ರಸ್ತುತ ಉದ್ವಿಗ್ನ ವಾತಾವರಣದಲ್ಲಿ ಬೆಂಗಳೂರಿಗೆ ಬರುವುದು ಬೇಡ ಎಂದು ತಮಿಳುನಾಡು ಸಿಎಮ್‌ಗೆ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಮನವಿ ಮಾಡಿದ್ದಾರೆ.
ಪ್ರವಾಸ ಮುಂದೂಡಿಕೆಗೆ ಡಿಕೆಶಿ ಸಲಹೆ
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಾವೇರಿ ವಿವಾದದ ಕಿಚ್ಚು ಹೆಚ್ಚಾಗಿರುವ ಇಂತಹ ಸಂದರ್ಭದಲ್ಲಿ ತಮಿಳುನಾಡು ಸಿಎಂ ಭೇಟಿ ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. “ವಿಜಯ್ ಅವರು ಸೌಹಾರ್ದಯುತ ಮಾತುಕತೆಗಾಗಿ ತಾವಾಗಿಯೇ ಬರುವುದಾಗಿ ಹೇಳಿದ್ದರು. ಆದರೆ ಇಲ್ಲಿನ ಕೆಲವರ ವರ್ತನೆ ಮತ್ತು ವಿರೋಧ ನನಗೆ ಸಮಾಧಾನ ತಂದಿಲ್ಲ. ನಾವು ಅವರನ್ನು ಕರೆಸಿದಾಗ ಯಾರೋ ಪ್ರತಿಭಟನೆ ಮಾಡುವುದು, ಮುತ್ತಿಗೆ ಹಾಕುವುದು ಸರಿಯಲ್ಲ. ಈ ಕಾರಣಕ್ಕಾಗಿ ಆಗಸ್ಟ್ 3 ರಂದು ನಿಗದಿಯಾಗಿದ್ದ ಅವರ ಭೇಟಿಯನ್ನು ಸದ್ಯಕ್ಕೆ ಕೈಬಿಡುವಂತೆ ಕೋರಲಿದ್ದೇವೆ,” ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ, ಈ ಹಿಂದೆ ತಮಿಳುನಾಡಿನ ಮಾಜಿ ಸಿಎಂ ಸ್ಟಾಲಿನ್ ಅವರೊಂದಿಗೆ ಚರ್ಚಿಸಲು ಯತ್ನಿಸಿದಾಗ ಅವರು ಸಮ್ಮತಿಸಿರಲಿಲ್ಲ ಎಂಬ ವಿಷಯವನ್ನೂ ಡಿಕೆಶಿ ನೆನಪಿಸಿಕೊಂಡರು.
ಸರ್ವಪಕ್ಷ ಸಭೆಯ ಬಳಿಕ ನೀರು ಬಿಡುಗಡೆ ನಿರ್ಧಾರ
ಇದೇ ವೇಳೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ತಮಿಳುನಾಡಿಗೆ 4.5 ಟಿಎಂಸಿ ನೀರು ಹರಿಸುವಂತೆ ನೀಡಿರುವ ಆದೇಶದ ಕುರಿತು ಪ್ರತಿಕ್ರಿಯಿಸಿದ ಸಿಎಂ, ಈ ಬಗ್ಗೆ ಭಾನುವಾರ ಸರ್ವಪಕ್ಷಗಳ ತುರ್ತು ಸಭೆ ಕರೆಯಲಾಗಿದೆ ಎಂದು ತಿಳಿಸಿದರು. ರಾಜ್ಯದ ಹಿತದೃಷ್ಟಿಯಿಂದ ವಿರೋಧ ಪಕ್ಷಗಳ ನಾಯಕರೊಂದಿಗೆ ವಿಸ್ತೃತವಾಗಿ ಚರ್ಚಿಸಿದ ಬಳಿಕವಷ್ಟೇ ತಮಿಳುನಾಡಿಗೆ ನೀರು ಬಿಡುವ ಕುರಿತು ಮುಂದಿನ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಹತ್ವದ ತುರ್ತು ಪತ್ರಿಕಾಗೋಷ್ಠಿ ನಡೆಸಿದ್ದು, ಕರ್ನಾಟಕದ ಜನತೆ ಹಾಗೂ ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ. ಕಾವೇರಿ ನಿಯಂತ್ರಣ ಸಮಿತಿಯ ಆದೇಶದ ವಿರುದ್ಧ ಕಾನೂನು ಹೋರಾಟ ಮುಂದುವರಿಸಲು ಸರ್ಕಾರ ನಿರ್ಧರಿಸಿದೆ ಎಂದು ಅವರು ತಿಳಿಸಿದರು.
ಸಂಕಷ್ಟದಲ್ಲೂ ತಮಿಳುನಾಡಿಗೆ ಸಹಕಾರ ನೀಡಿದ್ದೆವು
ಮುಂದಿನ 15 ದಿನಗಳ ಕಾಲ ನಿತ್ಯ 3.5 ಸಾವಿರ ಕ್ಯೂಸೆಕ್ಸ್ ನೀರು ಹರಿಸಬೇಕೆಂಬ ಇತ್ತೀಚಿನ ಆದೇಶದ ಕುರಿತು ಮಾತನಾಡಿದ ಸಿಎಂ, “2013ರಿಂದ ಜಾರಿಯಾಗಿರುವ ಎಲ್ಲಾ ಆದೇಶಗಳನ್ನು ನಾವು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಹಿಂದೆ ಪರಿಸ್ಥಿತಿ ಚೆನ್ನಾಗಿದ್ದಾಗ 170 ಟಿಎಂಸಿ ನೀರು ಬಿಡಬೇಕಾದ ಜಾಗದಲ್ಲಿ 400 ಟಿಎಂಸಿಯಷ್ಟು ನೀರನ್ನು ತಮಿಳುನಾಡಿಗೆ ಹರಿಸಿದ್ದೆವು. ಆದರೆ ಪ್ರಸ್ತುತ ನಾವೇ ತೀವ್ರ ನೀರಿನ ಕೊರತೆ ಎದುರಿಸುತ್ತಿದ್ದೇವೆ. ನಾನು ಮತ್ತು ಸಿದ್ದರಾಮಯ್ಯ ಅವರು ಖುದ್ದಾಗಿ ಕೆಆರ್‌ಎಸ್ ಜಲಾಶಯಕ್ಕೆ ಭೇಟಿ ನೀಡಿ ವಸ್ತುಸ್ಥಿತಿ ಪರಿಶೀಲಿಸಿದ್ದೇವೆ” ಎಂದರು. ಇದೇ ವೇಳೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಬಿಜೆಪಿಗೆ ತಿರುಗೇಟು ನೀಡಿದ ಅವರು, ನಾನು ವಿಪಕ್ಷಗಳಿಗೆ ಉತ್ತರಿಸುವ ಅಗತ್ಯವಿಲ್ಲ, ರಾಜ್ಯದ ಜನತೆಗೆ ಉತ್ತರಿಸುತ್ತಿದ್ದೇನೆ. ಸಿಆರ್‌ಡಬ್ಲ್ಯುಸಿ ಸಭೆಗಳಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲೇ ನಮ್ಮ ಅಧಿಕಾರಿಗಳು ಪಾಲ್ಗೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಕಾಲಾವಕಾಶ ಕೋರಿದ ಕರ್ನಾಟಕ
ಕಾವೇರಿ ನದಿಯ ಒಳಹರಿವಿನ ಪ್ರಮಾಣ ಯಾರಿಗೂ ಮುಚ್ಚಿಡಲು ಸಾಧ್ಯವಿಲ್ಲದ ಸತ್ಯ. ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ತೀವ್ರ ಕುಸಿದಿದೆ. ಹೀಗಾಗಿ ಸದ್ಯದ ಆದೇಶ ಪಾಲನೆ ನಮಗೆ ಕಷ್ಟಸಾಧ್ಯವಾಗಿದ್ದು, ನಿಯಂತ್ರಣ ಮಂಡಳಿ ಎದುರು ನಮ್ಮ ಸರ್ಕಾರದ ಕಾರ್ಯದರ್ಶಿಗಳು ಖುದ್ದಾಗಿ ಹಾಜರಾಗಿ ಕಾಲಾವಕಾಶ ಕೋರಿದ್ದಾರೆ. ಸದ್ಯಕ್ಕೆ ರಾಜ್ಯದ ಕೆರೆಗಳನ್ನು ತುಂಬಿಸುವುದು ಹಾಗೂ ಜನರಿಗೆ ಕುಡಿಯುವ ನೀರು ಒದಗಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಸಿಎಂ ವಿವರಿಸಿದರು.
ವಿಜಯ್ ಭೇಟಿ ಹಾಗೂ ಮಾತುಕತೆಯ ಸಾಧ್ಯತೆ
ಕಾನೂನು ತಜ್ಞರು ಮತ್ತು ಹಿರಿಯ ಸಚಿವರೊಂದಿಗೆ ಸಮಾಲೋಚನೆ ನಡೆಸಲಾಗಿದ್ದು, ಅವರ ಸಲಹೆಯಂತೆ ಮುಂದಿನ ಕಾನೂನು ಹೆಜ್ಜೆ ಇಡಲಾಗುವುದು. ಇದರ ನಡುವೆ, ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಕರ್ನಾಟಕಕ್ಕೆ ಬಂದು ಮಾತುಕತೆ ನಡೆಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಆ ರಾಜ್ಯದ ಮುಖ್ಯ ಕಾರ್ಯದರ್ಶಿಯೊಂದಿಗೆ ನಮ್ಮ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ. ತಮಿಳುನಾಡು ಸರ್ಕಾರ ತನ್ನ ರಾಜ್ಯದ ಹಿತ ಕಾಯಲು ಯತ್ನಿಸುತ್ತಿದ್ದರೆ, ನಾವೂ ನಮ್ಮ ಜನರ ಹಿತಾಸಕ್ತಿಗೆ ಕಟ್ಟುಬಿದ್ದಿದ್ದೇವೆ. ಉಭಯ ರಾಜ್ಯಗಳ ಒಪ್ಪಿಗೆಯೊಂದಿಗೆ ಮಾತುಕತೆಯ ಮೂಲಕವೇ ಈ ಸಮಸ್ಯೆಗೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಲು ಸಾಧ್ಯವೇ ಎಂಬ ಬಗ್ಗೆ ಚರ್ಚಿಸಲಾಗುವುದು ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
