TOP NEWS

Allu Arjun: ಜಗನ್ನಾಥನ ಮೂರ್ತಿ ಕಂಡ ತಕ್ಷಣ ಶೂ ಬಿಚ್ಚಿಟ್ಟ ಅಲ್ಲು ಅರ್ಜುನ್!; ಐಕಾನ್ ಸ್ಟಾರ್ ಸರಳತೆಗೆ ಫ್ಯಾನ್ಸ್ ಫಿದಾ, ವಿಡಿಯೋ ವೈರಲ್!

Allu Arjun wins hearts as he removes shoes before accepting Lord Jagannath idol viral video earns widespread praise

ಹೈದರಾಬಾದ್: ಟಾಲಿವುಡ್‌ನ ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಅವರು ತಮ್ಮ ನಟನೆಯಷ್ಟೇ ಅಲ್ಲದೆ ಸರಳತೆ ಹಾಗೂ ಭಾರತೀಯ ಸಂಸ್ಕೃತಿ ಮತ್ತು ದೈವ ಭಕ್ತಿಯ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಇತ್ತೀಚೆಗೆ ನಡೆದ ಅಭಿಮಾನಿಗಳ ಭೇಟಿಯ ಕಾರ್ಯಕ್ರಮವೊಂದರಲ್ಲಿ, ಅಭಿಮಾನಿಯೊಬ್ಬರು ತಂದಿದ್ದ ಜಗನ್ನಾಥ ಸ್ವಾಮಿಯ ವಿಗ್ರಹವನ್ನು ಸ್ವೀಕರಿಸುವ ಮುನ್ನ ಅಲ್ಲು ಅರ್ಜುನ್ ತಮ್ಮ ಕಾಲಿನಲ್ಲಿದ್ದ ಶೂಗಳನ್ನು ಬಿಚ್ಚಿ ಗೌರವ ಸಲ್ಲಿಸಿದ್ದಾರೆ. ಈ ಸರಳ ನಡೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಸಿನಿಮಾ ಪ್ರೇಮಿಗಳು ಹಾಗೂ ಮುಖ್ಯವಾಗಿ ಒಡಿಶಾದ ಜಗನ್ನಾಥನ ಭಕ್ತರು ನಟನ ಸಂಸ್ಕಾರ ಮತ್ತು ವಿನಯತೆಯನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.

ಶೂ ಕಳಚಿಟ್ಟು ವಿಗ್ರಹ ಸ್ವೀಕರಿಸಿದ ನಟ

ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ, ಅಭಿಮಾನಿಯೊಬ್ಬರು ಜಗನ್ನಾಥ, ಬಲಭದ್ರ ಮತ್ತು ದೇವಿ ಸುಭದ್ರೆಯ ಸುಂದರವಾದ ಮೂರ್ತಿಗಳನ್ನು ಹಿಡಿದು ಅಲ್ಲು ಅರ್ಜುನ್ ಅವರತ್ತ ಬರುತ್ತಾರೆ. ಇದನ್ನು ಗಮನಿಸಿದ ತಕ್ಷಣವೇ ಅಲ್ಲು ಅರ್ಜುನ್ ಅವರು ತಡಮಾಡದೆ ಮೊದಲು ತಮ್ಮ ಶೂಗಳನ್ನು ಕಳಚಿಟ್ಟು, ನಂತರ ಅತ್ಯಂತ ಭಕ್ತಿಯಿಂದ ಆ ಪವಿತ್ರ ವಿಗ್ರಹಗಳನ್ನು ಸ್ವೀಕರಿಸುತ್ತಾರೆ. ಆ ಬಳಿಕ ಆ ಅಭಿಮಾನಿಯೊಂದಿಗೆ ಸಂತೋಷದಿಂದ ಫೋಟೋಗೆ ಫೋಸ್ ನೀಡುತ್ತಾರೆ. ಅದೇ ಕಾರ್ಯಕ್ರಮದಲ್ಲಿ ಮತ್ತೊಬ್ಬ ಅಭಿಮಾನಿ ಸಾಯಿಬಾಬಾ ಅವರ ವಿಗ್ರಹವನ್ನು ಉಡುಗೊರೆಯಾಗಿ ನೀಡಿದಾಗಲೂ, ನಟ ಅರ್ಜುನ್ ಇದೇ ರೀತಿ ಶೂಗಳನ್ನು ಬಿಚ್ಚಿ ಗೌರವದಿಂದ ಅದನ್ನು ಪಡೆದುಕೊಂಡಿದ್ದು ಅವರ ಸಂಸ್ಕೃತಿಗೆ ಸಾಕ್ಷಿಯಾಗಿದೆ.

ಮೊಣಕಾಲೂರಿ ಹೂ ಕೊಟ್ಟ ಮಹಿಳಾ ಅಭಿಮಾನಿ

ಈ ಅಭಿಮಾನಿಗಳ ಸಮಾವೇಶದಲ್ಲಿ ಕೇವಲ ಭಕ್ತಿಯಷ್ಟೇ ಅಲ್ಲದೆ, ಹಲವು ಹೃದಯಸ್ಪರ್ಶಿ ಘಟನೆಗಳು ನೆರೆದಿದ್ದವರ ಗಮನ ಸೆಳೆದವು. ಪುಟ್ಟ ಬಾಲಕಿಯೊಬ್ಬಳು ಮೊಣಕಾಲೂರಿ ಪ್ರೀತಿಯಿಂದ ನೀಡಿದ ಕೆಂಪು ಗುಲಾಬಿಯನ್ನು ನಟ ನಸುನಗುತ್ತಾ ಸ್ವೀಕರಿಸಿದರೆ, ಕಾಲಿಗೆ ಬಿದ್ದ ಮತ್ತೊಬ್ಬ ಅಭಿಮಾನಿಯನ್ನು ಪುಷ್ಪ ನಟ ಪ್ರೀತಿಯಿಂದ ಮೇಲೆತ್ತಿ ಅಪ್ಪಿಕೊಂಡರು. ಮಹಿಳಾ ಅಭಿಮಾನಿಗಳಿಗೆ ಆತ್ಮೀಯವಾಗಿ ಹಸ್ತಲಾಘವ ಹಾಗೂ ಅಪ್ಪುಗೆಯ ಮೂಲಕ ಸ್ಪಂದಿಸಿದ ನಟ, ಈ ಬೃಹತ್ ವಾರ್ಷಿಕ ಸಮಾವೇಶವನ್ನು ಆಯೋಜಿಸಿದ ಪ್ರತಿಯೊಬ್ಬ ಅಭಿಮಾನಿಗೂ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದ ಯಶಸ್ಸಿನ ಬಳಿಕ ಲಕ್ಷಾಂತರ ಅಭಿಮಾನಿಗಳ ಸಮ್ಮುಖದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಜಾಲತಾಣದಲ್ಲಿ ಹಂಚಿಕೊಂಡಿರುವ ಐಕಾನ್ ಸ್ಟಾರ್, “ನನ್ನ ಪ್ರೀತಿಯ ಅಭಿಮಾನಿಗಳೇ, ವಿವಿಧ ಭಾಗಗಳಿಂದ ನೀವು ಬಂದು ತೋರಿದ ಪ್ರೀತಿ ನನ್ನ ಹೃದಯ ಮುಟ್ಟಿದೆ. ನಿಮ್ಮ ಈ ಅಭಿಮಾನಕ್ಕೆ ನಾನು ಸದಾ ಆಭಾರಿ, ಮುಂದಿನ ದಿನಗಳಲ್ಲಿ ನೀವು ಮತ್ತಷ್ಟು ಹೆಮ್ಮೆ ಪಡುವಂತಹ ಕೆಲಸ ಮಾಡುತ್ತೇನೆ” ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕೊಟ್ಟ ಮಾತಿಗೆ ತಪ್ಪದ ‘ರಾಕಿ ಭಾಯ್’!; ಯಶ್ ಅಂದು ತೋರಿದ ಸಿನಿಮಾ ನೈತಿಕತೆಯನ್ನು ನೆನಪಿಸಿಕೊಂಡ ನಿರ್ಮಾಪಕ ಜಯಣ್ಣ!

Leave a Reply

Your email address will not be published. Required fields are marked *