ಅಮೆರಿಕ: ರಷ್ಯಾದಿಂದ ಅಪಾರ ಪ್ರಮಾಣದಲ್ಲಿ ತೈಲ ಮತ್ತು ಅನಿಲ ಖರೀದಿಸುತ್ತಿರುವ ಭಾರತ ಹಾಗೂ ಚೀನಾ ಸೇರಿದಂತೆ ಪ್ರಮುಖ ದೇಶಗಳ ಮೇಲೆ ಶೇಕಡಾ 100ರಷ್ಟು ಆಮದು ಸುಂಕ ವಿಧಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ (America) ಅವರಿಗೆ ಅಧಿಕಾರ ನೀಡುವ ಮಸೂದೆಯೊಂದನ್ನು ಅಮೆರಿಕ ಸೆನೆಟ್ ಮುನ್ನಡೆಸಿದೆ. ದಿವಂಗತ ಸೆನೆಟರ್ ಲಿಂಡ್ಸೆ ಗ್ರಹಾಂ ಅವರ ಕನಸಿನ ಯೋಜನೆಯಾಗಿದ್ದ ಈ ದ್ವಿಪಕ್ಷೀಯ ಮಸೂದೆಗೆ ಸೆನೆಟ್‌ನಲ್ಲಿ 86-12 ಮತಗಳ ಬೃಹತ್ ಬೆಂಬಲ ದೊರೆತಿದೆ.
ಹಡಗುಗಳ ಮೇಲೆಯೂ ನಿರ್ಬಂಧಗಳನ್ನು ಹೇರಲಿದೆ
ರಷ್ಯಾದ ಇಂಧನ ಆದಾಯದ ಮೂಲವನ್ನು ಬಂದ್ ಮಾಡುವ ಮೂಲಕ ಉಕ್ರೇನ್ ವಿರುದ್ಧದ ಯುದ್ಧಕ್ಕೆ ಸಿಗುತ್ತಿರುವ ಆರ್ಥಿಕ ಬಲವನ್ನು ಕುಗ್ಗಿಸುವುದು ಈ ಕಠಿಣ ಮಸೂದೆಯ ಮುಖ್ಯ ಉದ್ದೇಶವಾಗಿದೆ. ಇತ್ತೀಚೆಗಷ್ಟೇ ನಿಧನರಾದ ಸೆನೆಟರ್ ಲಿಂಡ್ಸೆ ಗ್ರಹಾಂ ಅವರ ಹೆಸರನ್ನೇ ಈ ಕಾಯ್ದೆಗೆ ಇಡಲಾಗಿದ್ದು, ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಎರಡೂ ಪಕ್ಷಗಳ ಶಾಸಕರು ಇದಕ್ಕೆ ಬೆಂಬಲ ಸೂಚಿಸಿದ್ದಾರೆ. ಈ ಮಸೂದೆಯು ರಷ್ಯಾದ ಅಧಿಕಾರಿಗಳು, ಉದ್ಯಮಿಗಳು, ಹಣಕಾಸು ಸಂಸ್ಥೆಗಳು ಮತ್ತು ತೈಲ ರಫ್ತಿಗೆ ಬಳಸುವ ಹಡಗುಗಳ ಮೇಲೆಯೂ ನಿರ್ಬಂಧಗಳನ್ನು ಹೇರಲಿದೆ
ಆದಾಗ್ಯೂ, ರಷ್ಯಾದಿಂದ ಶೇಕಡಾ 15ಕ್ಕಿಂತ ಕಡಿಮೆ ಅನಿಲ ಆಮದು ಮಾಡಿಕೊಳ್ಳುವ ಮತ್ತು ಅದನ್ನು ಹಂತ ಹಂತವಾಗಿ ಕಡಿಮೆ ಮಾಡಲು ಕ್ರಮ ಕೈಗೊಳ್ಳುವ ದೇಶಗಳಿಗೆ ಈ ಮಸೂದೆಯಲ್ಲಿ ವಿನಾಯಿತಿ ನೀಡಲಾಗಿದೆ. ಇದರೊಂದಿಗೆ ಇರಾನ್‌ನ ಇಂಧನ ಮತ್ತು ಶಸ್ತ್ರಾಸ್ತ್ರ ಕ್ಷೇತ್ರಗಳ ಮೇಲಿನ ನಿರ್ಬಂಧಗಳನ್ನು ವಿಸ್ತರಿಸುವ ಅಂಶವನ್ನೂ ಸೇರಿಸಲಾಗಿದೆ.
ವಸ್ತುಗಳ ಬೆಲೆ ಏರಿಕೆಯಾಗಬಹುದು
ಪ್ರಸ್ತುತ ಅಮೆರಿಕ ಸೆನೆಟ್‌ನಲ್ಲಿ ಅನುಮೋದನೆ ಪಡೆದಿರುವ ಈ ಮಸೂದೆಯು ಅಂತಿಮವಾಗಿ ಶಾಸನವಾಗಲು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿಯೂ (ಕೆಳಮನೆ) ಅಂಗೀಕಾರಗೊಳ್ಳಬೇಕಿದೆ. ಆದರೆ, ಕೆಳಮನೆಯು ಈಗಾಗಲೇ ಬೇಸಿಗೆಯ ರಜೆಯಲ್ಲಿರುವುದರಿಂದ ಸೆಪ್ಟೆಂಬರ್‌ಗಿಂತ ಮೊದಲು ಈ ಮಸೂದೆ ಅಲ್ಲಿಗೆ ಬರುವ ಸಾಧ್ಯತೆಯಿಲ್ಲ. ಮತ್ತೊಂದೆಡೆ, ಈ ರೀತಿ ಹೆಚ್ಚಿನ ಆಮದು ಸುಂಕ ವಿಧಿಸುವುದರಿಂದ ಅಮೆರಿಕದ ಗ್ರಾಹಕರಿಗೆ ವಸ್ತುಗಳ ಬೆಲೆ ಏರಿಕೆಯಾಗಬಹುದು ಮತ್ತು ಯುರೋಪಿಯನ್ ಮಿತ್ರರಾಷ್ಟ್ರಗಳ ಮೇಲೆಯೂ ಪರಿಣಾಮ ಬೀರಬಹುದು ಎಂದು ಕೆಲವು ಡೆಮಾಕ್ರಟಿಕ್ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಅವರೂ ನಮಗೆ ಭಾರತದಂತೆಯೇ ಶತ್ರುಗಳು’: ಪಾಕ್ ಆಕ್ರಮಿತ ಕಾಶ್ಮೀರದ 32 ಪ್ರತಿಭಟನಾಕಾರರ ಹತ್ಯೆಯನ್ನು ಸಮರ್ಥಿಸಿಕೊಂಡ ಖವಾಜಾ ಆಸಿಫ್
