ನವದೆಹಲಿ: ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್ವೆಲ್ತ್ ಕ್ರೀಡಾಕೂಟದ ನಾಲ್ಕನೇ ದಿನವಾದ ಜುಲೈ 26ರಂದು ಭಾರತದ ಕ್ರೀಡಾಪಟುಗಳು ಹಲವು ಪ್ರಮುಖ ಪಂದ್ಯಗಳಲ್ಲಿ ಶ್ರೇಷ್ಠ ಸಾಧನೆ (Sports) ಮಾಡಲು ಸಜ್ಜಾಗಿದ್ದಾರೆ. ಮುಖ್ಯವಾಗಿ ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು ಅವರ ಮೇಲೆ ದೇಶದ ಕಣ್ಣ ನೆಟ್ಟಿದ್ದು, ವೇಟ್ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನದ ಪದಕ ಕಾಯ್ದುಕೊಳ್ಳುವ ಭರವಸೆಯಲ್ಲಿದ್ದಾರೆ. ಡೋಪಿಂಗ್ ಪ್ರಕರಣಗಳ ಹಿನ್ನೆಲೆಯಲ್ಲಿ ಭಾರತೀಯ ವೇಟ್ಲಿಫ್ಟಿಂಗ್ ತಂಡದ ಸಂಖ್ಯಾಬಲ ಕುಸಿದಿದ್ದರೂ, ಮೀರಾಬಾಯಿ ಚಾನು, ಋಷಿಕಾಂತ್ ಸಿಂಗ್ ಮತ್ತು ರಾಜಾ ಮಥುಪಾಂಡಿ ಅವರಂತಹ ಪ್ರಮುಖ ಸ್ಪರ್ಧಿಗಳ ಮೇಲೆ ಭಾರೀ ನಿರೀಕ್ಷೆಯಿದೆ.
ಸ್ಪರ್ಧಿಗಳ ಮೇಲೆ ಭಾರೀ ನಿರೀಕ್ಷೆ
ವೇಟ್ಲಿಫ್ಟಿಂಗ್ ಹೊರತಾಗಿ, ಜಿಮ್ನಾಸ್ಟಿಕ್ಸ್, ಈಜು, ಬಾಕ್ಸಿಂಗ್ ಹಾಗೂ ಲಾನ್ಬೌಲ್ಸ್ ವಿಭಾಗಗಳಲ್ಲೂ ಭಾರತೀಯ ಅಥ್ಲೀಟ್ಗಳು ಪದಕಕ್ಕಾಗಿ ಸೆಣಸಾಡಲಿದ್ದಾರೆ. ಮಧ್ಯಾಹ್ನ 1:00 ಗಂಟೆಗೆ ಲಾನ್ಬೌಲ್ಸ್ ಮಹಿಳಾ ಜೋಡಿಗಳ ವಿಭಾಗದಲ್ಲಿ ರೂಪಾ ರಾಣಿ ತಿರ್ಕಿ ಮತ್ತು ಪಿಂಕಿ ಜೋಡಿಯು ನಮೀಬಿಯಾ ವಿರುದ್ಧ ಪಂದ್ಯ ಆರಂಭಿಸಲಿದ್ದು, ದಿನದ ಶುಭಾರಂಭಕ್ಕೆ ಕಾಯುತ್ತಿದ್ದಾರೆ.
ಅದರ ಬೆನ್ನಲ್ಲೇ ಮಧ್ಯಾಹ್ನ 2:15ಕ್ಕೆ ವೇಟ್ಲಿಫ್ಟಿಂಗ್ ಪುರುಷರ 60 ಕೆಜಿ ಫೈನಲ್ನಲ್ಲಿ ಋಷಿಕಾಂತ್ ಸಿಂಗ್ ಕಣಕ್ಕಿಳಿಯಲಿದ್ದಾರೆ. ನಂತರ ಸಂಜೆ 4:30ಕ್ಕೆ ಜಿಮ್ನಾಸ್ಟಿಕ್ಸ್ನ ಪುರುಷರ ಆಲ್-ಅರೌಂಡ್ ಫೈನಲ್ನಲ್ಲಿ ತಪನ್ ಮೊಹಂತಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಸಂಜೆ 4:39ಕ್ಕೆ ಈಜು ವಿಭಾಗದಲ್ಲಿ ಶ್ರೀಹರಿ ನಟರಾಜ್, ಆರ್ಯನ್ ನೆಹ್ರಾ, ಅನೀಶ್ ಗೌಡ ಮತ್ತು ದಕ್ಷಿನ್ ಶಶಿಕುಮಾರ್ ಅವರನ್ನೊಳಗೊಂಡ ಭಾರತೀಯ ತಂಡವು 4×200 ಮೀಟರ್ಸ್ ಫ್ರೀಸ್ಟೈಲ್ ರಿಲೇ ಹೀಟ್ಸ್ನಲ್ಲಿ ಸ್ಪರ್ಧಿಸಲಿದೆ.
ಸಂಜೆ 6:45ಕ್ಕೆ ಬಹುನಿರೀಕ್ಷಿತ ಮಹಿಳೆಯರ 48 ಕೆಜಿ ವೇಟ್ಲಿಫ್ಟಿಂಗ್ ಫೈನಲ್ ಪಂದ್ಯ ನಡೆಯಲಿದ್ದು, ಮೀರಾಬಾಯಿ ಚಾನು ಮೂರನೇ ಬಾರಿಗೆ ಕಾಮನ್ವೆಲ್ತ್ ಚಿನ್ನ ಗೆಲ್ಲುವ ಗುರಿಯೊಂದಿಗೆ ಅಖಾಡಕ್ಕಿಳಿಯಲಿದ್ದಾರೆ. ರಾತ್ರಿ 7:15 ಹಾಗೂ 10:05ಕ್ಕೆ ಲಾನ್ಬೌಲ್ಸ್ನಲ್ಲಿ ಕ್ರಮವಾಗಿ ಪುಟುಲ್ ಸೊನೊವಾಲ್ ಹಾಗೂ ರೂಪಾ-ಪಿಂಕಿ ಜೋಡಿಯು ತಮ್ಮ ಮುಂದಿನ ಪಂದ್ಯಗಳನ್ನು ಆಡಲಿದ್ದಾರೆ. ರಾತ್ರಿ 10:30ಕ್ಕೆ ಮಹಿಳೆಯರ ಜಿಮ್ನಾಸ್ಟಿಕ್ಸ್ ಆಲ್-ಅರೌಂಡ್ ಫೈನಲ್ನಲ್ಲಿ ಪ್ರಣತಿ ನಾಯಕ್ ನೇತೃತ್ವದ ಭಾರತೀಯ ತಂಡ ಕಣಕ್ಕಿಳಿಯಲಿದೆ.
ಹೆಚ್ಚಲಿದೆ ಬಾಕ್ಸಿಂಗ್ ಪಂದ್ಯಗಳ ರೋಚಕತೆ
ರಾತ್ರಿಯ ವೇಳೆಯಲ್ಲಿ ಬಾಕ್ಸಿಂಗ್ ಪಂದ್ಯಗಳ ರೋಚಕತೆ ಹೆಚ್ಚಲಿದೆ. ರಾತ್ರಿ 10:45ಕ್ಕೆ ಮಹಿಳೆಯರ 54 ಕೆಜಿ ವಿಭಾಗದಲ್ಲಿ ಪ್ರೀತಿ, ರಾತ್ರಿ 11:45ಕ್ಕೆ ಪುರುಷರ 55 ಕೆಜಿ ವಿಭಾಗದಲ್ಲಿ ಜಡುಮಣಿ ಸಿಂಗ್ ಮಂಡೇಂಗ್ಬಾಮ್ ಮತ್ತು ಮಧ್ಯರಾತ್ರಿ 12:45ಕ್ಕೆ ಆದಿತ್ಯ ಪ್ರತಾಪ್ ಯಾದವ್ ತಮ್ಮ ಎದುರಾಳಿಗಳನ್ನು ಎದುರಿಸಲಿದ್ದಾರೆ. ರಾತ್ರಿ 11:15ಕ್ಕೆ ವೇಟ್ಲಿಫ್ಟಿಂಗ್ ಪುರುಷರ 65 ಕೆಜಿ ಫೈನಲ್ನಲ್ಲಿ ರಾಜಾ ಮಥುಪಾಂಡಿ ಸ್ಪರ್ಧಿಸಲಿದ್ದು, ಜುಲೈ 27ರ ಮುಂಜಾನೆ 1:56ಕ್ಕೆ ಈಜು ರಿಲೇ ತಂಡ ಅರ್ಹತೆ ಪಡೆದರೆ ಫೈನಲ್ನಲ್ಲಿ ಪದಕಕ್ಕಾಗಿ ಹೋರಾಡಲಿದೆ.
ಇದನ್ನೂ ಓದಿ: ‘ಹಸಿದಾಗ ಹಳಸಿದ ಅನ್ನವೂ ಮದುವೆ ಊಟದಂತೆ’: ಶ್ರೇಯಸ್ ಅಯ್ಯರ್ ಗೆಲುವಿಗೆ ಮಾಜಿ ಕ್ರಿಕೆಟಿಗ ರಮೇಶ್ ಹಾಸ್ಯಮಯ ಪ್ರತಿಕ್ರಿಯೆ
