ಮುಂಬೈ: ನಿಖಿಲ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ (Ramayana) ಚಿತ್ರದ ಟ್ರೇಲರ್ ಬಿಡುಗಡೆಯನ್ನು ಮುಂದೂಡಲಾಗಿದೆ ಎಂದು ನಿರ್ಮಾಪಕ ನಮಿತ್ ಮಲ್ಹೋತ್ರಾ ಶುಕ್ರವಾರ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಈ ಪೌರಾಣಿಕ ಮಹಾಕಾವ್ಯ ಆಧಾರಿತ ಚಿತ್ರಕ್ಕೆ ಜಾಗತಿಕ ಮಟ್ಟದಲ್ಲಿ ಬೃಹತ್ ಬೆಂಬಲ ಸಿಕ್ಕಿದ್ದು, ಖ್ಯಾತ ನಿರ್ಮಾಣ ಸಂಸ್ಥೆ ‘ಸೋನಿ ಪಿಕ್ಚರ್ಸ್’ ಈ ಸಿನಿಮಾದ ಜಾಗತಿಕ ವಿತರಣೆಯ ಹಕ್ಕನ್ನು ಪಡೆದುಕೊಂಡಿದೆ.
ಸಿನಿಮಾ ತಂಡ ಹೇಳಿದ್ದೇನು?
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿರುವ ನಮಿತ್ ಮಲ್ಹೋತ್ರಾ, ಭಾರತೀಯ ಸಂಸ್ಕೃತಿ ಮತ್ತು ಕಥೆಯನ್ನು ಜಗತ್ತಿಗೆ ತಲುಪಿಸುವ ತಮ್ಮ ಕನಸಿಗೆ ಸೋನಿ ಪಿಕ್ಚರ್ಸ್ ಸಂಸ್ಥೆಯ ಜೊತೆಗಿನ ಪಾಲುದಾರಿಕೆ ಹೊಸ ಬಲ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಹಾಲೀವುಡ್‌ನ ಬೃಹತ್ ಸಿನಿಮಾಗಳ ಮಾದರಿಯಲ್ಲಿಯೇ ರಾಮಾಯಣ ಚಿತ್ರವನ್ನೂ ಜಾಗತಿಕವಾಗಿ ಅದ್ದೂರಿಯಾಗಿ ಬಿಡುಗಡೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಈ ಜಾಗತಿಕ ಸಹಯೋಗದ ಹಿನ್ನೆಲೆಯಲ್ಲಿ, ಶುಕ್ರವಾರ ಬೆಳಿಗ್ಗೆ ಬಿಡುಗಡೆಯಾಗಬೇಕಿದ್ದ ಟ್ರೇಲರ್ ಅನ್ನು ಮುಂದೂಡಲಾಗಿದ್ದು, ಹೊಸ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ಅವರು ತಿಳಿಸಿದ್ದಾರೆ.
400 ಕೋಟಿ ಬಜೆಟ್ ಸಿನಿಮಾ
ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ದುಬಾರಿ ಬಜೆಟ್‌ನಲ್ಲಿ, ಸುಮಾರು 4000 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಚಿತ್ರದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ, ಸನ್ನಿ ಡಿಯೋಲ್, ಯಶ್ ಮತ್ತು ರವಿ ದುಬೆ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಸಂಗೀತ ದಿಗ್ಗಜ ಎ.ಆರ್. ರೆಹಮಾನ್ ಹಾಗೂ ಹ್ಯಾನ್ಸ್ ಜಿಮ್ಮರ್ ಜಂಟಿಯಾಗಿ ಸಂಗೀತ ಸಂಯೋಜಿಸುತ್ತಿದ್ದು, ಕುಮಾರ್ ವಿಶ್ವಾಸ್ ಸಾಹಿತ್ಯ ಒದಗಿಸಿದ್ದಾರೆ. ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್, ಡಿಎನ್‌ಇಜಿ ಮತ್ತು ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಂಸ್ಥೆಗಳು ಜಂಟಿಯಾಗಿ ಇದನ್ನು ನಿರ್ಮಿಸುತ್ತಿವೆ. ಎರಡು ಭಾಗಗಳಲ್ಲಿ ಮೂಡಿಬರಲಿರುವ ಈ ಸರಣಿಯ ಮೊದಲ ಭಾಗವು 2026 ರ ದೀಪಾವಳಿ ಹಬ್ಬಕ್ಕೆ ಪ್ರಪಂಚದಾದ್ಯಂತ ತೆರೆಕಾಣಲಿದ್ದು, ಎರಡನೇ ಭಾಗವು 2027 ರಲ್ಲಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಪ್ರಾದೇಶಿಕ ಸಿನಿಮಾದಿಂದ ಗ್ಲೋಬಲ್ ಸ್ಟೇಜ್‌ವರೆಗೆ ಯಶ್ ಜರ್ನಿ: ಹಳೆಯ ದಿನಗಳನ್ನು ನೆನೆದು ಭಾವುಕರಾದ ರಾಕಿಂಗ್ ಸ್ಟಾರ್
