TOP NEWS

Salman Khan: ಆರೋಗ್ಯದ ಬಗ್ಗೆ ಗಾಳಿಸುದ್ದಿ ಹಬ್ಬಿಸಿದವರಿಗೆ ಸಲ್ಮಾನ್ ಖಾನ್ ಟಾಂಗ್

Is Salman Khan Unwell Bollywood Star Witty Reply to Netizens Health Concerns via Instagram Post

ಮುಂಬೈ: ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ (Salman Khan) ಸದಾ ತಮ್ಮ ನೇರ ನುಡಿಯಿಂದಲೇ ಸುದ್ದಿಯಲ್ಲಿರುವವರು. ಇತ್ತೀಚೆಗೆ ತಮ್ಮ ಆರೋಗ್ಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಬಿಸಿಬಿಸಿ ಚರ್ಚೆಗಳಿಗೆ ಸಲ್ಲು ಭಾಯ್ ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಟಾಂಗ್ ನೀಡಿದ್ದು, ಇದು ಅವರ ಅಭಿಮಾನಿಗಳ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

ಫೋಟೋ ಶೇರ್‌ ಮಾಡಿಕೊಂಡ ನಟ

ಭಾನುವಾರ ತಡರಾತ್ರಿ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಕೆಲವು ಬ್ಲಾಕ್ ಆಂಡ್ ವೈಟ್ ಫೋಟೋಗಳನ್ನು ಹಂಚಿಕೊಂಡಿರುವ ಸಲ್ಮಾನ್ ಖಾನ್, “ನಿಮ್ಮೆಲ್ಲರ ಆರೋಗ್ಯ ಹೇಗಿದೆ?” (ಆಪ್ ಲೋಗೋ ಕಿ ತಬಿಯತ್ ಕೈಸಿ ಹೈ) ಎಂದು ಮಾರ್ಮಿಕವಾಗಿ ಬರೆದುಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಮ್ಮ ಆರೋಗ್ಯದ ಬಗ್ಗೆ ಗಾಳಿಸುದ್ದಿ ಹಬ್ಬಿಸುತ್ತಿದ್ದವರಿಗೆ ಸಲ್ಮಾನ್ ಈ ಮೂಲಕ ಹಾಸ್ಯಭರಿತವಾಗಿಯೇ ತಿರುಗೇಟು ನೀಡಿದ್ದಾರೆ. ಈ ಫೋಟೋಗಳಲ್ಲಿ ಡೆನಿಮ್ ಜಾಕೆಟ್ ಹಾಗೂ ಕೌಬಾಯ್ ಹ್ಯಾಟ್ ಧರಿಸಿ ಸಲ್ಮಾನ್ ಖಾನ್ ಎಂದಿನಂತೆ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ನಟಿಯಾದ ಮಹಿ ವಿಜ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಹಾಗೂ ಸಾವಿರಾರು ಅಭಿಮಾನಿಗಳು ಈ ಪೋಸ್ಟ್‌ಗೆ ಕಮೆಂಟ್ ಮಾಡುವ ಮೂಲಕ ಸಲ್ಮಾನ್ ಅವರ ಸಮಯಪ್ರಜ್ಞೆಯನ್ನು ಶ್ಲಾಘಿಸಿದ್ದಾರೆ.

ವಾಸ್ತವವಾಗಿ, ಕಳೆದ ವಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಲ್ಮಾನ್ ಖಾನ್ ಅವರ ಲುಕ್ ನೋಡಿ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರು. ಕೊಳೆಗೇರಿ ಪುನರ್ವಸತಿ ಪ್ರಾಧಿಕಾರದ (SRA) ಹೊಸ ಐಟಿ ಸರ್ವರ್ ರೂಮ್ ಉದ್ಘಾಟನೆಗೆ ಬಂದಿದ್ದ ಸಲ್ಮಾನ್, ಎಂದಿಗಿಂತ ತುಂಬಾ ಸಣ್ಣಗಾದಂತೆ ಹಾಗೂ ಆಯಾಸಗೊಂಡಂತೆ ಕಾಣುತ್ತಿದ್ದರು. ಈ ವಿಡಿಯೋಗಳು ಮತ್ತು ಫೋಟೋಗಳು ವೈರಲ್ ಆಗುತ್ತಿದ್ದಂತೆಯೇ, “ಸಲ್ಮಾನ್ ಖಾನ್‌ಗೆ ಏನಾಗಿದೆ? ಅವರಿಗೆ ಹುಷಾರಿಲ್ಲವೇ? ನೋಡಲು ನಟ ಧರ್ಮೇಂದ್ರ ಅವರಂತೆ ವಯಸ್ಸಾದ ಹಾಗೆ ಕಾಣುತ್ತಿದ್ದಾರೆ” ಎಂದು ನೆಟ್ಟಿಗರು ಕಳವಳ ವ್ಯಕ್ತಪಡಿಸಿ, ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದರು. ಸದ್ಯ ಫೋಟೋ ಪೋಸ್ಟ್ ಮಾಡುವ ಮೂಲಕ ತಮಗೆ ಯಾವುದೇ ಆರೋಗ್ಯ ಸಮಸ್ಯೆಯಿಲ್ಲ ಎಂಬುದನ್ನು ಸಲ್ಲು ಭಾಯ್ ಪರೋಕ್ಷವಾಗಿ ಸ್ಪಷ್ಟಪಡಿಸಿದ್ದಾರೆ.

ಸಲ್ಲು ಭಾಯ್‌ ಮುಂದಿನ ಸಿನಿಮಾ ಯಾವುದು?

ಸಿನಿಮಾ ವಿಚಾರಕ್ಕೆ ಬರುವುದಾದರೆ, ಸಲ್ಮಾನ್ ಖಾನ್ ಸದ್ಯ ತಮ್ಮ ಬಹುನಿರೀಕ್ಷಿತ ‘ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್’ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಅಪೂರ್ವ ಲಖಿಯಾ ನಿರ್ದೇಶನದ, ಚಿತ್ರಾಂಗದಾ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಯುದ್ಧ ಆಧಾರಿತ ಸಿನಿಮಾ ಈಗಾಗಲೇ ಹಲವು ಬಾರಿ ಮುಂದೂಡಲ್ಪಟ್ಟಿದೆ. ಆದರೆ ಚಿತ್ರೀಕರಣ ಸಂಪೂರ್ಣವಾಗಿ ನಿಂತುಹೋಗಿದೆ ಎಂಬ ವದಂತಿಗಳನ್ನು ಚಿತ್ರತಂಡ ತಳ್ಳಿಹಾಕಿದ್ದು, ಶೀಘ್ರದಲ್ಲೇ ಹೊಸ ಬಿಡುಗಡೆ ದಿನಾಂಕವನ್ನು ಪ್ರಕಟಿಸುವುದಾಗಿ ತಿಳಿಸಿದೆ.

ಇದನ್ನೂ ಓದಿ: ರಾಮಾಯಣದಲ್ಲಿ ಸಾಯಿ ಪಲ್ಲವಿ ಸೀತೆ ಪಾತ್ರ ಮಾಡೋದಕ್ಕೆ ಅನ್ನು ಕಪೂರ್ ಕಿಡಿ

Leave a Reply

Your email address will not be published. Required fields are marked *