ನವದೆಹಲಿ: ನಿತೇಶ್ ತಿವಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದಲ್ಲಿ ಸೀತಾ ದೇವಿಯ ಪಾತ್ರಕ್ಕೆ ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಅವರನ್ನು ಆಯ್ಕೆ ಮಾಡಿರುವುದರ ಕುರಿತು ಬಾಲಿವುಡ್‌ನ ಹಿರಿಯ ನಟ ಅನ್ನು ಕಪೂರ್ (Annu Kapoor) ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ರಾಮಾಯಣದಂತಹ ಮಹಾಕಾವ್ಯಗಳನ್ನು ಮತ್ತೆ ಸಿನಿಮಾ ಮಾಡುವ ಅಗತ್ಯವಿದೆಯೇ ಎಂದು ಪ್ರಶ್ನಿಸಿದ್ದ ಅನ್ನು ಕಪೂರ್, ಈಗ ಚಿತ್ರದ ಪಾತ್ರಧಾರಿಗಳ ಆಯ್ಕೆಯನ್ನು ಬಹಿರಂಗವಾಗಿಯೇ ಟೀಕಿಸಿದ್ದಾರೆ.
ಸೀತೆಯ ಪಾತ್ರಕ್ಕೆ ಯಾರನ್ನ ಆಯ್ಕೆ ಮಾಡಿದ್ದಾರೆ?
ಮಾಧ್ಯಮ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅನ್ನು ಕಪೂರ್, “ಅವರು ಏನು ಸಿನಿಮಾ ಮಾಡುತ್ತಾರೆ? ರಾಮಾನಂದ್ ಸಾಗರ್ ಅವರ ಕ್ಲಾಸಿಕ್ ‘ರಾಮಾಯಣ’ವನ್ನು ತಾಂತ್ರಿಕವಾಗಿ ತರಾವರಿ ಗ್ರಾಫಿಕ್ಸ್ ಬಳಸಿ ಕೇವಲ ಪ್ರದರ್ಶನಕ್ಕಷ್ಟೇ ಸೀಮಿತ ಮಾಡಬಹುದು. ಆದರೆ ಅವರು ಸೀತಾ ದೇವಿಯ ಪಾತ್ರಕ್ಕೆ ಯಾರನ್ನು ಆಯ್ಕೆ ಮಾಡಿದ್ದಾರೆ ಎಂಬುದನ್ನು ಒಮ್ಮೆ ಯೋಚಿಸಿ. ಈ ದೇಶದ ಹಿಂದೂಗಳು ಶ್ರೀರಾಮನನ್ನು ನಾರಾಯಣನ ಅವತಾರವೆಂದು ಮತ್ತು ಸೀತೆಯನ್ನು ತಾಯಿ ಎಂದು ಪೂಜಿಸುತ್ತಾರೆ. ಅಂತಹುದರಲ್ಲಿ ತಾಯಿ ಸೀತೆಯ ಪಾತ್ರಕ್ಕೆ ಯಾರನ್ನು ತಂದಿದ್ದಾರೆ? ಸಿನಿಮಾ ಮೊದಲು ಬಿಡುಗಡೆಯಾಗಲಿ, ಆಮೇಲೆ ನೋಡೋಣ” ಎಂದು ವ್ಯಂಗ್ಯವಾಡಿದ್ದಾರೆ. ಇದೇ ವೇಳೆ ಚಿತ್ರದ ನಿರ್ದೇಶಕ ನಿತೇಶ್ ತಿವಾರಿ ಯಾರು ಎಂದು ತಮಗೆ ಗೊತ್ತೇ ಇಲ್ಲ ಎಂದಿರುವ ಅವರು, “ನಾನು ಚಿತ್ರಗಳನ್ನು ನೋಡುವುದಿಲ್ಲ, ಹಾಗಾಗಿ ಅವರ ಹೆಸರನ್ನಾಗಲಿ, ಅವರು ಏನು ಮಾಡುತ್ತಾರೆ ಎಂದಾಗಲಿ ನನಗೆ ಗೊತ್ತಿಲ್ಲ. ನಾನೇನೂ ದೊಡ್ಡದನ್ನು ಮಿಸ್ ಮಾಡಿಕೊಂಡಿಲ್ಲ” ಎಂದು ನೇರವಾಗಿಯೇ ತಿವಿದಿದ್ದಾರೆ.
ಮತ್ತೊಂದೆಡೆ, ಸಾಯಿ ಪಲ್ಲವಿ ಅವರಿಗೆ ಸರಿಯಾಗಿ ಹಿಂದಿ ಮಾತನಾಡಲು ಬರುವುದಿಲ್ಲ ಎಂಬ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅವರು ಭಾರಿ ಟ್ರೋಲ್‌ಗೆ ಒಳಗಾಗಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿ ನಡೆದ ತಮ್ಮ ಮುಂಬರುವ ‘ಏಕ್ ದಿನ್’ ಚಿತ್ರದ ಪ್ರಚಾರದ ವೇಳೆ ಸಾಯಿ ಪಲ್ಲವಿ ಹಿಂದಿಯಲ್ಲಿ ಮಾತನಾಡಲು ಪ್ರಯತ್ನಿಸಿ ಪರದಾಡಿದ್ದರು. ತಮಗೆ ಸರಾಗವಾಗಿ ಹಿಂದಿ ಮಾತನಾಡಲು ಬರುವುದಿಲ್ಲ ಎಂದು ಅವರೇ ಒಪ್ಪಿಕೊಂಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಎಕ್ಸ್ (X) ಜಾಲತಾಣದಲ್ಲಿ ನೆಟ್ಟಿಗರು, “ಮೂಲ ಹಿಂದಿ ಪದಗಳನ್ನೇ ಆಡಲು ಬಾರದ ಸಾಯಿ ಪಲ್ಲವಿ ಅವರನ್ನು ಸೀತಾ ಮಾತೆಯ ಪಾತ್ರಕ್ಕೆ ಹೇಗೆ ಆಯ್ಕೆ ಮಾಡಿದರು? ಚಿತ್ರದಲ್ಲಿ ಇವರ ಧ್ವನಿಯನ್ನು ಡಬ್ ಮಾಡಲಾಗುತ್ತದೆಯೇ?” ಎಂದು ನಿರ್ದೇಶಕರ ಆಯ್ಕೆಯನ್ನು ಕಟುವಾಗಿ ಪ್ರಶ್ನಿಸುತ್ತಿದ್ದಾರೆ.
ಯಾರೆಲ್ಲಾ ಇದ್ದಾರೆ ರಾಮಾಯಣ ಸಿನಿಮಾದಲ್ಲಿ?
ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ಹಾಗೂ ಸನ್ನಿ ಡಿಯೋಲ್ ಹನುಮಂತನ ಪಾತ್ರದಲ್ಲಿ ನಟಿಸುತ್ತಿರುವ ಈ ಬೃಹತ್ ಬಜೆಟ್‌ನ ‘ರಾಮಾಯಣ’ ಚಿತ್ರವನ್ನು ಎರಡು ಭಾಗಗಳಾಗಿ ನಿರ್ಮಿಸಲಾಗುತ್ತಿದೆ. ನಮಿತ್ ಮಲ್ಹೋತ್ರಾ ಮತ್ತು ಯಶ್ ಅವರ ಜಂಟಿ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದ ಮೊದಲ ಭಾಗವು 2026 ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಜಾಗತಿಕವಾಗಿ ಐಮ್ಯಾಕ್ಸ್ (IMAX) ಪರದೆಗಳ ಮೇಲೆ ಬಿಡುಗಡೆಯಾಗಲು ಸಜ್ಜಾಗಿದೆ.
ಇದನ್ನೂ ಓದಿ: ಏಳು ತಿಂಗಳ ಗರ್ಭಿಣಿಯಾಗಿದ್ದರೂ ಸಾಹಸ ದೃಶ್ಯಗಳಲ್ಲಿ ನಟಿ ದೀಪಿಕಾ ಪಡುಕೋಣೆ ಭಾಗಿ: ‘ರಾಕಾ’ ಚಿತ್ರಕ್ಕಾಗಿ ಅಹೋರಾತ್ರಿ ಶ್ರಮ!
