ಮುಂಬೈ: ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ಸದ್ಯ ತಮ್ಮ ವೃತ್ತಿಜೀವನ ಹಾಗೂ ವೈಯಕ್ತಿಕ ಬದುಕಿನ ಮಹತ್ವದ ದಿನಗಳನ್ನು ಒಟ್ಟೊಟ್ಟಿಗೇ ನಿಭಾಯಿಸುತ್ತಿದ್ದಾರೆ. ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ದೀಪಿಕಾ, ತಾವೇ ನಟಿಸುತ್ತಿರುವ ‘ರಾಕಾ’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ನಿರ್ದೇಶಕ ಅಟ್ಲೀ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಬಿಗ್ ಬಜೆಟ್ ಆ್ಯಕ್ಷನ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಮತ್ತು ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮೊದಲ ಬಾರಿಗೆ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಈ ಸಿನಿಮಾ ಅನೌನ್ಸ್ ಆದಾಗಿನಿಂದಲೂ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದ್ದು, ಅದರಲ್ಲೂ ದೀಪಿಕಾ ಅವರ ಭರ್ಜರಿ ಆ್ಯಕ್ಷನ್ ಅವತಾರವನ್ನು ನೋಡಲು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ. ಸದ್ಯ ಏಳು ತಿಂಗಳ ಗರ್ಭಿಣಿಯಾಗಿರುವ ದೀಪಿಕಾ, ತಮ್ಮ ಮೂರನೇ ತ್ರೈಮಾಸಿಕದಲ್ಲೂ ದಿನಾಲೂ ತೀವ್ರವಾದ ಸಾಹಸ ದೃಶ್ಯಗಳ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.
ಗರ್ಭಿಣಿಯಾಗಿದ್ರೂ ಶೂಟಿಂಗ್‌ನಲ್ಲಿ ನಟಿ ಬ್ಯುಸಿ
ವೆರೈಟಿ ಇಂಡಿಯಾ ವರದಿ ಪ್ರಕಾರ, ದೀಪಿಕಾ ಪಡುಕೋಣೆ ಅವರು ತಮ್ಮ ಭಾಗದ ಚಿತ್ರೀಕರಣವನ್ನು ನಿಗದಿತ ಸಮಯಕ್ಕೆ ಮುಗಿಸಿಕೊಡಲು ದಿನಾಲೂ ಶೂಟಿಂಗ್‌ನಲ್ಲಿ ಭಾಗಿಯಾಗುತ್ತಿದ್ದಾರೆ. ಇತ್ತೀಚೆಗಷ್ಟೇ ಚಿತ್ರರಂಗದಲ್ಲಿ ಎಂಟು ಗಂಟೆಗಳ ಶಿಫ್ಟ್ ನಿಯಮದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದರೂ, ದೀಪಿಕಾ ಮಾತ್ರ ಸಿನಿಮಾ ಕಡೆಗೆ ಸಂಪೂರ್ಣ ಗಮನ ಹರಿಸಿದ್ದಾರೆ. ಹೆರಿಗೆ ರಜೆ ತೆಗೆದುಕೊಳ್ಳುವ ಮುನ್ನ ‘ರಾಕಾ’ ಚಿತ್ರದ ಶೂಟಿಂಗ್ ಮುಗಿಸಿಕೊಡಲು ಅವರು ಶ್ರಮಿಸುತ್ತಿದ್ದಾರೆ. ಗರ್ಭಿಣಿಯಾಗಿರುವ ಹೊರತಾಗಿಯೂ ಅವರು ರಾತ್ರಿ ಪಾಳಿಯ ಶೂಟಿಂಗ್‌ನಲ್ಲಿ ಭಾಗವಹಿಸುತ್ತಿರುವುದಲ್ಲದೆ, ಕಷ್ಟಕರವಾದ ಆ್ಯಕ್ಷನ್ ದೃಶ್ಯಗಳಲ್ಲೂ ನಟಿಸುತ್ತಿದ್ದಾರೆ. ಚಿತ್ರದ ಕಠಿಣ ಕೆಲಸಗಳ ನಡುವೆಯೂ ತಮ್ಮ ಎರಡನೇ ಮಗುವನ್ನು ಸ್ವಾಗತಿಸಲು ಸಜ್ಜಾಗುತ್ತಿದ್ದಾರೆ.
ದೀಪಿಕಾ ಅವರ ಈ ಕಟಿಬದ್ಧತೆಯನ್ನು ನೋಡಿ ಚಿತ್ರತಂಡದ ಸದಸ್ಯರೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶೂಟಿಂಗ್ ಸೆಟ್‌ನಲ್ಲಿ ದೀಪಿಕಾ ಕೆಲಸ ಮಾಡುತ್ತಿರುವ ರೀತಿ ಎಲ್ಲರಿಗೂ ಸ್ಫೂರ್ತಿ ತಂದಿದೆ ಎಂದು ಅವರು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಮನೆಯಲ್ಲಿರುವ ತಮ್ಮ ಒಂದೂವರೆ ವರ್ಷದ ಹೆಣ್ಣು ಮಗುವಿಗೂ ದೀಪಿಕಾ ಅಷ್ಟೇ ಪ್ರೀತಿ ಮತ್ತು ಗಮನವನ್ನು ನೀಡುತ್ತಾ ಎರಡೂ ಜವಾಬ್ದಾರಿಗಳನ್ನು ಸಮನಾಗಿ ನಿಭಾಯಿಸುತ್ತಿದ್ದಾರೆ.
ದೊಡ್ಡ ಚರ್ಚೆ ಹುಟ್ಟುಹಾಕಿದ್ದ ದೀಪಿಕಾ ನಿರ್ಧಾರ
ಚಿತ್ರರಂಗದಲ್ಲಿ ಎಂಟು ಗಂಟೆಗಳ ಕೆಲಸದ ಅವಧಿಯ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಶುರುವಾಗಲು ದೀಪಿಕಾ ಅವರ ನಿರ್ಧಾರವೇ ಕಾರಣವಾಗಿತ್ತು. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಸ್ಪಿರಿಟ್’ ಮತ್ತು ನಾಗ್ ಅಶ್ವಿನ್ ಅವರ ‘ಕಲ್ಕಿ 2’ ಸಿನಿಮಾಗಳಿಂದ ದೀಪಿಕಾ ಹೊರನಡೆದಿದ್ದಾರೆ ಎಂಬ ವರದಿಗಳು ಬಂದಿದ್ದವು. ಕೆಲಸದ ಸಮಯದ ವಿಚಾರದಲ್ಲಿ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ಅವರು ಈ ಸಿನಿಮಾಗಳನ್ನು ಬಿಟ್ಟಿದ್ದಾರೆ ಎಂದು ಹೇಳಲಾಗಿತ್ತು. ಇದು ಇಡೀ ಭಾರತೀಯ ಚಿತ್ರರಂಗದಲ್ಲಿ, ಅದರಲ್ಲೂ ವಿಶೇಷವಾಗಿ ಹೊಸದಾಗಿ ತಾಯಂದಿರಾದ ನಟಿಯರ ಕೆಲಸದ ಅವಧಿಯ ಬಗ್ಗೆ ದೊಡ್ಡ ಸಂವಾದಕ್ಕೆ ಕಾರಣವಾಗಿತ್ತು.
ಅಟ್ಲೀ ನಿರ್ದೇಶನದ ‘ರಾಕಾ’ ಸಿನಿಮಾ ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ದೊಡ್ಡ ದೃಶ್ಯ ವೈಭವದ ಚಿತ್ರವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಅಲ್ಲು ಅರ್ಜುನ್ ಮತ್ತು ದೀಪಿಕಾ ಪಡುಕೋಣೆ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಜಾನ್ವಿ ಕಪೂರ್ ಮತ್ತು ಮೃಣಾಲ್ ಠಾಕೂರ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವೈಜ್ಞಾನಿಕ ಕಲ್ಪನೆ ಮತ್ತು ಫ್ಯಾಂಟಸಿ ಜಗತ್ತಿನ ಕಥೆ ಹೊಂದಿರುವ ಈ ಚಿತ್ರವು ಭರ್ಜರಿ ಆ್ಯಕ್ಷನ್ ದೃಶ್ಯಗಳಿಂದ ಕೂಡಿರಲಿದ್ದು, 2027 ರಲ್ಲಿ ಬಿಡುಗಡೆಯಾಗಲಿದೆ. ಇದರ ಜೊತೆಗೆ ದೀಪಿಕಾ ಪಡುಕೋಣೆ ಅವರು ಸಿದ್ದಾರ್ಥ್ ಆನಂದ್ ನಿರ್ದೇಶನದ ‘ಕಿಂಗ್’ ಸಿನಿಮಾದಲ್ಲೂ ನಟಿಸುತ್ತಿದ್ದು, ಇದರಲ್ಲಿ ಶಾರುಖ್ ಖಾನ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಸುಹಾನಾ ಖಾನ್, ಅಭಿಷೇಕ್ ಬಚ್ಚನ್, ರಾಘವ್ ಜುಯಲ್ ಸೇರಿದಂತೆ ಹಲವರು ನಟಿಸುತ್ತಿರುವ ಈ ಸಿನಿಮಾ 2026ರ ಡಿಸೆಂಬರ್ 24 ರಂದು ತೆರೆಗೆ ಬರಲು ಸಜ್ಜಾಗಿದೆ.
