ನವದೆಹಲಿ: ರಾಜಧಾನಿ ದೆಹಲಿಯ ಜಂತರ್ ಮಂತರ್ ಪ್ರತಿಭಟನಾ ಸ್ಥಳದಲ್ಲಿ ಭಾನುವಾರ ತೀವ್ರ ಹೈಡ್ರಾಮಾ ನಡೆದಿದೆ. ಅಲ್ಲಿ ಧರಣಿ ಕುಳಿತಿದ್ದ ‘ಕಾಕ್‌ರೋಚ್ ಜನತಾ ಪಾರ್ಟಿ’ (CJP) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರ ಮುಖಕ್ಕೆ ಮಹಿಳೆಯೊಬ್ಬರು ಇದ್ದಕ್ಕಿದ್ದಂತೆ ನೀಲಿ ಶಾಯಿ ಎರಚಿದ್ದಾರೆ. ಈ ಅನಿರೀಕ್ಷಿತ ಘಟನೆಯಿಂದಾಗಿ ಇಡೀ ಪ್ರತಿಭಟನಾ ಸ್ಥಳ ಕೆಲಕಾಲ ರಣರಂಗದಂತಾಗಿ, ಗೊಂದಲದ ಗೂಡಾಯಿತು. ಸದ್ಯ ಈ ಇಡೀ ದೃಶ್ಯಾವಳಿಗಳ ವಿಡಿಯೋ ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದ್ದು, ದಿಪ್ಕೆ ಅಭಿಮಾನಿಗಳು ಹಾಗೂ ಸ್ಥಳದಲ್ಲಿದ್ದವರು ಮಹಿಳೆಯ ಕೃತ್ಯಕ್ಕೆ ತೀವ್ರ ಆಕ್ರೋಶ ಹೊರಹಾಕುತ್ತಿರುವುದು ಕಂಡುಬಂದಿದೆ.
ಕೆಲಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ
ಆಕೆ ಈ ದಾಳಿಯನ್ನು ಏಕಾಗಿ ನಡೆಸಿದಳು ಎಂಬ ನಿಖರ ಕಾರಣ ಇನ್ನೂ ಬಹಿರಂಗವಾಗಿಲ್ಲ. ಶಾಯಿ ಎರಚಿದ ಬೆನ್ನಲ್ಲೇ ಸ್ಥಳದಲ್ಲಿ ತಳ್ಳಾಟ-ನೂಕಾಟ ಉಂಟಾದರೂ, ಭದ್ರತಾ ಸಿಬ್ಬಂದಿ ತಕ್ಷಣವೇ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಸದ್ಯಕ್ಕೆ ಈ ಕುರಿತು ದೆಹಲಿ ಪೊಲೀಸರು ಅಧಿಕೃತ ಪ್ರಕಟಣೆ ಹೊರಡಿಸಿಲ್ಲ ಹಾಗೂ ತನಿಖೆ ಪ್ರಗತಿಯಲ್ಲಿದೆ.
ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರವಾಗಿ ಪರ-ವಿರೋಧದ ದೊಡ್ಡ ಚರ್ಚೆಯೇ ಶುರುವಾಗಿದೆ. ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಪ್ರಜಾಪ್ರಭುತ್ವದಲ್ಲಿ ಇಂತಹ ದಾಳಿಗಳು ಸರಿಯಲ್ಲ ಎಂದು ಒಂದು ವರ್ಗದ ನೆಟ್ಟಿಗರು ಮಹಿಳೆಯ ವಿರುದ್ಧ ಕಿಡಿಕಾರಿದ್ದರೆ, ಮತ್ತೊಂದು ವರ್ಗದ ಜನರು ಮಾತ್ರ ಇದು ದಿಪ್ಕೆ ಅವರದ್ದೇ ಪಬ್ಲಿಸಿಟಿ ಗಿಮಿಕ್ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ, ತಮ್ಮ ಮೇಲಿನ ಶಾಯಿ ದಾಳಿಗೆ ಟ್ವಿಟರ್ (ಎಕ್ಸ್) ಮೂಲಕ ಪ್ರತಿಕ್ರಿಯಿಸಿರುವ ಅಭಿಜೀತ್ ದಿಪ್ಕೆ, “ನೀಲಿ ನನ್ನ ಹೆಮ್ಮೆಯ ಬಣ್ಣ… ಜೈ ಭೀಮ್!” ಎಂದು ಬರೆಯುವ ಮೂಲಕ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.
ಆಸ್ಪತ್ರೆಗೆ ಸೋನಂ ದಾಖಲು
ವಾಸ್ತವವಾಗಿ, ಈ ಹೈಡ್ರಾಮಾ ನಡೆಯುವುದಕ್ಕೂ ಕೆಲವೇ ಗಂಟೆಗಳ ಮುನ್ನ ಪರಿಸರ ಹೋರಾಟಗಾರ ಸೋನಂ ವಾಂಗ್ಚುಕ್ ಅವರ ಆರೋಗ್ಯ ಕೈಕೊಟ್ಟ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಿದ್ದರು. ನೀಟ್ ಪರೀಕ್ಷೆ ಅಕ್ರಮದ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ವಾಂಗ್ಚುಕ್ ಅವರು ಕಳೆದ 20 ದಿನಗಳಿಂದ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಅವರಿಗೆ ಸಿಜೆಪಿ ಕೂಡ ಬೆಂಬಲ ನೀಡಿತ್ತು.
ಯಾವಾಗ ಪೊಲೀಸರು ವಾಂಗ್ಚುಕ್ ಅವರನ್ನು ಆಸ್ಪತ್ರೆಗೆ ಕರೆದೊಯ್ದರೋ, ತಕ್ಷಣವೇ ಅಭಿಜೀತ್ ದಿಪ್ಕೆ ತಾವು ಕೂಡ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೂರುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಘೋಷಿಸಿದ್ದರು. ಅವರು ಈ ಘೋಷಣೆ ಬೆನ್ನಲ್ಲೇ ಮಹಿಳೆಯೊಬ್ಬರಿಂದ ಶಾಯಿ ದಾಳಿಗೆ ತುತ್ತಾಗಿದ್ದಾರೆ. ಆದರೆ, ಗಂಭೀರವಾದ ನೀಟ್ ಹಗರಣ ಹಾಗೂ ಸೋನಂ ವಾಂಗ್ಚುಕ್ ಅವರ ಪ್ರಾಮಾಣಿಕ ಹೋರಾಟವನ್ನು ದಿಪ್ಕೆ ಅವರು ತಮ್ಮ ಸ್ವಂತ ರಾಜಕೀಯ ಮೈಲೇಜ್‌ಗಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ನೆಟ್ಟಿಗರು ವ್ಯಾಪಕವಾಗಿ ಟೀಕಿಸುತ್ತಿದ್ದಾರೆ.
ಇದನ್ನೂ ಓದಿ: ಸೋನಂ ವಾಂಗ್ಚುಕ್ ಆಮರಣಾಂತ ಉಪವಾಸಕ್ಕೆ 20 ದಿನ: ಜುಲೈ 20ರ ಬೃಹತ್ ಸಂಸತ್ ಚಲೋ ಯಶಸ್ಸಿಗೆ ದೇಶದ ಯುವಜನತೆಗೆ ಕರೆ
