ದೆಹಲಿ: ಆರ್ಎಸ್ಎಸ್ (RSS) ಸಂಘಟನೆಯನ್ನು ಕಾನೂನಾತ್ಮಕವಾಗಿ ನೋಂದಣಿ ಮಾಡುವ ಅಗತ್ಯವಿಲ್ಲ, ಏಕೆಂದರೆ ಸರ್ಕಾರದಿಂದ ಧನಸಹಾಯ ಪಡೆಯುವವರಿಗೆ ಮಾತ್ರ ನೋಂದಣಿ ಬೇಕು ಎಂದು ಸಂಘಟನೆಯ ಮುಖ್ಯಸ್ಥ ಮೋಹನ್ ಭಾಗವತ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಆದರೆ, ಆರ್ಎಸ್ಎಸ್ ಒಕ್ಕೂಟಕ್ಕೆ ಸೇರಿದ ನೋಂದಾಯಿತ ಸಂಸ್ಥೆಗಳು ಸರ್ಕಾರದ ಸಾರ್ವಜನಿಕ ವಲಯದ ಉದ್ಯಮಗಳಿಂದ ಕೋಟ್ಯಂತರ ರೂಪಾಯಿ ಹಣವನ್ನು ದೇಣಿಗೆ ರೂಪದಲ್ಲಿ ಪಡೆಯುತ್ತಿರುವುದು ತನಿಖಾ ವರದಿಯೊಂದರಿಂದ ಬಹಿರಂಗಗೊಂಡಿದೆ. ದೇಶದ ಪ್ರತಿಷ್ಠಿತ ಸಾರ್ವಜನಿಕ ವಲಯದ ಸಂಸ್ಥೆಯಾದ ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ (ONGC), ಆರ್ಎಸ್ಎಸ್ ಸಂಪರ್ಕ ಹೊಂದಿರುವ 20 ಸಂಸ್ಥೆಗಳಿಗೆ 2013 ರಿಂದೀಚೆಗೆ ಬರೋಬ್ಬರಿ 670.97 ಕೋಟಿ ರೂಪಾಯಿಗಳನ್ನು ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ನಿಧಿಯಿಂದ ನೀಡಿದೆ ಎಂದು ಮಾಧ್ಯಮ ಸಂಸ್ಥೆಯೊಂದರ ತನಿಖೆ ಬಯಲಿಗೆಳೆದಿದೆ.
ಒಟ್ಟು 4,531 ಕೋಟಿ ರೂಪಾಯಿ ಸಿಎಸ್ಆರ್ ನಿಧಿ
ಒಎನ್ಜಿಸಿ ಸಂಸ್ಥೆಯು 2015 ರಿಂದ 2025 ರ ಅವಧಿಯಲ್ಲಿ ದೇಶಾದ್ಯಂತ 2,000 ಕ್ಕೂ ಹೆಚ್ಚು ಸಂಸ್ಥೆಗಳಿಗೆ ಒಟ್ಟು 4,531 ಕೋಟಿ ರೂಪಾಯಿ ಸಿಎಸ್ಆರ್ ನಿಧಿ ಹಂಚಿಕೆ ಮಾಡಿದ್ದು, ಅದರಲ್ಲಿ ಶೇಕಡಾ 14.7 ರಷ್ಟು ದೊಡ್ಡ ಮೊತ್ತವನ್ನು ಆರ್ಎಸ್ಎಸ್ ಹಿನ್ನೆಲೆಯ ಈ 20 ಸಂಸ್ಥೆಗಳಿಗೇ ನೀಡಲಾಗಿದೆ. ಆಸ್ಸಾಮಿನ ಶಿವಸಾಗರ ಜಿಲ್ಲೆಯಲ್ಲಿರುವ 300 ಹಾಸಿಗೆಗಳ ಸ್ವರ್ಗದೇವ್ ಸಿಯು-ಕಾ-ಫಾ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯು ಈ ನಿಧಿಯ ಅತಿ ದೊಡ್ಡ ಫಲಾನುಭವಿಯಾಗಿದೆ. ಈ ಆಸ್ಪತ್ರೆಯನ್ನು ಆರ್ಎಸ್ಎಸ್ ಸಿದ್ಧಾಂತದ ಅಡಿಯಲ್ಲಿ ನಡೆಯುವ ಡಾ. ಬಾಬಾಸಾಹೇಬ್ ಅಂಬೇಡ್ಕರ್ ವೈದ್ಯಕೀಯ ಪ್ರತಿಷ್ಠಾನದೊಂದಿಗೆ ಸೇರಿ ಒಎನ್ಜಿಸಿ ನಡೆಸುತ್ತಿದ್ದು, ಇದಕ್ಕೆ 434 ಕೋಟಿ ರೂಪಾಯಿಗೂ ಅಧಿಕ ಹಣ ಸಂದಾಯವಾಗಿದೆ. ಎರಡನೇ ಅತಿ ದೊಡ್ಡ ಫಲಾನುಭವಿಯಾಗಿ ನಾಗಪುರದ ಡಾ. ಆಬಾಜಿ ಥಟ್ಟೆ ಸೇವಾ ಔರ್ ಅನುಸಂಧಾನ ಸಂಸ್ಥೆ ಹೊರಹೊಮ್ಮಿದ್ದು, ಅಲ್ಲಿ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆ ಸ್ಥಾಪಿಸಲು 140 ಕೋಟಿ ರೂಪಾಯಿ ನೀಡಲಾಗಿದೆ. ಈ ಸಂಸ್ಥೆಯ ಪ್ರಮುಖರು ಆರ್ಎಸ್ಎಸ್ ಮತ್ತು ವಿಶ್ವಹಿಂದೂ ಪರಿಷತ್ನೊಂದಿಗೆ ನೇರ ನಂಟು ಹೊಂದಿದ್ದಾರೆ.
ದೊಡ್ಡ ಆಸ್ಪತ್ರೆಗಳಲ್ಲದೆ ಶಿಕ್ಷಣ, ಯೋಗ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಸಂಘದ ಇತರೆ 18 ಅಂಗಸಂಸ್ಥೆಗಳಿಗೂ ಒಎನ್ಜಿಸಿ ಕೋಟ್ಯಂತರ ರೂಪಾಯಿ ಧನಸಹಾಯ ಮಾಡಿದೆ. ಬೆಂಗಳೂರು ಮೂಲದ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥೆಗೆ (S-VYASA) ಹಾಸ್ಟೆಲ್ ನಿರ್ಮಾಣ ಮತ್ತು ಯೋಗ ಶಿಬಿರಗಳಿಗಾಗಿ 15.53 ಕೋಟಿ ರೂಪಾಯಿ ನೀಡಲಾಗಿದೆ. ಆರ್ಎಸ್ಎಸ್ನ ಸಾಮಾಜಿಕ ಸೇವಾ ಘಟಕವಾದ ಸೇವಾ ಭಾರತಿಯ ವಿವಿಧ ಶಾಖೆಗಳಿಗೆ 13.95 ಕೋಟಿ ರೂಪಾಯಿ ಲಭಿಸಿದೆ. ಇದರೊಂದಿಗೆ ಕರ್ನಾಟಕದ ರಾಷ್ಟ್ರೋತ್ಥಾನ ಪರಿಷತ್ಗೆ 11.6 ಕೋಟಿ ರೂಪಾಯಿ, ಏಕಲ ವಿದ್ಯಾಲಯ ಫೌಂಡೇಶನ್ಗೆ 8.69 ಕೋಟಿ ರೂಪಾಯಿ ಹಾಗೂ ಹಿಮಾಚಲ ಪ್ರದೇಶದ ವಿವೇಕಾನಂದ ವೈದ್ಯಕೀಯ ಸಂಶೋಧನಾ ಟ್ರಸ್ಟ್ಗೆ 7.47 ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ವಿದ್ಯಾಭಾರತಿ ಸಂಘಟನೆಗೆ ಸಂಯೋಜನೆಗೊಂಡಿರುವ ಸೈನಿಕ ಶಾಲೆಗಳು ಮತ್ತು ಶಿಶು ಮಂದಿರಗಳಿಗೂ ಕೋಟಿಗಟ್ಟಲೆ ಹಣ ವರ್ಗಾವಣೆಯಾಗಿದೆ.
ಧನಸಹಾಯದ ಹಿಂದೆ ರಾಜಕೀಯ ಪ್ರಭಾವ
ಈ ಬೃಹತ್ ಮೊತ್ತದ ಧನಸಹಾಯದ ಹಿಂದೆ ರಾಜಕೀಯ ಪ್ರಭಾವವೂ ಕೆಲಸ ಮಾಡಿದೆ ಎಂಬ ಆರೋಪ ಕೇಳಿಬಂದಿದೆ. ಕಳೆದ ಕೆಲವು ವರ್ಷಗಳಿಂದ ಒಎನ್ಜಿಸಿ ಮಂಡಳಿ ಮತ್ತು ಅದರ ಸಿಎಸ್ಆರ್ ಸಮಿತಿಯಲ್ಲಿ ಬಿಜೆಪಿ ನಾಯಕರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಬಿಜೆಪಿ ಸಂಸದ ಸಂಬಿತ್ ಪಾತ್ರಾ ಈ ಹಿಂದೆ ಮಂಡಳಿಯ ನಿರ್ದೇಶಕರಾಗಿದ್ದರು. ಇತ್ತೀಚಿನವರೆಗೂ ಒಎನ್ಜಿಸಿಯ ಸ್ವತಂತ್ರ ನಿರ್ದೇಶಕಿಯಾಗಿದ್ದ ಪಂಜಾಬ್ ಬಿಜೆಪಿ ನಾಯಕಿ ರೀನಾ ಜೈಟ್ಲಿ ಅವರು ಸಿಎಸ್ಆರ್ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಇಷ್ಟೇ ಅಲ್ಲದೆ, ಒಎನ್ಜಿಸಿ ಸಂಸ್ಥೆಯು ಪಿಎಂ-ಕೇರ್ಸ್ ನಿಧಿಗೆ 300 ಕೋಟಿ ರೂಪಾಯಿ ಹಾಗೂ ಗುಜರಾತಿನ ‘ಸ್ಟ್ಯಾಚು ಆಫ್ ಯೂನಿಟಿ’ ವಿಗ್ರಹ ನಿರ್ಮಾಣಕ್ಕೆ ಸುಮಾರು 100 ಕೋಟಿ ರೂಪಾಯಿ ನೀಡಿದ್ದು, ಇದನ್ನು ಭಾರತದ ಮಹಾಲೇಖಪಾಲರು (CAG) ನಿಯಮಬಾಹಿರ ಎಂದು ಈ ಹಿಂದೆ ಆಕ್ಷೇಪಿಸಿದ್ದರು. ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ಆಡಳಿತಕ್ಕೆ ಒಳಪಡುವ ಒಎನ್ಜಿಸಿ, ಬದರಿನಾಥ ಧಾಮದ ಅಭಿವೃದ್ಧಿಗೂ 4.6 ಕೋಟಿ ರೂಪಾಯಿ ನೀಡಿದ್ದು, ಸಾರ್ವಜನಿಕ ಹಣವನ್ನು ಸಂಘಟನಾತ್ಮಕ ಮತ್ತು ಧಾರ್ಮಿಕ ಉದ್ದೇಶಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂಬ ಚರ್ಚೆ ಈಗ ಮುನ್ನೆಲೆಗೆ ಬಂದಿದೆ.
ಇದನ್ನೂ ಓದಿ: ಮೇಕೆದಾಟು ವಿವಾದಕ್ಕೆ ಸಂಸತ್ತಿನಲ್ಲಿ ತಮಿಳುನಾಡು ಗದ್ದಲ; ಜುಲೈ 22 ರಂದು ದೆಹಲಿಯಲ್ಲಿ ಮಹತ್ವದ CWMA ಸಭೆ
