ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ತೂಕ ಇಳಿಸುವ (Weight Loss) ಔಷಧಿಗಳು ವಿಶ್ವಾದ್ಯಂತ ಭಾರಿ ಸಂಚಲನ ಸೃಷ್ಟಿಸುತ್ತಿವೆ. ದಪ್ಪಗಿರುವ ಅಥವಾ ಬೊಜ್ಜಿನ ಸಮಸ್ಯೆ ಎದುರಿಸುತ್ತಿರುವ ಜನರಿಗೆ ತೂಕ ಕಡಿಮೆ ಮಾಡಿಕೊಳ್ಳಲು ಮತ್ತು ಆರೋಗ್ಯ ಸುಧಾರಿಸಿಕೊಳ್ಳಲು ಈ ಮಾತ್ರೆಗಳು ದೊಡ್ಡ ಮಟ್ಟದಲ್ಲಿ ಸಹಾಯ ಮಾಡುತ್ತಿವೆ. ಆದರೆ, ಈ ಔಷಧಿಗಳು ಎಲ್ಲರ ದೇಹದ ಮೇಲೂ ಒಂದೇ ರೀತಿ ಕೆಲಸ ಮಾಡುವುದಿಲ್ಲ ಎಂಬುದು ವೈದ್ಯರ ಕಳವಳಕ್ಕೆ ಕಾರಣವಾಗಿತ್ತು. ಒಂದೇ ರೀತಿಯ ಚಿಕಿತ್ಸೆ ಪಡೆದರೂ ಒಬ್ಬರು ಬೇಗನೆ ತೂಕ ಇಳಿಸಿಕೊಂಡರೆ, ಮತ್ತೊಬ್ಬರಲ್ಲಿ ಯಾವುದೇ ಬದಲಾವಣೆ ಕಾಣಿಸುತ್ತಿರಲಿಲ್ಲ. ಆದರೆ ಈಗ ಈ ಗೊಂದಲಕ್ಕೆ ವಿಜ್ಞಾನಿಗಳು ಸೂಕ್ತ ಪರಿಹಾರವೊಂದನ್ನು ಹುಡುಕಿದ್ದಾರೆ. ಕೇವಲ ಒಂದು ಸಣ್ಣ ರಕ್ತ ಪರೀಕ್ಷೆಯ ಮೂಲಕ ನಿಮ್ಮ ದೇಹಕ್ಕೆ ಯಾವ ಔಷಧಿ ಸೂಕ್ತ ಎಂಬುದನ್ನು ಮೊದಲೇ ಪತ್ತೆಹಚ್ಚಬಹುದು ಎಂದು ಹೊಸ ಸಂಶೋಧನೆಯೊಂದು ತಿಳಿಸಿದೆ.
ಸಂಶೋಧಕರು ಹೇಳೋದೇನು?
ಇಟಲಿಯ ಸಂಶೋಧಕರು ತೀವ್ರ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದ 90 ವಯಸ್ಕರ ಮೇಲೆ ನಡೆಸಿದ ಈ ಅಧ್ಯಯನವು ‘ಡಯಾಗ್ನೋಸ್ಟಿಕ್ಸ್’ ಎಂಬ ವೈದ್ಯಕೀಯ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ. ಚಿಕಿತ್ಸೆ ಆರಂಭಿಸುವ ಮುನ್ನ ಸಂಶೋಧಕರು ಇವರೆಲ್ಲರ ರಕ್ತದ ಮಾದರಿಯನ್ನು ಸಂಗ್ರಹಿಸಿ, ದೇಹದಲ್ಲಿ ಹಸಿವು ಮತ್ತು ರಕ್ತದ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವ ‘ಜಿಎಲ್‌ಪಿ-1’ ಮತ್ತು ‘ಜಿಐಪಿ’ ಎಂಬ ಎರಡು ಮುಖ್ಯ ಹಾರ್ಮೋನ್‌ಗಳ ಮಟ್ಟವನ್ನು ಪರೀಕ್ಷಿಸಿದ್ದರು. ಆ ಬಳಿಕ ರೋಗಿಗಳನ್ನು ಅವರ ಹಾರ್ಮೋನ್ ಮಟ್ಟಕ್ಕೆ ಅನುಗುಣವಾಗಿ ವಿವಿಧ ಗುಂಪುಗಳಾಗಿ ವಿಂಗಡಿಸಿ, ಕೆಲವರಿಗೆ ‘ಸೆಮಾಗ್ಲುಟೈಡ್’ ಮತ್ತು ಇನ್ನು ಕೆಲವರಿಗೆ ‘ತಿರ್ಜೆಪಟೈಡ್’ ಔಷಧಿಗಳನ್ನು ನೀಡಲಾಯಿತು. ಆರು ತಿಂಗಳ ಬಳಿಕ ಇವರ ತೂಕದ ಬದಲಾವಣೆಯನ್ನು ಗಮನಿಸಿದಾಗ ವಿಜ್ಞಾನಿಗಳಿಗೆ ಒಂದು ಸ್ಪಷ್ಟ ಚಿತ್ರಣ ಸಿಕ್ಕಿದೆ.
ಯಾರ ದೇಹದಲ್ಲಿ ‘ಜಿಐಪಿ’ ಹಾರ್ಮೋನ್ ಮಟ್ಟ ಕಡಿಮೆ ಇರುತ್ತದೆಯೋ, ಅವರಿಗೆ ‘ತಿರ್ಜೆಪಟೈಡ್’ ಔಷಧಿ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ ಎಂಬುದು ಈ ಅಧ್ಯಯನದಿಂದ ತಿಳಿದುಬಂದಿದೆ. ಅದೇ ರೀತಿ, ಯಾರ ದೇಹದಲ್ಲಿ ‘ಜಿಎಲ್‌ಪಿ-೧’ ಹಾರ್ಮೋನ್ ಕಡಿಮೆ ಇದ್ದು, ‘ಜಿಐಪಿ’ ಹಾರ್ಮೋನ್ ಮಧ್ಯಮ ಅಥವಾ ಹೆಚ್ಚಿನ ಮಟ್ಟದಲ್ಲಿರುತ್ತದೆಯೋ, ಅವರಿಗೆ ‘ಸೆಮಾಗ್ಲುಟೈಡ್’ ಔಷಧಿ ಹೆಚ್ಚು ಸೂಕ್ತ ಎಂಬುದು ಸಾಬೀತಾಗಿದೆ. ಅಂದರೆ, ಇನ್ಮುಂದೆ ವೈದ್ಯರು ರೋಗಿಗಳಿಗೆ ತೂಕ ಇಳಿಸುವ ಔಷಧಿಗಳನ್ನು ನೀಡುವಾಗ ಹತ್ತಾರು ಪ್ರಯೋಗಗಳನ್ನು ಮಾಡಿ ನೋಡಬೇಕಾದ ಅಗತ್ಯವಿರುವುದಿಲ್ಲ. ಚಿಕಿತ್ಸೆಗೂ ಮುನ್ನವೇ ರಕ್ತ ಪರೀಕ್ಷೆ ಮಾಡಿ, ಅವರ ದೇಹದ ಪ್ರಕೃತಿಗೆ ತಕ್ಕ ಹಾರ್ಮೋನ್ ಪ್ರೊಫೈಲ್ ಆಧರಿಸಿ ಸರಿಯಾದ ಔಷಧಿಯನ್ನು ಆಯ್ಕೆ ಮಾಡಬಹುದು.
ತೂಕ ಇಳಿಸುವ ಇಂತಹ ಔಷಧಿಗಳು ಸಾಮಾನ್ಯವಾಗಿ ತುಂಬಾ ದುಬಾರಿಯಾಗಿರುತ್ತವೆ. ಅಲ್ಲದೆ ಇವುಗಳಿಂದ ವಾಕರಿಕೆ, ವಾಂತಿ ಅಥವಾ ಹೊಟ್ಟೆಯ ಅಸ್ವಸ್ಥತೆಯಂತಹ ಅಡ್ಡಪರಿಣಾಮಗಳು (ಸೈಡ್ ಎಫೆಕ್ಟ್ಸ್) ಕಾಡುವುದು ಸಾಮಾನ್ಯ. ಒಂದು ವೇಳೆ ರೋಗಿಗೆ ಸೂಕ್ತವಲ್ಲದ ಔಷಧಿಯನ್ನು ನೀಡಿದರೆ, ಹಣ ಮತ್ತು ಸಮಯ ಎರಡೂ ವ್ಯರ್ಥವಾಗುತ್ತದೆ. ಹೀಗಾಗಿ ಈ ಹೊಸ ರಕ್ತ ಪರೀಕ್ಷಾ ವಿಧಾನವು ಜಾರಿಗೆ ಬಂದರೆ, ರೋಗಿಗಳಿಗೆ ಮೊದಲ ಬಾರಿಯಲ್ಲೇ ಅತ್ಯುತ್ತಮ ಫಲಿತಾಂಶ ನೀಡುವ ಸರಿಯಾದ ಚಿಕಿತ್ಸೆಯನ್ನು ನೀಡಲು ಸಾಧ್ಯವಾಗುತ್ತದೆ ಮತ್ತು ಅನಗತ್ಯ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಬಹುದಾಗಿದೆ.
ಆದಾಗ್ಯೂ, ಈ ರಕ್ತ ಪರೀಕ್ಷೆಯು ಸಾರ್ವಜನಿಕವಾಗಿ ದೈನಂದಿನ ವೈದ್ಯಕೀಯ ಬಳಕೆಗೆ ಬರಲು ಇನ್ನೂ ಸ್ವಲ್ಪ ಸಮಯ ಬೇಕಾಗಬಹುದು ಎಂದು ಸಂಶೋಧಕರು ಹೇಳಿದ್ದಾರೆ. ಏಕೆಂದರೆ ಈ ಅಧ್ಯಯನವನ್ನು ಕೇವಲ ೯೦ ಜನರ ಮೇಲೆ ಮಾತ್ರ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ವಿವಿಧ ಹಿನ್ನೆಲೆಯ ದೊಡ್ಡ ಜನಸಮೂಹದ ಮೇಲೆ ಇಂತಹ ಪರೀಕ್ಷೆಗಳನ್ನು ನಡೆಸಿ ಇದರ ನಿಖರತೆಯನ್ನು ಖಚಿತಪಡಿಸಿಕೊಳ್ಳಬೇಕಿದೆ. ಏನೇ ಆದರೂ, ಈ ಸಂಶೋಧನೆಯು ಭವಿಷ್ಯದಲ್ಲಿ ಪ್ರತಿಯೊಬ್ಬರ ದೇಹದ ಪ್ರಕೃತಿಗೆ ತಕ್ಕಂತೆ ವೈಯಕ್ತಿಕವಾಗಿ (ಪರ್ಸನಲೈಸ್ಡ್ ಮೆಡಿಸಿನ್) ಬೊಜ್ಜಿನ ಸಮಸ್ಯೆಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ ಎಂಬುದಂತೂ ನಿಜ.
