TOP NEWS

Ketan Agarwal: ಪುಣೆ ಲೋಹಗಢ ಕೋಟೆ ಚಾರಣ ದುರಂತಕ್ಕೆ ಟ್ವಿಸ್ಟ್: ಉದ್ಯಮಿ ಕೇತನ್ ಸಾವು ಅಪಘಾತವಲ್ಲ

How ketan Sister Suspicion Helped Unravel Murder Plot

ಪುಣೆ: ಮಹಾರಾಷ್ಟ್ರದ ಪ್ರಸಿದ್ಧ ಪ್ರವಾಸಿ ತಾಣ ಲೋಹಗಢ ಕೋಟೆಯಲ್ಲಿ ಪುಣೆಯ ಉದ್ಯಮಿ ಕೇತನ್ ಅಗರ್ವಾಲ್ (Ketan Agarwal) ಕಣಿವೆಗೆ ಬಿದ್ದು ಸಾವನ್ನಪ್ಪಿದ್ದ ಪ್ರಕರಣಕ್ಕೆ ಈಗ ಭೀಕರ ತಿರುವು ಸಿಕ್ಕಿದೆ. ಆರಂಭದಲ್ಲಿ ಕೇವಲ ಆಕಸ್ಮಿಕ ಅಪಘಾತ ಎಂದು ಭಾವಿಸಲಾಗಿದ್ದ ಈ ಘಟನೆ, ವಾಸ್ತವವಾಗಿ ಕೇತನ್ ಭಾವಿ ಪತ್ನಿ (ಫಿಯಾನ್ಸೆ) ಸಿಯಾ ಗೋಯಲ್ ಮತ್ತು ಆಕೆಯ ರಹಸ್ಯ ಪ್ರಿಯಕರ ಸೇರಿ ನಡೆಸಿದ ಭೀಕರ ಕೊಲೆ ಎಂಬ ಆಘಾತಕಾರಿ ಸತ್ಯ ತನಿಖೆಯಿಂದ ಹೊರಬಿದ್ದಿದೆ. ಮೃತನ ಸಹೋದರಿ ವ್ಯಕ್ತಪಡಿಸಿದ ಒಂದೇ ಒಂದು ಬಲವಾದ ಅನುಮಾನ, ಇಡೀ ದೇಶವನ್ನೇ ಬೆಚ್ಚಿಬೀಳಿಸಿರುವ ಈ ವ್ಯವಸ್ಥಿತ ಕೊಲೆ ಸಂಚನ್ನು ಬಯಲು ಮಾಡಿದೆ.

ಫೋಟೋ ಶೂಟ್ ನೆಪದಲ್ಲಿ ಕಣಿವೆಗೆ ತಳ್ಳಿದ ಸಿಯಾ! ಕಳೆದ ಜೂನ್ 18 ರಂದು ಉದ್ಯಮಿ ಕೇತನ್ ಅಗರ್ವಾಲ್ ತಮ್ಮ ಭಾವಿ ಪತ್ನಿ ಸಿಯಾ ಗೋಯಲ್ ಜೊತೆ ಲೋಹಗಢ ಕೋಟೆಗೆ ಚಾರಣ (Trekking) ತೆರಳಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಕಣಿವೆಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಲೋನಾವಾಲಾ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆರಂಭದಲ್ಲಿ ಸಿಯಾ ಕೂಡ ಪೊಲೀಸರಿಗೆ, ಫೋಟೋಗೆ ಫೋಸ್ ನೀಡುವಾಗ ಕೇತನ್ ಆಯತಪ್ಪಿ ಬಿದ್ದರು ಎಂದು ನಂಬಿಸಿದ್ದಳು. ಆದರೆ ಕೇತನ್ ಅಂತ್ಯಸಂಸ್ಕಾರ ಮುಗಿದ ನಂತರವೂ ಅವರ ಸಹೋದರಿಗೆ ಈ ಸಾವಿನ ಬಗ್ಗೆ ತೀವ್ರ ಅನುಮಾನಗಳಿದ್ದವು. ಘಟನೆ ನಡೆದು ನಾಲ್ಕು ದಿನಗಳ ನಂತರ ಸಿಯಾ, ಅಗರ್ವಾಲ್ ಕುಟುಂಬಕ್ಕೆ ಸಾಂತ್ವನ ಹೇಳಲು ಅವರ ಮನೆಗೆ ಭೇಟಿ ನೀಡಿದ್ದಳು. ಈ ಸಂದರ್ಭದಲ್ಲಿ ಕೇತನ್ ಸಹೋದರಿ ಅಂದು ಕೋಟೆಯಲ್ಲಿ ನಡೆದ ಘಟನೆಯ ಬಗ್ಗೆ ಸಿಯಾಳನ್ನು ಸುದೀರ್ಘವಾಗಿ ಪ್ರಶ್ನಿಸಿದ್ದಾರೆ.

ಮೇ 31, ಜೂನ್ 14 ಮತ್ತು ಜೂನ್ 18 ಹೀಗೆ ಕೇವಲ ಮೂರು ವಾರಗಳಲ್ಲಿ ಸಿಯಾ ಮತ್ತು ಕೇತನ್ ಸತತ ಮೂರು ಬಾರಿ ಲೋಹಗಢ ಕೋಟೆಗೆ ಚಾರಣ ಹೋಗಿದ್ದರ ಬಗ್ಗೆ ಸಹೋದರಿಗೆ ಸಂಶಯವಿತ್ತು. ಆಕೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವಾಗ ಸಿಯಾ ತಡಬಡಾಯಿಸಿದ್ದು ಮತ್ತು ಅಸ್ಪಷ್ಟ ಉತ್ತರ ನೀಡಿದ್ದು ಸಹೋದರಿಯ ಅನುಮಾನವನ್ನು ಮತ್ತಷ್ಟು ಬಲಪಡಿಸಿತು. ತಕ್ಷಣವೇ ಆಕೆ ಇಡೀ ಕುಟುಂಬವನ್ನು ಒಪ್ಪಿಸಿ ಪೊಲೀಸರ ಬಳಿ ಮರುತನಿಖೆಗೆ ಒತ್ತಾಯಿಸಿದರು. ಕುಟುಂಬದ ಒತ್ತಾಯದ ಮೇರೆಗೆ ಪೊಲೀಸರು ತಾಂತ್ರಿಕ ಸಾಕ್ಷ್ಯಗಳು ಹಾಗೂ ಕೋಟೆಯ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲು ಆರಂಭಿಸಿದಾಗ ಅಸಲಿ ಕಥೆ ಅನಾವರಣಗೊಂಡಿದೆ.

ಹುಡಿ ಧರಿಸಿದ್ದ ಪ್ರಿಯಕರ; 2,000ಕ್ಕೂ ಹೆಚ್ಚು ಕಾಲ್ಸ್! ಪೊಲೀಸ್ ತನಿಖೆಯ ವೇಳೆ ಜೂನ್ ತಿಂಗಳ ಕರಗುವ ಬಿಸಿಲಿನಲ್ಲೂ ಕಪ್ಪು ಬಣ್ಣದ ಹೂಡಿ (ಮೋಸ್ಟ್‌ಲಿ ತಲೆ ಮುಚ್ಚುವ ಜಾಕೆಟ್) ಧರಿಸಿದ್ದ ವ್ಯಕ್ತಿಯೊಬ್ಬ ಕೋಟೆಯ ಸುತ್ತಮುತ್ತ ಕೇತನ್ ಮತ್ತು ಸಿಯಾ ಅವರ ವಾಹನವನ್ನು ಹಿಂಬಾಲಿಸುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಪತ್ತೆಯಾಯಿತು. ಈ ವಿಚಿತ್ರ ಉಡುಪು ತನಿಖಾಧಿಕಾರಿಗಳ ಗಮನ ಸೆಳೆಯಿತು. ಅದರ ಬೆನ್ನಟ್ಟಿದಾಗ ಆತ ಸಿಯಾಳ ರಹಸ್ಯ ಪ್ರಿಯಕರ ಚೇತನ್ ಚೌಧರಿ ಎಂಬುದು ಪತ್ತೆಯಾಗಿದೆ. ಸಿಯಾ ಮತ್ತು ಚೇತನ್ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಅದರಲ್ಲೂ ಈ ವರ್ಷದ ಜನವರಿಯಿಂದ ಜೂನ್ ಅವಧಿಯಲ್ಲೇ ಇಬ್ಬರೂ ಬರೋಬ್ಬರಿ 2,004 ಬಾರಿ ಫೋನ್‌ ಕರೆಯಲ್ಲಿ ಮಾತನಾಡಿದ್ದು, ಒಟ್ಟು 238 ಗಂಟೆಗಳ ಕಾಲ ಸಂಪರ್ಕದಲ್ಲಿದ್ದರು ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ಇದಲ್ಲದೆ ವಾಟ್ಸಾಪ್ ಹಾಗೂ ಫೇಸ್‌ಟೈಮ್ ಮೂಲಕವೂ ಇವರಿಬ್ಬರು ನಿರಂತರ ಸಂಚು ರೂಪಿಸಿದ್ದರು.

ಆರೋಪಿ ಸಿಯಾಳ ಹೆತ್ತವರಿಗೂ ಈಕೆಯ ಅಕ್ರಮ ಸಂಬಂಧದ ಬಗ್ಗೆ ಮೊದಲೇ ಗೊತ್ತಿದ್ದರೂ, ಆಕೆಯನ್ನು ಶ್ರೀಮಂತ ಉದ್ಯಮಿ ಕೇತನ್ ಜೊತೆ ಮದುವೆ ಮಾಡಲು ಬಲವಂತ ಮಾಡಿದ್ದರು ಎಂದು ಅಗರ್ವಾಲ್ ಕುಟುಂಬಸ್ಥರು ಆರೋಪಿಸಿದ್ದಾರೆ. ಮದುವೆಯಾದರೆ ತನ್ನ ಪ್ರೀತಿ ಕೈತಪ್ಪುತ್ತದೆ ಎಂದು ಹೆದರಿದ ಸಿಯಾ, ಪ್ರಿಯಕರ ಚೇತನ್ ಜೊತೆ ಸೇರಿ ಕೇತನ್‌ನನ್ನು ಕೋಟೆಯ ಮೇಲಿಂದ ತಳ್ಳಿ ಕೊಲೆ ಮಾಡಿದ್ದಾಳೆ. ಜೂನ್ 23 ರಂದು ಪೊಲೀಸರು ಸಿಯಾ ಗೋಯಲ್ ಮತ್ತು ಚೇತನ್ ಚೌಧರಿಯನ್ನು ಅಧಿಕೃತವಾಗಿ ಬಂಧಿಸಿದ್ದು, ಈ ಕೊಲೆ ಸಂಚಿನಲ್ಲಿ ಇನ್ನು ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಸಚಿವ ಕೆ.ಜೆ. ಜಾರ್ಜ್ ಒಡೆತನದ ಕಾಫಿ ತೋಟಕ್ಕೆ ನುಗ್ಗಿದ ಸಶಸ್ತ್ರಧಾರಿಗಳು

Leave a Reply

Your email address will not be published. Required fields are marked *