TOP NEWS

Sandalwood: ನವಿಲು ಗರಿ ರೀಲ್ಸ್ ವಿವಾದ: ಕ್ಷಮೆ ಕೇಳಿದ ನಿವೇದಿತಾ ಗೌಡ – ಕಿಶನ್!

niveditha gowda and kishan apologised for using peacock feather in reels

ಬೆಂಗಳೂರು: ರಾಷ್ಟ್ರಪಕ್ಷಿ ನವಿಲಿನ ಗರಿಗಳನ್ನು ಬಳಸಿ ಇನ್‌ಸ್ಟಾಗ್ರಾಮ್‌ನಲ್ಲಿ ‘ಹೇ ನವಿಲೇ’ ಎಂಬ ರೀಲ್ಸ್ ಮಾಡಿ ಅರಣ್ಯ ಇಲಾಖೆಯ ಕೆಂಗಣ್ಣಿಗೆ ಗುರಿಯಾಗಿದ್ದ (Sandalwood) ಬಿಗ್‌ಬಾಸ್ ಮಾಜಿ ಸ್ಪರ್ಧಿಗಳಾದ ನಿವೇದಿತಾ ಗೌಡ ಹಾಗೂ ಕಿಶನ್ ಬಿಳಗಲಿ ಕೊನೆಗೂ ಸಾರ್ವಜನಿಕವಾಗಿ ತಲೆಬಾಗಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆಯಡಿ ಅರಣ್ಯ ಇಲಾಖೆಗೆ ದೂರು ಸಲ್ಲಿಕೆಯಾಗಿ, ನೋಟಿಸ್ ಜಾರಿಯಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಈ ಸೆಲೆಬ್ರಿಟಿ ಜೋಡಿ, ಸೋಷಿಯಲ್ ಮೀಡಿಯಾದಿಂದ ವಿವಾದಿತ ವಿಡಿಯೋವನ್ನು ಡಿಲೀಟ್ ಮಾಡಿದೆ. ಅಲ್ಲದೆ, ಪ್ರತ್ಯೇಕ ವಿಡಿಯೋಗಳನ್ನು ಅಪ್‌ಲೋಡ್ ಮಾಡುವ ಮೂಲಕ ಸಾರ್ವಜನಿಕರ ಕ್ಷಮೆಯಾಚಿಸಿದೆ.

ಮಾರುಕಟ್ಟೆಯಿಂದ ಬಾಡಿಗೆಗೆ ತಂದಿದ್ದೆ ಎಂದ ಕಿಶನ್! ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ವಿಡಿಯೋ ಬಿಡುಗಡೆ ಮಾಡಿರುವ ನೃತ್ಯ ನಿರ್ದೇಶಕ ಕಿಶನ್ ಬಿಳಗಲಿ, “ನಾವು ಚಿಕ್ಕ ವಯಸ್ಸಿನಲ್ಲಿ ಫ್ಯಾನ್ಸಿ ಡ್ರೆಸ್ ಸ್ಪರ್ಧೆಗಳಲ್ಲಿ ನವಿಲು ಗರಿಗಳನ್ನು ಬಳಸುವುದನ್ನು ನೋಡಿದ್ದೆವು. ಹಾಗಾಗಿ ಈ ಹಾಡಿನ ರೀಲ್ಸ್‌ಗಾಗಿಯೂ ಮಾರುಕಟ್ಟೆಯಿಂದ ನವಿಲು ಗರಿಯನ್ನು ಬಾಡಿಗೆಗೆ ಪಡೆದುಕೊಂಡು ಬಂದಿದ್ದೆ. ಸಾಮಾನ್ಯವಾಗಿ ಮಾರ್ಕೆಟ್‌ನಲ್ಲಿ ಇಂತಹ ಆಲ್ಬಂ ಸಾಂಗ್ಸ್‌ಗೆ ಬಾಡಿಗೆಗೆ ಸಿಗುವ ವಸ್ತುಗಳು ಅಸಲಿ ಇರುವುದಿಲ್ಲ ಎಂದೇ ನಾವು ಭಾವಿಸುತ್ತೇವೆ. ಆದರೆ ನಾನು ಮಾಡಿದ್ದು ತಪ್ಪು, ನವಿಲು ಗರಿಯನ್ನು ಈ ರೀತಿ ಬಾಡಿಗೆಗೆ ತರುವುದು ಕೂಡ ಕಾನೂನಿನ ಪ್ರಕಾರ ಅಪರಾಧ ಎಂಬ ಕನಿಷ್ಠ ಜ್ಞಾನ ನನಗಿರಲಿಲ್ಲ” ಎಂದು ಒಪ್ಪಿಕೊಂಡಿದ್ದಾರೆ.

ಒಬ್ಬ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿ ನನ್ನಿಂದ ಇಂತಹದೊಂದು ಬೇಜವಾಬ್ದಾರಿ ತಪ್ಪು ನಡೆದಿರುವುದು ನನಗೇ ಬೇಸರ ತಂದಿದೆ. ಇನ್ಮುಂದೆ ಯಾರೂ ಕೂಡ ನವಿಲು ಗರಿಗಳನ್ನು ಬಾಡಿಗೆಗೆ ಪಡೆದು ಬಳಸಬೇಡಿ ಮತ್ತು ಅದನ್ನು ದುರುಪಯೋಗಪಡಿಸಿಕೊಳ್ಳಬೇಡಿ ಎಂದು ಮನವಿ ಮಾಡಿರುವ ಕಿಶನ್, ಕೈಮುಗಿದು ಸಾರ್ವಜನಿಕರಲ್ಲಿ ಕ್ಷಮೆ ಯಾಚಿಸಿದ್ದಾರೆ.

ತಪ್ಪು ತಿಳುವಳಿಕೆಯಿಂದ ಕೃತ್ಯ; ತನಿಖೆಗೆ ನಿವೇದಿತಾ ಗೌಡ ಸಹಕಾರ ಮತ್ತೊಂದೆಡೆ ನಟಿ ನಿವೇದಿತಾ ಗೌಡ ಕೂಡ ವಿಡಿಯೋ ಸಂದೇಶ ಹಂಚಿಕೊಂಡಿದ್ದು, “ನವಿಲು ಗರಿ ಸೇರಿದಂತೆ ಯಾವುದೇ ವನ್ಯಜೀವಿಗಳಿಗೆ ಸಂಬಂಧಿಸಿದ ವಸ್ತುಗಳನ್ನು ಮನೆಯಲ್ಲಿ ಸಂಗ್ರಹಿಸಿಡುವುದು ಮತ್ತು ಅವುಗಳನ್ನು ಬಳಸಿ ವಿಡಿಯೋ ಮಾಡುವುದು ಕಾನೂನುಬಾಹಿರ ಎಂಬ ಅರಿವು ನಮಗಿರಲಿಲ್ಲ. ಕೇವಲ ತಪ್ಪು ತಿಳುವಳಿಕೆಯಿಂದ ಈ ವಿಡಿಯೋ ಸೃಷ್ಟಿಸಲಾಗಿತ್ತು. ನಮ್ಮಿಂದ ದೊಡ್ಡ ತಪ್ಪಾಗಿದೆ, ದಯವಿಟ್ಟು ಕ್ಷಮಿಸಿ” ಎಂದು ಕೋರಿದ್ದಾರೆ.

ತಮಗಾದ ಈ ಕಹಿ ಅನುಭವದಿಂದ ಪಾಠ ಕಲಿತಿರುವ ನಿವೇದಿತಾ, ಸಾರ್ವಜನಿಕರು ಇನ್ಮುಂದೆ ಇಂತಹ ವನ್ಯಜೀವಿಗಳ ವಸ್ತುಗಳನ್ನು ಬಳಸಿ ರೀಲ್ಸ್ ಮಾಡದಂತೆ ವಿನಂತಿಸಿದ್ದಾರೆ. ಸದ್ಯ ಈ ಇಡೀ ಘಟನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಅಧಿಕೃತ ತನಿಖೆ ಆರಂಭಿಸಿದ್ದು, ಇಲಾಖೆಯ ಎಲ್ಲಾ ಕಾನೂನು ಪ್ರಕ್ರಿಯೆಗಳಿಗೆ ತಾವಿಬ್ಬರೂ ಸಂಪೂರ್ಣವಾಗಿ ಸಹಕರಿಸುವುದಾಗಿ ಇಬ್ಬರೂ ಸೆಲೆಬ್ರಿಟಿಗಳು ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published. Required fields are marked *