TOP NEWS

Belagavi: ಸರ್ಕಾರಿ ಆದೇಶದ ಪ್ರತಿ ಹರಿದು ಎಂಇಎಸ್ ಪುಂಡಾಟ; ಕರವೇ ಆಕ್ರೋಶ, ಸಂಘಟನೆ ನಿಷೇಧಕ್ಕೆ ಆಗ್ರಹ

MES high drama in Belagavi district office

ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ (Belagavi) ಮಹಾರಾಷ್ಟ್ರ ಏಕೀಕರಣ ಸಮಿತಿಯ (MES) ಕಾರ್ಯಕರ್ತರು ಮತ್ತೊಮ್ಮೆ ತಮ್ಮ ಗೂಂಡಾಗಿರಿ ಪ್ರವೃತ್ತಿಯನ್ನು ಮುಂದುವರಿಸಿದ್ದಾರೆ. ರಾಜ್ಯಾದ್ಯಂತ ಕನ್ನಡವನ್ನು ಕಡ್ಡಾಯಗೊಳಿಸಿರುವ ಸರ್ಕಾರದ ಆದೇಶಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಎಂಇಎಸ್ ಕಾರ್ಯಕರ್ತರು, ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲೇ ಭಾರೀ ಗದ್ದಲ ಸೃಷ್ಟಿಸಿದ್ದಾರೆ. ಸ್ಥಳದಲ್ಲೇ ರಕ್ಷಣಾ ಸಿಬ್ಬಂದಿ ಇದ್ದರೂ ಲೆಕ್ಕಿಸದೆ, ಸರ್ಕಾರದ ಅಧಿಕೃತ ಸುತ್ತೋಲೆಯನ್ನು ಹರಿದು ಹಾಕಿ ವಿಕೃತಿ ಮೆರೆದಿದ್ದಾರೆ. ಅದರೊಂದಿಗೆ, ಗಡಿ ಪ್ರದೇಶಗಳಲ್ಲಿ ಮರಾಠಿ ಭಾಷೆಯಲ್ಲೇ ಸರ್ಕಾರಿ ದಾಖಲೆಗಳು ಹಾಗೂ ನಾಮಫಲಕಗಳನ್ನು ಅಳವಡಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಏನಿದು ಘಟನೆ?

ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಕರ್ನಾಟಕ ಸರ್ಕಾರದ ವಿರುದ್ಧ ಅವಹೇಳನಕಾರಿ ಘೋಷಣೆಗಳನ್ನು ಕೂಗಿದರು. ಗಡಿ ಭಾಗದಲ್ಲಿ ಸರ್ಕಾರದ ಯಾವುದೇ ನಿಯಮಗಳು ನಡೆಯುವುದಿಲ್ಲ ಎಂದು ಕಿರುಚಾಡಿದ ಅವರು, ಬೆಳಗಾವಿ, ನಿಪ್ಪಾಣಿ, ಖಾನಾಪುರ, ಕಾರವಾರ, ಬೀದರ್ ಹಾಗೂ ಭಾಲ್ಕಿ ಸೇರಿದಂತೆ ಹಲವು ಭಾಗಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ವಿವಾದಾತ್ಮಕವಾಗಿ ಕೂಗಾಡಿದ್ದಾರೆ. ಸಾರ್ವಜನಿಕವಾಗಿಯೇ ಸರ್ಕಾರದ ಆದೇಶದ ಪತ್ರವನ್ನು ಹರಿದು ಅಪಮಾನಿಸಿದ ಇವರ ಈ ನಡೆಗೆ ಸ್ಥಳೀಯ ಕನ್ನಡ ಸಾರ್ವಜನಿಕರಿಂದ ತೀವ್ರ ಖಂಡನೆ ವ್ಯಕ್ತವಾಗಿದೆ.

ಎಂಇಎಸ್ ವಿರುದ್ಧ ಕರವೇ ಕಿಡಿ

ಇದೇ ವೇಳೆ, ಎಂಇಎಸ್ ಸಂಘಟನೆಯ ಈ ಉದ್ಧಟತನದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆಯ (ಕರವೇ) ನಾರಾಯಣಗೌಡ ಬಣದ ಕಾರ್ಯಕರ್ತರು ಸಿಡಿದೆದ್ದಿದ್ದಾರೆ. ನಾಡವಿರೋಧಿ ಕೃತ್ಯ ಎಸಗಿದವರನ್ನು ಕೂಡಲೇ ಜೈಲಿಗಟ್ಟಬೇಕೆಂದು ಆಗ್ರಹಿಸಿ, ಕರವೇ ಪದಾಧಿಕಾರಿಗಳು ನಗರದ ಎಸ್‌ಪಿ ಕಚೇರಿಯಿಂದ ಡಿಸಿ ಕಚೇರಿ ತನಕ ಬೃಹತ್ ಆಕ್ರೋಶ ರ‍್ಯಾಲಿ ಹಮ್ಮಿಕೊಂಡಿದ್ದರು. ಕರವೇ ಕಾರ್ಯಕರ್ತರು ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಬರುತ್ತಿದ್ದಂತೆ ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಅವರನ್ನು ತಡೆದಿದ್ದಾರೆ. ಜಿಲ್ಲಾಡಳಿತದ ಆವರಣದಲ್ಲೇ ಕನ್ನಡದ ಆದೇಶವನ್ನು ಹರಿದು ಹಾಕಿರುವುದು ಇಡೀ ಕನ್ನಡಿಗರಿಗೆ ಮಾಡಿದ ದ್ರೋಹ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಗಡಿ ಭಾಗದಲ್ಲಿ ಸದಾ ಶಾಂತಿ ಕದಡುತ್ತಿರುವ ಎಂಇಎಸ್ ಹಾಗೂ ಶಿವಸೇನೆ ಸಂಘಟನೆಗಳನ್ನು ರಾಜ್ಯದಲ್ಲಿ ಕಪ್ಪುಪಟ್ಟಿಗೆ ಸೇರಿಸಿ ನಿಷೇಧಿಸಬೇಕು ಮತ್ತು ಪುಂಡರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಕರವೇ ಮುಖಂಡರು ಸಹಾಯಕ ಕಮಿಷನರ್ (ಎಸಿ) ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಇದನ್ನೂ ಓದಿ: ನಂದಿನಿ ಹಾಲಿನ ವಿರುದ್ಧ ರೀಲ್ಸ್ ಮಾಡಿದ ವೈದ್ಯೆಗೆ ಹೈಕೋರ್ಟ್ ತರಾಟೆ; ತನಿಖೆಗೆ ಮುಂದುವರಿಸಲು ಆದೇಶ

Leave a Reply

Your email address will not be published. Required fields are marked *