ಬೆಂಗಳೂರು: ಕೆಎಂಎಫ್ (KMF) ಸಂಸ್ಥೆಯ ಜನಪ್ರಿಯ ಉತ್ಪನ್ನವಾದ ‘ನಂದಿನಿ ಸುವಾಸಿತ ಹಾಲು’ ಆರೋಗ್ಯಕ್ಕೆ ಒಳಿತಲ್ಲ ಎಂಬರ್ಥದಲ್ಲಿ ಇನ್‌ಸ್ಟಾಗ್ರಾಂನಲ್ಲಿ ನಕಾರಾತ್ಮಕ ವಿಡಿಯೋ ಮಾಡಿ ಹರಿಬಿಟ್ಟಿದ್ದ ಬೆಂಗಳೂರಿನ ವೈದ್ಯೆ ಡಾ. ಶರಣ್ಯ ಪದ್ಮಾ ಅವರಿಗೆ ಹೈಕೋರ್ಟ್ (High Court) ತೀವ್ರ ತರಾಟೆ ತೆಗೆದುಕೊಂಡಿದೆ. ಮಲ್ಲೇಶ್ವರಂ ಠಾಣೆಯಲ್ಲಿ ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್ (FIR) ರದ್ದುಪಡಿಸಬೇಕು ಇಲ್ಲವೇ ತನಿಖೆಗೆ ತಡೆ ನೀಡಬೇಕು ಎಂಬ ವೈದ್ಯೆಯ ಕೋರಿಕೆಯನ್ನು ಮಾನ್ಯ ಮಾಡದ ನ್ಯಾಯಾಲಯ, ಪೊಲೀಸರು ತನಿಖೆಯನ್ನು ಮುಂದುವರಿಸಬಹುದು ಎಂದು ಸ್ಪಷ್ಟಪಡಿಸಿದೆ.
ಏನಿದು ಪ್ರಕರಣ?
ಕೆಲ ದಿನಗಳ ಹಿಂದೆ ಡಾ. ಶರಣ್ಯ ಪದ್ಮಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ರೀಲ್ಸ್ ಒಂದರಲ್ಲಿ, ನಂದಿನಿ ಫ್ಲೇವರ್ಡ್ ಮಿಲ್ಕ್ ಸುರಕ್ಷಿತವಲ್ಲ ಎಂದು ಮಾತನಾಡಿದ್ದರು. ಈ ವಿಡಿಯೋ ಭಾರಿ ವೈರಲ್ ಆಗಿ ಗ್ರಾಹಕರಲ್ಲಿ ಗೊಂದಲ ಮೂಡಿಸಿದ್ದಲ್ಲದೆ, ನಂದಿನಿ ಬ್ರ್ಯಾಂಡ್‌ನ ಯಶಸ್ಸಿಗೆ ಧಕ್ಕೆ ತಂದಿತ್ತು. ಈ ಹಿನ್ನೆಲೆಯಲ್ಲಿ ಕೆಎಂಎಫ್ ನೌಕರರು ನೀಡಿದ ದೂರಿನ ಮೇರೆಗೆ ವೈದ್ಯೆಯ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿತ್ತು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ವೈದ್ಯೆಯ ಬೇಜವಾಬ್ದಾರಿತನದ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಜನರಲ್ಲಿ ವಿನಾಕಾರಣ ಆತಂಕ ಮೂಡಿಸಲು ಇನ್‌ಸ್ಟಾಗ್ರಾಂ ರೀಲ್ಸ್‌ಗಳನ್ನು ಬಳಸಬಾರದು. ಸಮಾಜದಲ್ಲಿ ಗೌರವಾನ್ವಿತ ಸ್ಥಾನದಲ್ಲಿರುವ ವೈದ್ಯರೇ ಈ ರೀತಿ ಮಾಡುವುದು ತಪ್ಪು ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು. ಅಲ್ಲದೆ, “ನೀವು ಆ ಹಾಲನ್ನು ಯಾವುದಾದರೂ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸಿದ್ದೀರಾ? ಅಥವಾ ಈ ಬಗ್ಗೆ ಸರ್ಕಾರಕ್ಕೆ ದೂರು ನೀಡಿದ್ದೀರಾ? ಯಾವ ಆಧಾರದ ಮೇಲೆ ಉತ್ಪನ್ನ ಸರಿಯಿಲ್ಲ ಎಂದು ಸಾರ್ವಜನಿಕವಾಗಿ ವದಂತಿ ಹರಡುತ್ತಿದ್ದೀರಿ? ನಿಮಗೇನಾದರೂ ಆ ಹಾಲು ಇಷ್ಟವಿಲ್ಲದಿದ್ದರೆ ಕುಡಿಯುವುದನ್ನು ಬಿಟ್ಟುಬಿಡಿ, ಅದನ್ನು ಬಿಟ್ಟು ಇಂತಹ ಪೋಸ್ಟ್‌ಗಳ ಮೂಲಕ ಸಮಾಜದಲ್ಲಿ ಗೊಂದಲ ಸೃಷ್ಟಿಸಬೇಡಿ” ಎಂದು ಕೋರ್ಟ್ ನೇರವಾಗಿಯೇ ಪ್ರಶ್ನಿಸಿದೆ.
ತನಿಖೆಗೆ ಕೋರ್ಟ್ ಆದೇಶ
ವೈದ್ಯೆಯ ಪರ ವಕೀಲರು ಎಫ್‌ಐಆರ್‌ಗೆ ಮಧ್ಯಂತರ ತಡೆ ನೀಡುವಂತೆ ಎಷ್ಟೇ ಮನವಿ ಮಾಡಿದರೂ, ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಹೈಕೋರ್ಟ್ ಅದಕ್ಕೆ ನಿರಾಕರಿಸಿತು. ಕೇವಲ ಪ್ರಸಿದ್ಧಿಗಾಗಿ ಅಥವಾ ವೈಯಕ್ತಿಕ ಅನಿಸಿಕೆಗಳನ್ನು ಆಧಾರವಿಲ್ಲದೆ ಜನರ ಮೇಲೆ ಹೇರಲು ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಪಡಿಸಿಕೊಂಡರೆ ಕಾನೂನಿನ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂಬ ಸಂದೇಶವನ್ನು ಹೈಕೋರ್ಟ್ ಈ ಆದೇಶದ ಮೂಲಕ ರವಾನಿಸಿದೆ.
