TOP NEWS

Boss Film: ಚಿತ್ರಮಂದಿರಕ್ಕೆ ಬರುವ ಮುನ್ನವೇ ಹೈಕೋರ್ಟ್ ಮೆಟ್ಟಿಲೇರಿದ ‘ಬಾಸ್’ ವಿವಾದ: ಸಿನಿಮಾ ಪ್ರದರ್ಶನ ನಿಲ್ಲಿಸಲು ದರ್ಶನ್ ಪತ್ನಿ ಸಜ್ಜು

Boss film controversy Vijayalakshmi darshan petition to high court

ಬೆಂಗಳೂರು: ಶೂಟಿಂಗ್ ಹಂತದಿಂದಲೇ ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲ ಹಾಗೂ ಚರ್ಚೆ ಹುಟ್ಟುಹಾಕಿದ್ದ ವಿ. ಲವ ನಿರ್ದೇಶನದ ‘ಬಾಸ್’ (Boss Film) ಚಿತ್ರಕ್ಕೆ ಬಿಡುಗಡೆಯ ಹೊಸ್ತಿಲಿನಲ್ಲಿ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಇದೇ ಜೂನ್ 19ರಂದು ಅದ್ಧೂರಿಯಾಗಿ ತೆರೆಗೆ ಬರಲು ಸಜ್ಜಾಗಿದ್ದ ಈ ಚಿತ್ರಕ್ಕೆ ತಡೆ ನೀಡುವಂತೆ ಆಗ್ರಹಿಸಿ ನಟ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಅವರು ಈಗ ಹೈಕೋರ್ಟ್ ಕದ ತಟ್ಟಿದ್ದಾರೆ. ಕೊನೆ ಕ್ಷಣದ ಈ ಬೆಳವಣಿಗೆಯಿಂದಾಗಿ ಇಡೀ ಚಿತ್ರತಂಡ ಈಗ ಇಕ್ಕಟ್ಟಿಗೆ ಸಿಲುಕಿದೆ.

ನಟ ತನಿಷ್ ಶಿವಣ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದ ಝಲಕ್ (ಟೀಸರ್) ಹೊರಬಿದ್ದಾಗಲೇ ಗಾಂಧಿನಗರದಲ್ಲಿ ವಿವಾದದ ಕಿಡಿ ಹೊತ್ತಿಕೊಂಡಿತ್ತು. ಇದು ಸಮಾಜದಲ್ಲಿ ನಡೆದ ನೈಜ ಘಟನೆಗಳಿಂದ ಪ್ರೇರಿತವಾದ ಕಥೆ ಎಂದು ಚಿತ್ರತಂಡ ಹೇಳಿಕೊಂಡಿತ್ತಾದರೂ, ಟೀಸರ್‌ನ ದೃಶ್ಯಗಳು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ರೇಣುಕಾಸ್ವಾಮಿ ಹತ್ಯೆ ಪ್ರಕರಣವನ್ನು ಹೋಲುವಂತಿದ್ದವು. ಈ ಚಿತ್ರದ ಮೂಲಕ ಜೈಲಿನಲ್ಲಿರುವ ತಮ್ಮ ಪತಿಯ ಇಮೇಜ್‌ಗೆ ಧಕ್ಕೆ ತರಲು ಯತ್ನಿಸಲಾಗುತ್ತಿದೆ ಎಂದು ಗಂಭೀರವಾಗಿ ಪರಿಗಣಿಸಿರುವ ವಿಜಯಲಕ್ಷ್ಮಿ ದರ್ಶನ್ ಅವರು, ಚಿತ್ರದ ಬಿಡುಗಡೆಯನ್ನು ತಡೆಯಲು ಕಾನೂನು ಸಮರ ಸಾರಿದ್ದಾರೆ.

ಕೆಳ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಹೈಕೋರ್ಟ್‌ಗೆ ಅಪೀಲು

ಇದಕ್ಕೂ ಮುನ್ನ ವಿಜಯಲಕ್ಷ್ಮಿ ಅವರು ಚಿತ್ರಕ್ಕೆ ತಡೆ ಕೋರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಆದರೆ ಅಲ್ಲಿ ಅವರ ವಾದ ಪುರಸ್ಕರಿಸದ ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿ, ಚಿತ್ರದ ರಿಲೀಸ್‌ಗೆ ಹಸಿರು ನಿಶಾನೆ ತೋರಿಸಿತ್ತು. ಇದರಿಂದ ನಿರಾಳವಾಗಿದ್ದ ನಿರ್ಮಾಪಕರು ಜೂನ್ 19ರಂದು ಸಿನಿಮಾ ಪ್ರದರ್ಶನಗೊಳ್ಳಲಿದೆ ಎಂದು ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಭರ್ಜರಿ ಪ್ರಚಾರ ಆರಂಭಿಸಿದ್ದರು. ಆದರೆ, ಬಿಡುಗಡೆಗೆ ಕೇವಲ 48 ಗಂಟೆಗಳು ಬಾಕಿ ಇರುವಾಗ ವಿಜಯಲಕ್ಷ್ಮಿ ಅವರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿರುವುದರಿಂದ ಚಿತ್ರತಂಡದ ನೆಮ್ಮದಿ ಕೆಟ್ಟಿದೆ.

ಸೆನ್ಸಾರ್ ಅಸ್ತು ಎಂದರೂ ಕೋರ್ಟ್ ಅಂಗಳದಲ್ಲಿ ‘ಬಾಸ್’ ಭವಿಷ್ಯ

ಚಿತ್ರವನ್ನು ಈಗಾಗಲೇ ವೀಕ್ಷಿಸಿರುವ ಪ್ರಾದೇಶಿಕ ಸೆನ್ಸಾರ್ ಮಂಡಳಿಯು ಯಾವುದೇ ಕಟ್ಸ್ ಇಲ್ಲದೆ ‘ಯು/ಎ’ (U/A) ಅರ್ಹತಾ ಪತ್ರವನ್ನು ನೀಡಿದೆ. ಆದಾಗ್ಯೂ, ಚಲನಚಿತ್ರದ ಅಂತಿಮ ಭವಿಷ್ಯ ಈಗ ಉನ್ನತ ನ್ಯಾಯಾಲಯದ ತೀರ್ಪಿನ ಮೇಲೆ ನಿಂತಿದೆ. ಸೆಷನ್ಸ್ ಕೋರ್ಟ್ ನೀಡಿದ್ದ ಆದೇಶವನ್ನೇ ಹೈಕೋರ್ಟ್ ಎತ್ತಿಹಿಡಿಯಲಿದೆಯೇ ಅಥವಾ ದರ್ಶನ್ ಕುಟುಂಬದ ಆಕ್ಷೇಪಣೆಯನ್ನು ಮಾನ್ಯ ಮಾಡಿ ಚಿತ್ರದ ಬಿಡುಗಡೆಗೆ ಬ್ರೇಕ್ ಹಾಕಲಿದೆಯೇ ಎಂಬುದು ಇಂದಿನ ವಿಚಾರಣೆಯ ಬಳಿಕ ಸ್ಪಷ್ಟವಾಗಲಿದೆ. ಈ ತೀವ್ರ ಕಾನೂನು ಜಟಾಪಟಿಯಿಂದಾಗಿ ನಿಗದಿತ ದಿನದಂದೇ ‘ಬಾಸ್’ ಚಿತ್ರಮಂದಿರಗಳಿಗೆ ಲಗ್ಗೆ ಇಡುವುದು ಸದ್ಯಕ್ಕೆ ಅನುಮಾನದ ಹುತ್ತವಾಗಿ ಪರಿಣಮಿಸಿದೆ.

ಇದನ್ನೂ ಓದಿ: ಶಿವಣ್ಣ ಚಿತ್ರದಲ್ಲಿದ್ದದ್ದೇ ನಮಗೆ ಪ್ಲಸ್ ಪಾಯಿಂಟ್: ಪೆದ್ದಿ ಸಿನಿಮಾದ ಹ್ಯಾಟ್ರಿಕ್ ಹೀರೊ ನಟನೆಯನ್ನು ಕೊಂಡಾಡಿದ ಚಿರಂಜೀವಿ!

Leave a Reply

Your email address will not be published. Required fields are marked *