TOP NEWS

Azam Khan: ಅಧಿಕಾರಿಗಳ ವಿರುದ್ಧ ನಿಂದನೆ: ಆಜಂ ಖಾನ್‌ಗೆ 2 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದ ಕೋರ್ಟ್

SP leader azam khan sentenced with 2 years jail and 5 thousand fine

ನವದೆಹಲಿ: ವಿವಾದಾತ್ಮಕ ಹೇಳಿಕೆಗಳ ಮೂಲಕ ಸದಾ ಸುದ್ದಿಯಲ್ಲಿರುವ ಸಮಾಜವಾದಿ ಪಕ್ಷದ (SP) ಪ್ರಭಾವಿ ನಾಯಕ ಆಜಂ ಖಾನ್ (Azam Khan) ಅವರಿಗೆ ಕಾನೂನು ಸಂಕಷ್ಟಗಳು ಮುಗಿಯುವಂತೆ ಕಾಣುತ್ತಿಲ್ಲ. ಕಳೆದ 2019ರ ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಸಾರ್ವಜನಿಕವಾಗಿ ಅವಹೇಳನಕಾರಿ ಮಾತುಗಳನ್ನಾಡಿದ ಆರೋಪ ಸಾಬೀತಾಗಿದ್ದು, ವಿಶೇಷ ನ್ಯಾಯಾಲಯವು ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ಹಾಗೂ 5,000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.

ಏನಿದು ವಿವಾದಾತ್ಮಕ ಭಾಷಣ?: 2019ರಲ್ಲಿ ನಡೆದ ಚುನಾವಣಾ ಸಮಾವೇಶವೊಂದರಲ್ಲಿ ಮಾತನಾಡಿದ್ದ ಆಜಂ ಖಾನ್, ಸ್ಥಳೀಯ ಜಿಲ್ಲಾಡಳಿತದ ಉನ್ನತ ಅಧಿಕಾರಿಗಳನ್ನು ತೀವ್ರವಾಗಿ ನಿಂದಿಸಿದ್ದರು. “ಇಲ್ಲಿನ ಕಲೆಕ್ಟರ್ ಹಾಗೂ ಅಧಿಕಾರಿಗಳಿಗೆ ನೀವ್ಯಾರೂ ಹೆದರುವ ಅವಶ್ಯಕತೆಯಿಲ್ಲ. ಇವರೆಲ್ಲ ಕೇವಲ ಸಂಬಳಕ್ಕಾಗಿ ಕೆಲಸ ಮಾಡುವ ನೌಕರರು ಅಷ್ಟೆ. ದೊಡ್ಡ ಅಧಿಕಾರಿಗಳು ಮಾಯಾವತಿ ಅವರ ಬೂಟುಗಳನ್ನು ಕರವಸ್ತ್ರದಿಂದ ಸ್ವಚ್ಛಗೊಳಿಸುವ ಚಿತ್ರಗಳನ್ನು ನೀವು ಈಗಾಗಲೇ ನೋಡಿರಬಹುದು. ಈಗ ನಾವು ಅವರೊಂದಿಗೆ ಮೈತ್ರಿ ಮಾಡಿಕೊಂಡಿದ್ದೇವೆ. ದೇವರ ದಯೆಯಿದ್ದರೆ, ಮುಂದೊಂದು ದಿನ ಇದೇ ಅಧಿಕಾರಿಗಳಿಂದ ನನ್ನ ಶೂಗಳನ್ನು ಪಾಲಿಶ್ ಮಾಡಿಸುತ್ತೇನೆ” ಎಂದು ವಿವಾದಾತ್ಮಕವಾಗಿ ಮಾತನಾಡಿದ್ದರು. ಈ ಭಾಷಣದ ವಿಡಿಯೋ ಭಾರಿ ವೈರಲ್ ಆಗಿ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಎಂಪಿ-ಎಮ್‌ಎಲ್‌ಎ (MP-MLA) ವಿಶೇಷ ನ್ಯಾಯಾಲಯವು ಇದೀಗ ಕಠಿಣ ತೀರ್ಪು ಪ್ರಕಟಿಸಿದೆ. ಆಜಂ ಖಾನ್ ಪ್ರಸ್ತುತ ರಾಂಪುರ ಜೈಲಿನಲ್ಲೇ ದಿನ ದೂಡುತ್ತಿದ್ದಾರೆ.

ಡಬಲ್ ಪ್ಯಾನ್ ಕಾರ್ಡ್ ಪ್ರಕರಣದಲ್ಲೂ ವಜಾಗೊಂಡಿದ್ದ ಮೇಲ್ಮನವಿ: ಇತ್ತೀಚಿನ ತಿಂಗಳುಗಳಲ್ಲಿ ಆಜಂ ಖಾನ್ ಅವರಿಗೆ ಎದುರಾಗುತ್ತಿರುವ ಎರಡನೇ ಪ್ರಮುಖ ಕಾನೂನು ಹಿನ್ನಡೆ ಇದಾಗಿದೆ. ಈ ಹಿಂದೆ ತಂದೆ ಮತ್ತು ಮಗ ಇಬ್ಬರೂ ನಿಯಮ ಬಾಹಿರವಾಗಿ ತಲಾ ಎರಡು ಪ್ರತ್ಯೇಕ ಪ್ಯಾನ್ (PAN) ಕಾರ್ಡ್‌ಗಳನ್ನು ಹೊಂದಿದ್ದ ಅಕ್ರಮ ಬಯಲಿಗೆ ಬಂದಿತ್ತು. ಈ ಹಗರಣಕ್ಕೆ ಸಂಬಂಧಿಸಿದಂತೆ ನವೆಂಬರ್ 2025 ರಲ್ಲಿ ಕೆಳ ನ್ಯಾಯಾಲಯವು ಆಜಂ ಖಾನ್ ಮತ್ತು ಅವರ ಪುತ್ರ ಅಬ್ದುಲ್ಲಾ ಆಜಂ ಖಾನ್ ಇಬ್ಬರಿಗೂ ತಲಾ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಈ ಕಠಿಣ ಶಿಕ್ಷೆಯನ್ನು ಪ್ರಶ್ನಿಸಿ ಇಬ್ಬರೂ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಏಪ್ರಿಲ್ 2026 ರಲ್ಲಿ ರಾಂಪುರದ ಸೆಷನ್ಸ್ ನ್ಯಾಯಾಲಯವು ಇವರ ಅರ್ಜಿಯನ್ನು ವಜಾಗೊಳಿಸಿ, ಹಳೆಯ ಶಿಕ್ಷೆಯನ್ನೇ ಎತ್ತಿಹಿಡಿದಿತ್ತು. ಇದರ ಬೆನ್ನಲ್ಲೇ ಈಗ ಮತ್ತೊಂದು ಪ್ರಕರಣದಲ್ಲಿ ಶಿಕ್ಷೆಯಾಗಿದೆ.

ಇದನ್ನೂ ಓದಿ: ತೈಲ ಬಿಕ್ಕಟ್ಟಿಗೆ ದೇಶಾದ್ಯಂತ ಮಿತವ್ಯಯದ ಬ್ರೇಕ್: ಕೇಂದ್ರ ಮತ್ತು ವಿವಿಧ ರಾಜ್ಯಗಳ ಮಹತ್ವದ ಕ್ರಮಗಳು

Leave a Reply

Your email address will not be published. Required fields are marked *