ಧಾರವಾಡ: ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಸಾಕ್ಷ್ಯ ನಾಶಪಡಿಸಿದ ಆರೋಪದಡಿ ಶಿಕ್ಷೆಗೆ ಒಳಗಾಗಿರುವ ಮಾಜಿ ಪೊಲೀಸ್ ಅಧಿಕಾರಿ ಚನ್ನಕೇಶವ ಟಿಂಗರಿಕರ್ ಅವರಿಗೆ ಉನ್ನತ ನ್ಯಾಯಾಲಯದಲ್ಲಿ (High Court) ಆಘಾತ ಎದುರಾಗಿದೆ. ತಮಗೆ ವಿಧಿಸಲಾಗಿರುವ ಏಳು ವರ್ಷಗಳ ಜೈಲು ಶಿಕ್ಷೆಯನ್ನು ಪ್ರಶ್ನಿಸಿ ಹಾಗೂ ಜಾಮೀನು ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಲು ಹೈಕೋರ್ಟ್ ನಿರಾಕರಿಸಿದೆ.
ತನಿಖೆಯ ದಿಕ್ಕು ತಪ್ಪಿಸಿದ ಆರೋಪ ನ್ಯಾಯಮೂರ್ತಿಗಳಾದ ಎಚ್.ಪಿ. ಸಂದೇಶ್ ಹಾಗೂ ಪಿ. ಶ್ರೀಸುಧಾ ಅವರಿದ್ದ ನ್ಯಾಯಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು. ಈ ವೇಳೆ ಸಿಬಿಐ ಪರ ವಾದ ಮಂಡಿಸಿದ ಕೇಂದ್ರ ಸರ್ಕಾರದ ವಕೀಲರು, ಟಿಂಗರಿಕರ್ ಅವರು ತನಿಖಾಧಿಕಾರಿಯಾಗಿದ್ದ ಅವಧಿಯಲ್ಲಿ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಕೊಲೆ ಪ್ರಕರಣದ ಅಸಲಿ ಅಪರಾಧಿಗಳನ್ನು ರಕ್ಷಿಸಲು ಅವರು ಅಮಾಯಕರನ್ನು ಜೈಲಿಗಟ್ಟಿದ್ದಾರೆ, ಸಿಸಿಟಿವಿ ಸಾಕ್ಷ್ಯಗಳನ್ನು ನಾಶಪಡಿಸಿದ್ದಾರೆ ಮತ್ತು ಸಾಕ್ಷಿಗಳ ಮೇಲೆ ಒತ್ತಡ ಹೇರಿದ್ದಾರೆ ಎಂಬ ಗಂಭೀರ ಅಂಶಗಳನ್ನು ನ್ಯಾಯಪೀಠದ ಗಮನಕ್ಕೆ ತರಲಾಯಿತು.
ಜಾಮೀನು ನೀಡಲು ನ್ಯಾಯಪೀಠದ ನಿರಾಕರಣೆ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು, ಕಾನೂನು ರಕ್ಷಕನ ಸ್ಥಾನದಲ್ಲಿದ್ದ ಅಧಿಕಾರಿಯೇ ಆರೋಪಿಗಳ ಜೊತೆ ಕೈಜೋಡಿಸಿರುವುದು ಕ್ಷಮಿಸಲಾಗದ ಅಪರಾಧ ಎಂದು ಅಭಿಪ್ರಾಯಪಟ್ಟಿತು. ಈಗಾಗಲೇ ವಿಚಾರಣಾ ನ್ಯಾಯಾಲಯವು ಇವರನ್ನು ದೋಷಿ ಎಂದು ತೀರ್ಪು ನೀಡಿರುವುದರಿಂದ, ಇಂತಹ ಹಂತದಲ್ಲಿ ಜಾಮೀನು ನೀಡುವುದು ಸರಿಯಲ್ಲ ಎಂದು ಪೀಠವು ಸ್ಪಷ್ಟಪಡಿಸಿತು. ಅಂತಿಮವಾಗಿ ಅರ್ಜಿದಾರರ ಮನವಿಯ ಮೇರೆಗೆ ವಿಚಾರಣೆಯನ್ನು ಮೇ 26ಕ್ಕೆ ಮುಂದೂಡಲಾಗಿದೆ.
ಪ್ರಕರಣದ ಹಿನ್ನೆಲೆ 2016ರಲ್ಲಿ ಧಾರವಾಡದಲ್ಲಿ ಯೋಗೀಶ್ ಗೌಡ ಅವರನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಆ ಸಮಯದಲ್ಲಿ ಧಾರವಾಡ ಉಪನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆಗಿದ್ದ ಚನ್ನಕೇಶವ ಟಿಂಗರಿಕರ್ ಅವರು ತನಿಖೆಯಲ್ಲಿ ಭ್ರಷ್ಟಾಚಾರ ಎಸಗಿದ್ದಾರೆ ಮತ್ತು ಪ್ರಭಾವಿಗಳನ್ನು ಉಳಿಸಲು ಸಾಕ್ಷ್ಯ ನಾಶಪಡಿಸಿದ್ದಾರೆ ಎಂಬ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅವರಿಗೆ ಶಿಕ್ಷೆ ವಿಧಿಸಲಾಗಿತ್ತು.
ಇದನ್ನೂ ಓದಿ: ಹಿಜಾಬ್ ಬಂದರೆ ಕೇಸರಿ ಶಾಲೂ ಬಂದೇ ಬರುತ್ತೆ, ಸರ್ಕಾರದ ವಿರುದ್ಧ ಬಿಜೆಪಿ ಕಿಡಿ
