TOP NEWS

BJP: ಹಿಜಾಬ್ ಬಂದರೆ ಕೇಸರಿ ಶಾಲೂ ಬಂದೇ ಬರುತ್ತೆ, ಸರ್ಕಾರದ ವಿರುದ್ಧ ಬಿಜೆಪಿ ಕಿಡಿ

BJP angry on congress government giving permission to hijab in schools and college

ಬೆಂಗಳೂರು: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ (Hijab) ಮೇಲಿದ್ದ ನಿರ್ಬಂಧವನ್ನು ತೆಗೆದುಹಾಕಲು ರಾಜ್ಯ ಸರ್ಕಾರ ಮುಂದಾಗಿರುವುದಕ್ಕೆ ಬಿಜೆಪಿ (BJP) ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ನಿರ್ಧಾರವು ಶಾಲಾ ಆವರಣದಲ್ಲಿ ಶಿಸ್ತು ಮತ್ತು ಸಮಾನತೆಯನ್ನು ಕದಡಲಿದೆ ಎಂದು ಆಪಾದಿಸಿರುವ ಬಿಜೆಪಿ ನಾಯಕರು, ಒಂದು ಸಮುದಾಯಕ್ಕೆ ವಿಶೇಷ ರಿಯಾಯಿತಿ ನೀಡಿದರೆ ಹಿಂದೂ ವಿದ್ಯಾರ್ಥಿಗಳೂ ಕೇಸರಿ ಶಾಲು ಧರಿಸಿ ಬರಲು ಅನುಮತಿ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಸಿ.ಟಿ. ರವಿ ಕಿಡಿ: “ಸಮವಸ್ತ್ರದ ಪರಿಕಲ್ಪನೆಗೆ ಧಕ್ಕೆ” ಈ ಬಗ್ಗೆ ಬಿಜೆಪಿ ಕಚೇರಿಯಲ್ಲಿ ಕಿಡಿಕಾರಿದ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ‘ಮರಿ ತಾಲಿಬಾನ್’ ಸರ್ಕಾರ ಎಂದು ಟೀಕಿಸಿದರು. “ಸಮವಸ್ತ್ರ ಎಂದರೆ ಎಲ್ಲರೂ ಸಮಾನರು ಎಂದರ್ಥ. ಆದರೆ ಸರ್ಕಾರ ಹಿಜಾಬ್‌ಗೆ ಮಣೆ ಹಾಕುವ ಮೂಲಕ ಭೇದಭಾವ ಮಾಡುತ್ತಿದೆ. ಧಾರ್ಮಿಕ ಆಚರಣೆಗಳನ್ನು ಮನೆಗೆ ಸೀಮಿತಗೊಳಿಸಬೇಕೇ ಹೊರತು ಶಾಲೆಗಳಿಗಲ್ಲ. ಶಿಕ್ಷಣ ಕಾಯ್ದೆಯನ್ನು ಮೀರಿ ಇಂತಹ ನಿರ್ಧಾರ ಕೈಗೊಳ್ಳುವುದು ಸಮಾಜಕ್ಕೆ ತಪ್ಪು ಸಂದೇಶ ರವಾನಿಸುತ್ತದೆ” ಎಂದು ಅವರು ಆಕ್ರೋಶ ಹೊರಹಾಕಿದರು.

ಫತ್ವಾ ಭೀತಿಯಿಂದಲೇ ಸರ್ಕಾರದ ಈ ನಡೆ? ಮುಸ್ಲಿಂ ಸಂಘಟನೆಗಳು ಮುಂಬರುವ ಮೇ 16ರ ಸಮಾವೇಶದಲ್ಲಿ ಫತ್ವಾ ಹೊರಡಿಸಬಹುದು ಎಂಬ ಅಂಜಿಕೆಯಿಂದ ಸರ್ಕಾರ ಈ ತರಾತುರಿಯ ನಿರ್ಧಾರಕ್ಕೆ ಬಂದಿದೆ ಎಂದು ಬಿಜೆಪಿ ನಾಯಕರು ವಿಶ್ಲೇಷಿಸಿದ್ದಾರೆ. ಕೇವಲ ಮತಬ್ಯಾಂಕ್ ಭದ್ರಪಡಿಸಿಕೊಳ್ಳಲು ಸರ್ಕಾರವು ಧಾರ್ಮಿಕ ಒತ್ತಡಗಳಿಗೆ ಶರಣಾಗಿದೆ ಎಂಬುದು ಅವರ ಪ್ರಮುಖ ಆರೋಪವಾಗಿದೆ.

“ಹಿಜಾಬ್ ಬಂದರೆ ಕೇಸರಿ ಶಾಲೂ ಬಂದೇ ಬರುತ್ತದೆ” ಹಿಜಾಬ್ ವಿಚಾರವನ್ನು ಮತ್ತೆ ಮುನ್ನೆಲೆಗೆ ತರುವ ಮೂಲಕ ಸರ್ಕಾರವೇ ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಲು ಮುಂದಾಗಿದೆ ಎಂದು ದೂರಿದ ಸಿ.ಟಿ. ರವಿ, “ನಮಗೆ ಸಮವಸ್ತ್ರವೇ ಮೊದಲ ಆದ್ಯತೆ. ಆದರೆ ನೀವು ಒಂದು ವರ್ಗಕ್ಕೆ ಧಾರ್ಮಿಕ ಸ್ವಾತಂತ್ರ್ಯ ನೀಡಿದರೆ, ಕೇಸರಿ ಶಾಲು ಧರಿಸುವ ಹಿಂದೂಗಳ ಹಕ್ಕನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ. ಇದರಿಂದ ಆಗುವ ಅನಾಹುತಗಳಿಗೆ ಸರ್ಕಾರವೇ ಜವಾಬ್ದಾರಿಯಾಗಲಿದೆ” ಎಂದು ಎಚ್ಚರಿಕೆ ನೀಡಿದರು. ಕೂಡಲೇ ಈ ವಿವಾದಿತ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಹೊಸ ರೂಪದ ಕೇಸರಿ ಪೇಟಾ ಧರಿಸುವಂತಿಲ್ಲ; ಮೈಸೂರಿನಲ್ಲಿ ಅಭಿವೃದ್ಧಿ ಕೆಲಸಗಳ ಪರಿಶೀಲನೆ ವೇಳೆ ಮುಖ್ಯಮಂತ್ರಿಗಳ ಮಹತ್ವದ ಹೇಳಿಕೆ

Leave a Reply

Your email address will not be published. Required fields are marked *