ಪಾಕಿಸ್ತಾನ: ವಾಯುವ್ಯ ಭಾಗದ ಮಾರುಕಟ್ಟೆಯೊಂದರಲ್ಲಿ ಮಂಗಳವಾರ ಸಂಭವಿಸಿದ ಭೀಕರ ಬಾಂಬ್ ಸ್ಫೋಟದಲ್ಲಿ(Bomb Blast) ಕನಿಷ್ಠ ಒಂಬತ್ತು ಮಂದಿ ಮೃತಪಟ್ಟಿದ್ದು, ಸುಮಾರು 30ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಲಕ್ಕಿ ಮರ್ವತ್ ಜಿಲ್ಲೆಯ ನೌರಂಗ್ ಬಜಾರ್‌ನಲ್ಲಿ ಜನದಟ್ಟಣೆ ಹೆಚ್ಚಿದ್ದ ಸಮಯದಲ್ಲಿ ಈ ದುರಂತ ಸಂಭವಿಸಿದ್ದು, ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ಅಂಗಡಿ ಮುಂಗಟ್ಟುಗಳು ಜಖಂಗೊಂಡಿವೆ. ಘಟನೆಯಿಂದ ಮಾರುಕಟ್ಟೆಯಲ್ಲಿ ಭೀತಿ ಸೃಷ್ಟಿಯಾಗಿದ್ದು, ಗಾಯಾಳುಗಳನ್ನು ರಕ್ಷಿಸಲು ಜನರು ಹರಸಾಹಸ ಪಡುತ್ತಿರುವ ದೃಶ್ಯಗಳು ಕಂಡುಬಂದಿವೆ ಎಂದು ರಕ್ಷಣಾ ಸಂಸ್ಥೆ ತಿಳಿಸಿದೆ.
ಅಫ್ಘಾನಿಸ್ತಾನ ಉಗ್ರರಿಂದ ಕೃತ್ಯ ಶಂಕೆ
ಈ ದಾಳಿಯು ಪಕ್ಕದ ಬನ್ನು ಜಿಲ್ಲೆಯಲ್ಲಿ ಶನಿವಾರ ನಡೆದಿದ್ದ ಭೀಕರ ದಾಳಿಯ ಬೆನ್ನಲ್ಲೇ ನಡೆದಿದೆ. ಶನಿವಾರವಷ್ಟೇ ಪೊಲೀಸ್ ಪೋಸ್ಟ್ ಮೇಲೆ ಕಾರ್ ಬಾಂಬ್ ದಾಳಿ ನಡೆಸಿ 15 ಪೊಲೀಸರನ್ನು ಹತ್ಯೆ ಮಾಡಲಾಗಿತ್ತು. ಆ ದಾಳಿಗೆ ಅಫ್ಘಾನಿಸ್ತಾನ ಮೂಲದ ಉಗ್ರಗಾಮಿಗಳೇ ಕಾರಣ ಎಂದು ಪಾಕಿಸ್ತಾನ ಸರ್ಕಾರವು ಕಾಬೂಲ್ ಮುಂದೆ ತೀವ್ರ ಪ್ರತಿಭಟನೆ ದಾಖಲಿಸಿತ್ತು. ಆದರೆ, ಅಫ್ಘಾನ್ ತಾಲಿಬಾನ್ ಸರ್ಕಾರವು ಈ ಆರೋಪಗಳ ಬಗ್ಗೆ ಯಾವುದೇ ತಕ್ಷಣದ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದು, ಪಾಕಿಸ್ತಾನದ ಆಂತರಿಕ ಭದ್ರತಾ ವೈಫಲ್ಯವೇ ಇಂತಹ ಘಟನೆಗಳಿಗೆ ಕಾರಣ ಎಂದು ಈ ಹಿಂದೆ ಸಮರ್ಥಿಸಿಕೊಂಡಿತ್ತು.
ಫೆಬ್ರವರಿ ತಿಂಗಳಿನಲ್ಲಿ ಪಾಕಿಸ್ತಾನವು ಅಫ್ಘಾನಿಸ್ತಾನದ ಮೇಲೆ ವೈಮಾನಿಕ ದಾಳಿ ನಡೆಸಿದ ನಂತರ ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟಿದೆ. ಉಗ್ರಗಾಮಿಗಳಿಗೆ ಅಫ್ಘಾನಿಸ್ತಾನ ಆಶ್ರಯ ನೀಡುತ್ತಿದೆ ಎಂದು ಪಾಕಿಸ್ತಾನ ದೂರುತ್ತಿದ್ದರೆ, ಅಫ್ಘಾನ್ ಸರ್ಕಾರ ಇದನ್ನು ಸತತವಾಗಿ ನಿರಾಕರಿಸುತ್ತಲೇ ಬಂದಿದೆ. ಈ ನಿರಂತರ ಆರೋಪ-ಪ್ರತ್ಯಾರೋಪಗಳ ನಡುವೆಯೇ ಮಾರುಕಟ್ಟೆಯಲ್ಲಿ ಸಂಭವಿಸಿದ ಈ ಹೊಸ ಸ್ಫೋಟವು ನೆರೆಯ ಎರಡು ದೇಶಗಳ ನಡುವೆ ಮತ್ತೆ ಸಂಘರ್ಷದ ಕಿಚ್ಚು ಹಚ್ಚುವ ಮುನ್ಸೂಚನೆ ನೀಡಿದೆ.
ಹಲವರ ಸ್ಥಿತಿ ಗಂಭೀರ
ಪ್ರಸ್ತುತ ಸ್ಫೋಟದಲ್ಲಿ ಗಾಯಗೊಂಡವರ ಪೈಕಿ ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬನ್ನು ಜಿಲ್ಲೆಯ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಮೊಹಮ್ಮದ್ ಇಶಾಕ್ ಅವರು ನೀಡಿರುವ ಮಾಹಿತಿ ಪ್ರಕಾರ, ಈವರೆಗೆ 37 ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಮಾರುಕಟ್ಟೆಯಂತಹ ಸಾರ್ವಜನಿಕ ಪ್ರದೇಶವನ್ನು ಗುರಿಯಾಗಿಸಿಕೊಂಡು ನಡೆಸಿರುವ ಈ ದಾಳಿಯು ಈ ಪ್ರಾಂತ್ಯದಲ್ಲಿ ಭದ್ರತೆಯ ಕುರಿತು ದೊಡ್ಡ ಮಟ್ಟದ ಆತಂಕ ಮೂಡಿಸಿದೆ.
