TOP NEWS

Narega: ನರೇಗಾ ಇನ್ನು ಇತಿಹಾಸ: ಜುಲೈ 1ರಿಂದ ದೇಶಾದ್ಯಂತ ಜಾರಿಗೆ ಬರಲಿದೆ ‘ವಿಬಿ ಜಿರಾಮ್‌ಜಿ’ ಕಾಯ್ದೆ!

central government to end narega and starting new one

ನವದೆಹಲಿ: ಗ್ರಾಮೀಣ ಭಾರತದ ಬದುಕಿಗೆ ಆಧಾರವಾಗಿದ್ದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) (Narega) ಯೋಜನೆಗೆ ಕೇಂದ್ರ ಸರ್ಕಾರ ಮಂಗಳ ಹಾಡಿದೆ. ಇದರ ಬದಲಾಗಿ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ವಿಕಸಿತ ಭಾರತ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್’ (VB Jiram-G) ಎಂಬ ಹೊಸ ಕಾಯ್ದೆಯನ್ನು ಕೇಂದ್ರ ಸರ್ಕಾರ ಸೋಮವಾರ ಘೋಷಿಸಿದ್ದು, ಜುಲೈ 1ರಿಂದ ಇದು ಜಾರಿಗೆ ಬರಲಿದೆ.

ಜೂನ್ 30ಕ್ಕೆ ಹಳೆಯ ಯೋಜನೆಗೆ ತೆರೆ

ದಶಕಗಳಿಂದ ಜಾರಿಯಲ್ಲಿದ್ದ ನರೇಗಾ (MGNREGA-2005) ಕಾಯ್ದೆಯು ಜೂನ್ 30ರಂದು ಅಧಿಕೃತವಾಗಿ ರದ್ದಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯ ತಿಳಿಸಿದೆ. ಪ್ರಸ್ತುತ ನಡೆಯುತ್ತಿರುವ ಕಾಮಗಾರಿಗಳನ್ನು ಬಾಕಿ ಉಳಿಸಿಕೊಂಡು, ಜುಲೈ 1ರಿಂದ ಅವುಗಳನ್ನು ಹೊಸ ಕಾಯ್ದೆಯಡಿ ಮುಂದುವರಿಸಲಾಗುವುದು. ಈ ಮಹತ್ವದ ಬದಲಾವಣೆಯು ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಏಕಕಾಲಕ್ಕೆ ಅನ್ವಯವಾಗಲಿದೆ.

ಬರಲಿದೆ ಹೊಸ ‘ರೋಜ್‌ಗಾರ್ ಗ್ಯಾರಂಟಿ ಕಾರ್ಡ್’

ನರೇಗಾ ಅಡಿಯಲ್ಲಿ ನೀಡಲಾಗುತ್ತಿದ್ದ ಹಳೆಯ ಜಾಬ್ ಕಾರ್ಡ್‌ಗಳ ಸ್ಥಾನವನ್ನು ಇನ್ಮುಂದೆ ‘ಗ್ರಾಮೀಣ ರೋಜ್‌ಗಾರ್ ಗ್ಯಾರಂಟಿ ಕಾರ್ಡ್’ಗಳು ತುಂಬಲಿವೆ. ಹೊಸ ಕಾರ್ಡ್‌ಗಳು ವಿತರಣೆಯಾಗುವವರೆಗೆ ಹಳೆಯ ಕಾರ್ಡ್‌ಗಳನ್ನೇ ಬಳಸಲು ಅವಕಾಶ ನೀಡಲಾಗಿದೆ. ಇ-ಕೆವೈಸಿ ಪೂರ್ಣಗೊಳ್ಳದ ಕಾರ್ಮಿಕರಿಗೂ ಕೆಲಸ ನೀಡಲು ಸಚಿವಾಲಯ ಸಮ್ಮತಿಸಿದೆ. ಹೊಸದಾಗಿ ಕೆಲಸಕ್ಕೆ ಸೇರಬಯಸುವವರು ಗ್ರಾಮ ಪಂಚಾಯತ್ ಮಟ್ಟದಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಶೀಘ್ರದಲ್ಲೇ ವೇತನ ಪಾವತಿ ಮತ್ತು ದೂರು ಪರಿಹಾರಕ್ಕೆ ಸಂಬಂಧಿಸಿದ ಹೊಸ ನಿಯಮಗಳನ್ನು ಸರ್ಕಾರ ಪ್ರಕಟಿಸಲಿದೆ.

ಗ್ರಾಮಗಳ ಸಬಲೀಕರಣವೇ ಗುರಿ

ಕೇವಲ ಕೂಲಿ ಕೆಲಸ ನೀಡುವುದಷ್ಟೇ ಅಲ್ಲದೆ, ಪ್ರತಿ ಗ್ರಾಮ ಪಂಚಾಯಿತಿಯನ್ನು ಆರ್ಥಿಕವಾಗಿ ಸದೃಢಗೊಳಿಸುವುದು ಈ ಯೋಜನೆಯ ಆಶಯವಾಗಿದೆ. ಗ್ರಾಮೀಣ ಭಾಗದಲ್ಲಿ ಸುಸಜ್ಜಿತ ಮೂಲಸೌಕರ್ಯಗಳನ್ನು ನಿರ್ಮಿಸುವ ಮೂಲಕ ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ‘ವಿಬಿ ಜಿರಾಮ್‌ಜಿ’ ಕಾಯ್ದೆಯ ಮುಖ್ಯ ಗುರಿಯಾಗಿದೆ ಎಂದು ಸರ್ಕಾರ ವಿಶ್ಲೇಷಿಸಿದೆ.

ಕೇಂದ್ರ ಸರ್ಕಾರದ ಈ ಹೊಸ ಹೆಜ್ಜೆಯು ಗ್ರಾಮೀಣ ಪ್ರದೇಶದ ನಿರುದ್ಯೋಗ ಸಮಸ್ಯೆಗೆ ಎಷ್ಟರಮಟ್ಟಿಗೆ ಪರಿಹಾರ ನೀಡಲಿದೆ ಎಂಬುದು ಈಗ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ:ಬಂಗಾಳ ಗಡಿಯಲ್ಲಿ ನುಸುಳುವಿಕೆಗೆ ಬ್ರೇಕ್: ಬಿಎಸ್‌ಎಫ್‌ಗೆ ಭೂಮಿ ನೀಡಲು ಸಿಎಂ ಸುವೇಂದು ಅಧಿಕಾರಿ ಗ್ರೀನ್ ಸಿಗ್ನಲ್!

Leave a Reply

Your email address will not be published. Required fields are marked *