ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪಟ್ಟಕ್ಕೇರಿರುವ ನಟ ವಿಜಯ್ (Vijay) ಅವರು ಇಂದು ಮಹತ್ವದ ರಾಜಕೀಯ ಭೇಟಿಯೊಂದನ್ನು ನಡೆಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಡಿಎಂಕೆ ಹಿರಿಯ ನಾಯಕ ಎಂ.ಕೆ. ಸ್ಟಾಲಿನ್ ಅವರ ನಿವಾಸಕ್ಕೆ ತೆರಳಿದ ಅವರು, ಮಾಜಿ ಸಿಎಂ ಜೊತೆ ಕೆಲಕಾಲ ಸಮಾಲೋಚನೆ ನಡೆಸಿದರು.
ಹೊಸ ಸಂಪುಟದಲ್ಲಿ ಹಳೆ-ಹೊಸ ಮುಖಗಳ (Vijay) ಸಮಾಗಮ
ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥರಾಗಿರುವ ವಿಜಯ್ ಅವರು ಭಾನುವಾರ ನಡೆದ ಅದ್ದೂರಿ ಸಮಾರಂಭದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಅವರ ಸಂಪುಟದಲ್ಲಿ ಅನುಭವಿ ಕೆ.ಎ. ಸೆಂಗೊಟೈಯನ್ ಅವರಿಗೆ ಸ್ಥಾನ ನೀಡಲಾಗಿದ್ದರೆ, ಡಾ. ಟಿ.ಕೆ. ಪ್ರಭು ಮತ್ತು ಕೀರ್ತನಾ ಅಂತಹ ಯುವ ನಾಯಕರಿಗೂ ಆದ್ಯತೆ ನೀಡಲಾಗಿದೆ. ಜೊತೆಗೆ ವಿಜಯ್ ಅವರ ಆಪ್ತರಾದ ಆಧವ್ ಅರ್ಜುನ ಮತ್ತು ಎನ್. ಆನಂದ್ ಅವರೂ ಕೂಡ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
Well-begun. @CMOTamilnadu #Vijay called on his predecessor @mkstalin who welcomed him warmly with a hug. So did LoP #Udhayanidhistalin. The courtesy call happened at Stalin's residence. pic.twitter.com/w46uOJ4oxb
— Uma Sudhir (@umasudhir) May 11, 2026
ರಾಜಕೀಯ ನಾಯಕರ ಗೈರು ಮತ್ತು ಕುತೂಹಲದ ಭೇಟಿ
ವಿಜಯ್ ಅವರ ಪ್ರಮಾಣವಚನ ಕಾರ್ಯಕ್ರಮಕ್ಕೆ ಪ್ರಮುಖ ವಿರೋಧ ಪಕ್ಷಗಳ ನಾಯಕರಾದ ಎಂ.ಕೆ. ಸ್ಟಾಲಿನ್ ಮತ್ತು ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಹಾಜರಾಗಿರಲಿಲ್ಲ. ಆದರೂ, ವಿಜಯ್ ಸರ್ಕಾರದ ಮಿತ್ರಪಕ್ಷಗಳಾದ ವಿಸಿಕೆ ಮತ್ತು ಎಡಪಕ್ಷಗಳ ನಾಯಕರು ಸಮಾರಂಭದಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದ್ದರು. ಸಮಾರಂಭಕ್ಕೆ ಗೈರಾಗಿದ್ದ ಸ್ಟಾಲಿನ್ ಅವರನ್ನು ಮರುದಿನವೇ ವಿಜಯ್ ಅವರು ಮನೆಗೆ ಹೋಗಿ ಭೇಟಿಯಾಗಿರುವುದು ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.
ಸಿನಿಮಾ ರಂಗದಿಂದ ರಾಜಕೀಯಕ್ಕೆ ಬಂದು ರಾಜ್ಯದ ಚುಕ್ಕಾಣಿ ಹಿಡಿದಿರುವ ವಿಜಯ್ ಅವರ ಮುಂದಿನ ಆಡಳಿತ ವೈಖರಿ ಹೇಗಿರಲಿದೆ ಎಂಬುದನ್ನು ಈಗ ಇಡೀ ದೇಶವೇ ಕುತೂಹಲದಿಂದ ಗಮನಿಸುತ್ತಿದೆ.
