Priyanka Chopra:‌ ಪ್ರಿಯಾಂಕಾ ಚೋಪ್ರಾ ಅವರ ಹೇರ್ ಕೇರ್ ಬ್ರ್ಯಾಂಡ್ ಈಗ ಅಂಬಾನಿ ಪಾಲು

Priyanka Chopra haircare brand Anomaly acquired by Reliance

ಮುಂಬೈ: ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರ ಕನಸಿನ ಹೇರ್ ಕೇರ್ ಬ್ರ್ಯಾಂಡ್ ‘ಅನಾಮಲಿ’ (Anomaly) ಈಗ ಅಂಬಾನಿ ಮಾಲೀಕತ್ವದ ರಿಲಯನ್ಸ್ ರಿಟೇಲ್ ವಶವಾಗಿದೆ. ಈ ಮಹತ್ವದ ಬೆಳವಣಿಗೆಯನ್ನು ಪ್ರಿಯಾಂಕಾ ಚೋಪ್ರಾ ಅವರು ಏಪ್ರಿಲ್ 30ರಂದು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಹಂಚಿಕೊಂಡಿದ್ದು, ಇದು ತಮ್ಮ ಬ್ರ್ಯಾಂಡ್ ಪಾಲಿಗೆ ಒಂದು ‘ಪೂರ್ಣ ವೃತ್ತದ ಕ್ಷಣ’ (Full-circle moment) ಎಂದು ಬಣ್ಣಿಸಿದ್ದಾರೆ. ಸಣ್ಣದಾಗಿ ಆರಂಭವಾದ ತಮ್ಮ ವೈಯಕ್ತಿಕ ಕಲ್ಪನೆ ಈಗ ಜಾಗತಿಕ ಮಟ್ಟದಲ್ಲಿ ಬೃಹತ್ ಮಾರುಕಟ್ಟೆ ಕಂಡಿರುವುದಕ್ಕೆ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಭಾವುಕರಾಗಿ ಪೋಸ್ಟ್‌ ಮಾಡಿದ ನಟಿ

ತಮ್ಮ ಬಾಲ್ಯದ ದಿನಗಳಲ್ಲಿ ತಾವು ಅನುಸರಿಸುತ್ತಿದ್ದ ಕೂದಲಿನ ಆರೈಕೆಯ ಸಂಪ್ರದಾಯ ಮತ್ತು ನಂಬಿಕೆಗಳನ್ನೇ ಆಧಾರವಾಗಿಟ್ಟುಕೊಂಡು ಪ್ರಿಯಾಂಕಾ ಈ ಬ್ರ್ಯಾಂಡ್ ಅನ್ನು ಕಟ್ಟಿ ಬೆಳೆಸಿದ್ದರು. “ಅತಿ ಹೆಚ್ಚಿನ ಕಾಳಜಿಯೇ ಸುಂದರವಾದ ಕೂದಲಿನ ರಹಸ್ಯ ಎಂಬ ನಂಬಿಕೆಯೊಂದಿಗೆ ಅನಾಮಲಿ ಹುಟ್ಟಿಕೊಂಡಿತು. ಅಂದು ವೈಯಕ್ತಿಕ ಕಾಳಜಿಯಿಂದ ಶುರುವಾದ ಈ ಪಯಣ, ಇಂದು ಜಾಗತಿಕ ಮಹತ್ವಾಕಾಂಕ್ಷೆಯೊಂದಿಗೆ ಬೆಳೆದು ನಿಂತಿದೆ,” ಎಂದು ಪ್ರಿಯಾಂಕಾ ಭಾವುಕರಾಗಿ ಬರೆದುಕೊಂಡಿದ್ದಾರೆ. ರಿಲಯನ್ಸ್‌ನಂತಹ ಬೃಹತ್ ಸಂಸ್ಥೆಯ ಜೊತೆಗಿನ ಈ ಪಾಲುದಾರಿಕೆಯು ಬ್ರ್ಯಾಂಡ್‌ನ ಬೆಳವಣಿಗೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಿದೆ ಎಂಬ ವಿಶ್ವಾಸ ಅವರದ್ದಾಗಿದೆ.

ರಿಲಯನ್ಸ್ ರಿಟೇಲ್ ಈ ಬ್ರ್ಯಾಂಡ್ ಅನ್ನು ಸ್ವಾಧೀನಪಡಿಸಿಕೊಂಡಿದ್ದರೂ, ಪ್ರಿಯಾಂಕಾ ಚೋಪ್ರಾ ಅವರು ಈ ಸಂಸ್ಥೆಯಿಂದ ಹೊರಗುಳಿಯುತ್ತಿಲ್ಲ. ಅವರು ಬ್ರ್ಯಾಂಡ್‌ನ ‘ಕ್ರಿಯೇಟಿವ್ ಡೈರೆಕ್ಟರ್’ ಆಗಿ ಮುಂದುವರಿಯಲಿದ್ದು, ಉತ್ಪನ್ನಗಳ ಗುಣಮಟ್ಟ ಮತ್ತು ನಾವೀನ್ಯತೆಯ ಮೇಲೆ ನಿಗಾ ಇಡಲಿದ್ದಾರೆ. “ಕ್ರಿಯೇಟಿವ್ ಡೈರೆಕ್ಟರ್ ಆಗಿ ನಾನು ಈ ಬ್ರ್ಯಾಂಡ್‌ನ ಪ್ರತಿಯೊಂದು ಹಂತದಲ್ಲೂ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತೇನೆ. ನಾವು ಯಾವ ಹಾದಿಯಲ್ಲಿ ಬೆಳೆಯಬೇಕು ಮತ್ತು ಯಾವ ಹೊಸ ಉತ್ಪನ್ನಗಳನ್ನು ನೀಡಬೇಕು ಎಂಬ ಬಗ್ಗೆ ನಾನು ಮಾರ್ಗದರ್ಶನ ನೀಡಲಿದ್ದೇನೆ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇಶಾ ಅಂಬಾನಿ ಜೊತೆ ಕೆಲಸ ಮಾಡಲು ಖುಷಿ ಇದೆ

ವಿಶೇಷವಾಗಿ ರಿಲಯನ್ಸ್ ರಿಟೇಲ್‌ನ ನಿರ್ದೇಶಕಿ ಇಶಾ ಅಂಬಾನಿ ಅವರೊಂದಿಗೆ ಕೆಲಸ ಮಾಡಲು ಪ್ರಿಯಾಂಕಾ ತುಂಬಾ ಉತ್ಸುಕರಾಗಿದ್ದಾರೆ. ಇಶಾ ಅಂಬಾನಿ ಅವರ ಕಾರ್ಯಕ್ಷಮತೆ ಮತ್ತು ಯಾವುದೇ ಸಣ್ಣ ಕಲ್ಪನೆಯನ್ನು ಬೃಹತ್ ಮಟ್ಟದಲ್ಲಿ ಸಾಕಾರಗೊಳಿಸುವ ಅವರ ಕೌಶಲವನ್ನು ಪ್ರಿಯಾಂಕಾ ಶ್ಲಾಘಿಸಿದ್ದಾರೆ. ರಿಲಯನ್ಸ್‌ನ ಬೃಹತ್ ಜಾಲದ ಮೂಲಕ ‘ಅನಾಮಲಿ’ ಉತ್ಪನ್ನಗಳು ಭಾರತದಾದ್ಯಂತ ಅತಿ ಸುಲಭವಾಗಿ ಪ್ರತಿಯೊಬ್ಬ ಗ್ರಾಹಕರಿಗೂ ತಲುಪಲಿವೆ. ಇದು ಕೇವಲ ಆರಂಭವಷ್ಟೇ, ಮುಂದೆ ಸಾಧಿಸುವುದು ತುಂಬಾ ಇದೆ ಎಂದು ಪ್ರಿಯಾಂಕಾ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಆರ್‌ಬಿಐ ಹೊಸ ನಿಯಮಕ್ಕೆ ಬ್ಯಾಂಕ್‌ಗಳ ವಿರೋಧ

Leave a Reply

Your email address will not be published. Required fields are marked *