ನವದೆಹಲಿ: ಇರಾನ್ ಯುದ್ಧದ ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ ಇಂಧನ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯವು ಭಾರತದ ಮೇಲೆ ದೊಡ್ಡ ಹೊಡೆತ ನೀಡಿದೆ. ಕೇಂದ್ರ ಸರ್ಕಾರವು ಗೃಹಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡದಿದ್ದರೂ, ವಾಣಿಜ್ಯ ಬಳಕೆಯ (19 ಕೆಜಿ) ಸಿಲಿಂಡರ್ (Commercial LPG) ಬೆಲೆಯನ್ನು ಅಕ್ಷರಶಃ ಗಗನಕ್ಕೇರಿಸಿದೆ. ಸರಾಸರಿ 993 ರೂಪಾಯಿಗಳಷ್ಟು ಭಾರಿ ಏರಿಕೆ ಕಂಡಿರುವ ವಾಣಿಜ್ಯ ಸಿಲಿಂಡರ್ ಬೆಲೆ ಈಗ ಹೋಟೆಲ್ ಉದ್ಯಮದ ನಿದ್ದೆಗೆಡಿಸಿದೆ.
ಫೆಬ್ರವರಿ 28ರಂದು ಯುದ್ಧ ಆರಂಭವಾದಾಗಿನಿಂದ ಇದುವರೆಗೆ ವಾಣಿಜ್ಯ ಸಿಲಿಂಡರ್ ಬೆಲೆ ಮೂರು ಬಾರಿ ಏರಿಕೆಯಾಗಿದೆ. ದೆಹಲಿಯಲ್ಲಿ ಈ ಹಿಂದೆ 2,078 ರೂಪಾಯಿ ಇದ್ದ ಸಿಲಿಂಡರ್ ಬೆಲೆ ಈಗ 3,071 ರೂಪಾಯಿಗೆ ತಲುಪಿದೆ. ಮುಂಬೈನಲ್ಲಿಯೂ ಇದರ ದರ 3,024 ರೂಪಾಯಿ ದಾಟಿದೆ. ಈ ಭಾರಿ ಏರಿಕೆಯಿಂದಾಗಿ ಹೋಟೆಲ್, ರೆಸ್ಟೋರೆಂಟ್‌ಗಳು ಮತ್ತು ಸಣ್ಣ ತಿಂಡಿ ಗಾಡಿಗಳ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ನೇರ ಪರಿಣಾಮವಾಗಿ ಹೊರಗಡೆ ಊಟ ಮಾಡುವ ದರ ಹಾಗೂ ಫುಡ್ ಡೆಲಿವರಿ ಚಾರ್ಜ್‌ಗಳು ದುಬಾರಿಯಾಗುವ ಸಾಧ್ಯತೆ ದಟ್ಟವಾಗಿದೆ.
ಬುಕ್ಕಿಂಗ್ ನಿಯಮದಲ್ಲಿ ಬದಲಾವಣೆ: ಬೆಲೆ ಏರಿಕೆಯ ನಡುವೆಯೇ ಇಂದಿನಿಂದ (ಮೇ 1) ಅಡುಗೆ ಅನಿಲ ಬುಕ್ಕಿಂಗ್ ನಿಯಮಗಳಲ್ಲಿ ಮಹತ್ವದ ಬದಲಾವಣೆ ತರಲಾಗಿದೆ. ಇಂಡೇನ್, ಭಾರತ್ ಗ್ಯಾಸ್ ಮತ್ತು ಹೆಚ್‌ಪಿ ಗ್ಯಾಸ್ ಕಂಪನಿಗಳು ಹೊಸ ನಿಯಮಗಳನ್ನು ಜಾರಿಗೊಳಿಸಿವೆ. ಇನ್ಮುಂದೆ ನಗರ ಪ್ರದೇಶದ ಗ್ರಾಹಕರು ಒಂದು ಸಿಲಿಂಡರ್ ಬುಕ್ ಮಾಡಿದ ನಂತರ ಮತ್ತೊಂದು ಸಿಲಿಂಡರ್ ಬುಕ್ ಮಾಡಲು 25 ದಿನಗಳ ಕಾಲ ಕಾಯಲೇಬೇಕು (ಈ ಮೊದಲು ಇದು 21 ದಿನ ಇತ್ತು). ಗ್ರಾಮೀಣ ಭಾಗದ ಗ್ರಾಹಕರಿಗೆ ಈ ಅವಧಿಯನ್ನು 45 ದಿನಗಳಿಗೆ ಹೆಚ್ಚಿಸಲಾಗಿದೆ. ನಿಗದಿತ ಅವಧಿಗಿಂತ ಮುಂಚಿತವಾಗಿ ಬುಕ್ ಮಾಡಲು ಪ್ರಯತ್ನಿಸಿದರೆ ಸಿಸ್ಟಂ ಸ್ವಯಂಚಾಲಿತವಾಗಿ ಅದನ್ನು ತಿರಸ್ಕರಿಸಲಿದೆ.
ಅಲ್ಲದೆ, ಸಿಲಿಂಡರ್ ವಿತರಣೆಯ ಸಂದರ್ಭದಲ್ಲಿ ‘ಡೆಲಿವರಿ ಅಥೆಂಟಿಕೇಶನ್ ಕೋಡ್’ (DAC) ಕಡ್ಡಾಯಗೊಳಿಸಲಾಗಿದೆ. ಕೇವಲ ಬ್ಲೂ ಬುಕ್ ಅಥವಾ ರಶೀದಿ ತೋರಿಸಿದರೆ ಸಿಲಿಂಡರ್ ಸಿಗುವುದಿಲ್ಲ. ಬುಕ್ಕಿಂಗ್ ಮಾಡಿದಾಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ (OTP) ಸಂಖ್ಯೆಯನ್ನು ವಿತರಣಾ ಸಿಬ್ಬಂದಿಗೆ ನೀಡಿದ ನಂತರವೇ ಸಿಲಿಂಡರ್ ಹಸ್ತಾಂತರಿಸಲಾಗುತ್ತದೆ.
ಪೆಟ್ರೋಲ್, ಡೀಸೆಲ್ ದರ ಸ್ಥಿರ: ವಾಣಿಜ್ಯ ಗ್ಯಾಸ್ ಬೆಲೆ ಏರಿಕೆಯಾಗಿದ್ದರೂ, ಸದ್ಯಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಇದು ವಾಹನ ಸವಾರರಿಗೆ ಸಮಾಧಾನ ತಂದಿದೆ. ಹಾಗೆಯೇ ವಿಮಾನ ಇಂಧನ (ATF) ದರದಲ್ಲೂ ಬದಲಾವಣೆ ಮಾಡದಿರುವುದು ವಿಮಾನಯಾನ ಕ್ಷೇತ್ರಕ್ಕೆ ನೆಮ್ಮದಿ ನೀಡಿದೆ. ಆದರೆ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿದ್ದರೂ ದೇಶದಲ್ಲಿ ಬೆಲೆ ಏರಿಸದ ಕಾರಣ ತೈಲ ಕಂಪನಿಗಳು ದಿನಕ್ಕೆ ಸುಮಾರು 16,000 ಕೋಟಿ ರೂಪಾಯಿಗಳಷ್ಟು ನಷ್ಟ ಅನುಭವಿಸುತ್ತಿವೆ ಎಂದು ವರದಿಯಾಗಿದೆ. ಬೆಲೆ ಏರಿಕೆ ಮಾಡಿದರೆ ಹಣದುಬ್ಬರ ಹೆಚ್ಚಾಗುವ ಭೀತಿಯಲ್ಲಿರುವ ಸರ್ಕಾರ ಸದ್ಯಕ್ಕೆ ಹಗ್ಗದ ಮೇಲಿನ ನಡಿಗೆಯನ್ನು ಮುಂದುವರಿಸಿದೆ.
ಇದನ್ನೂ ಓದಿ: ಪ್ರಿಯಾಂಕಾ ಚೋಪ್ರಾ ಅವರ ಹೇರ್ ಕೇರ್ ಬ್ರ್ಯಾಂಡ್ ಈಗ ಅಂಬಾನಿ ಪಾಲು
