CRIME: ಬಿಜೆಪಿ ಮುಖಂಡ ವೆಂಕಟೇಶ್ ಕುರುಬರ ಕೊಲೆ ಪ್ರಕರಣ: ಆರು ಮಂದಿ ಆರೋಪಿಗಳಿಗೆ ಮರಣದಂಡನೆ ಶಿಕ್ಷೆ

crime koppal bjp leader case death sentence announced

ಕೊಪ್ಪಳ: ಜಿಲ್ಲೆಯ ಬಿಜೆಪಿ ಮುಖಂಡ ವೆಂಕಟೇಶ್ ಕುರುಬರ ಅವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತೀರ್ಪು ನೀಡಿದೆ. ಪ್ರಕರಣದಲ್ಲಿ ದೋಷಿಗಳೆಂದು ಸಾಬೀತಾದ ಆರು ಮಂದಿ ಆರೋಪಿಗಳಿಗೆ ನ್ಯಾಯಾಲಯವು ಮರಣದಂಡನೆ ಶಿಕ್ಷೆ (Crime) ವಿಧಿಸಿ ಆದೇಶ ಹೊರಡಿಸಿದೆ.

ಏನಿದು ಘಟನೆ?

2025ರ ಅಕ್ಟೋಬರ್ 8 ರಂದು ಈ ಘೋರ ಕೃತ್ಯ ನಡೆದಿತ್ತು. ಅಂದು ರಾತ್ರಿ ವೆಂಕಟೇಶ್ ಕುರುಬರ ಅವರು ಬೈಕ್‌ನಲ್ಲಿ ತೆರಳುತ್ತಿದ್ದಾಗ ಕಾರಿನಲ್ಲಿ ಬಂದಿದ್ದ ಹಂತಕರು, ಉದ್ದೇಶಪೂರ್ವಕವಾಗಿ ಅವರ ಬೈಕ್‌ಗೆ ಡಿಕ್ಕಿ ಹೊಡೆದಿದ್ದರು. ಡಿಕ್ಕಿಯ ರಭಸಕ್ಕೆ ವೆಂಕಟೇಶ್ ಅವರು ಕೆಳಗೆ ಬಿದ್ದ ತಕ್ಷಣ, ಆರೋಪಿಗಳು ಲಾಂಗ್ ಮತ್ತು ಮಚ್ಚುಗಳಿಂದ ಅವರ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದರು. ರಾಜಕೀಯ ದ್ವೇಷ ಹಾಗೂ ವೈಯಕ್ತಿಕ ಕಾರಣಗಳಿಗಾಗಿ ನಡೆದ ಈ ಕೊಲೆ ಪ್ರಕರಣ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು.

ಆರೋಪಿಗಳಿಗೆ ಮರಣದಂಡನೆ

ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶರು, ರವಿ ಸಣ್ಣಬಸವರಾಜ್‌, ವಿಜಯ್‌ ಅಲಿಯಾಸ್‌ ಮೈಲಾರಿ, ಧನರಾಜ್‌, ಭೀಮ ಅಲಿಯಾಸ್‌ ಭರತ್‌, ಸಲೀಂ ಮತ್ತು ಗಂಗಾಧರ್‌ ಗೌಳಿ ಎಂಬವರನ್ನು ಅಪರಾಧಿಗಳು ಎಂದು ಘೋಷಿಸಿ ಗಲ್ಲು ಶಿಕ್ಷೆ ವಿಧಿಸಿದ್ದಾರೆ. ಪೊಲೀಸರು ಸಲ್ಲಿಸಿದ್ದ ಸಾಕ್ಷ್ಯಾಧಾರಗಳು ಮತ್ತು ದೋಷಾರೋಪ ಪಟ್ಟಿಯನ್ನು ಪರಿಗಣಿಸಿ ನ್ಯಾಯಾಲಯವು ಈ ಕಠಿಣ ಶಿಕ್ಷೆಯನ್ನು ಪ್ರಕಟಿಸಿದೆ. ಯೋಜಿತವಾಗಿ ಸಂಚು ರೂಪಿಸಿ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದ ಆರೋಪಿಗಳಿಗೆ ಈ ತೀರ್ಪು ಸಿಂಹಸ್ವಪ್ನವಾಗಿದ್ದು, ಸಂತ್ರಸ್ತ ಕುಟುಂಬಕ್ಕೆ ಕೊನೆಗೂ ನ್ಯಾಯ ಸಿಕ್ಕಂತಾಗಿದೆ. ತೀರ್ಪಿನ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಹೆಚ್ಚಿನ ಭದ್ರತೆಯನ್ನು ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಗಂಡನ ಮನೆಯವರ ಕಿರುಕುಳ, ನೇಣಿಗೆ ಶರಣಾದ ಯುವತಿ: ಆರೋಪಿಗಳ ರಕ್ಷಣೆಗೆ ಮುಂದಾಯ್ತ ಖಾಕಿ?

Leave a Reply

Your email address will not be published. Required fields are marked *