Cyber Fraud: ಮದುವೆ ಹೆಸರಲ್ಲಿ ಮಹಿಳೆಯರಿಗೆ ಕೋಟ್ಯಂತರ ರೂಪಾಯಿ ವಂಚನೆ, ಆರೋಪಿ ಅಂದರ್

cyber fraud delhi police arrested accused

ನವದೆಹಲಿ: ದೇಶಾದ್ಯಂತ ಡೇಟಿಂಗ್ ಆ್ಯಪ್‌ಗಳ ಮೂಲಕ ಮಹಿಳೆಯರನ್ನು ನಂಬಿಸಿ, ಭಾವನಾತ್ಮಕವಾಗಿ ವಂಚಿಸುತ್ತಿದ್ದ 35 ವರ್ಷದ ಕಿಲಾಡಿ ಆನಂದ್ ಕುಮಾರ್ ಎಂಬಾತನನ್ನು ದೆಹಲಿ (Cyber Fraud) ಪೊಲೀಸರು ಬಂಧಿಸಿದ್ದಾರೆ. ಸುಮಾರು 500ಕ್ಕೂ ಹೆಚ್ಚು ಮಹಿಳೆಯರಿಗೆ ಮದುವೆಯ ಸುಳ್ಳು ಭರವಸೆ ನೀಡಿ 2 ಕೋಟಿ ರೂಪಾಯಿಗೂ ಅಧಿಕ ಹಣ ಪೀಕಿದ್ದ ಈತನ ಬಣ್ಣದ ಬದುಕು ಈಗ ಜೈಲು ಪಾಲಾಗಿದೆ.

ಹತ್ತಾರು ಮುಖವಾಡ, ನೂರಾರು ವಂಚನೆ: ಆರೋಪಿ ಆನಂದ್ ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಹತ್ತಾರು ನಕಲಿ ಪ್ರೊಫೈಲ್‌ಗಳನ್ನು ಹೊಂದಿದ್ದ. ತಾನು ದೊಡ್ಡ ಉದ್ಯಮಿ, ವೈದ್ಯ ಅಥವಾ ಸಿನಿಮಾ ನಿರ್ಮಾಪಕ ಎಂದು ನಂಬಿಸುತ್ತಿದ್ದ. ಮಹಿಳೆಯರೊಂದಿಗೆ ವಾರಗಟ್ಟಲೆ ಆತ್ಮೀಯವಾಗಿ ಮಾತನಾಡಿ ನಂಬಿಕೆ ಗಳಿಸುತ್ತಿದ್ದ ಈತ, ನಂತರ ತನ್ನ ಅಸಲಿ ಆಟ ಶುರು ಮಾಡುತ್ತಿದ್ದ. “ವ್ಯವಹಾರದಲ್ಲಿ ನಷ್ಟವಾಗಿದೆ”, “ತುರ್ತು ವೈದ್ಯಕೀಯ ಚಿಕಿತ್ಸೆಗೆ ಹಣ ಬೇಕು” ಎಂಬ ಸುಳ್ಳು ಕಥೆಗಳನ್ನು ಹೇಳಿ ಹಣ ದೋಚುತ್ತಿದ್ದ ಎಂದು ಡಿಸಿಪಿ ಅಮಿತ್ ಗೋಯಲ್ ತಿಳಿಸಿದ್ದಾರೆ.

ಬ್ಲ್ಯಾಕ್‌ಮೇಲ್ ತಂತ್ರ ಮತ್ತು ಸಾವಿನ ನಾಟಕ! ವಂಚನೆಗೆ ಇದು ಸುಲಭ ಹಾದಿಯಲ್ಲ ಎಂದು ಕಂಡಾಗ ಆನಂದ್ ಅತಿರೇಕದ ವರ್ತನೆಗೆ ಇಳಿಯುತ್ತಿದ್ದ. ಒಂದು ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯಿಂದ 7 ಲಕ್ಷ ರೂಪಾಯಿ ಕಿತ್ತಿದ್ದ ಈತ, ಆಕೆ ಹಣ ವಾಪಸ್ ಕೇಳಿದಾಗ “ವೈಭವ್ ಅರೋರಾ (ನಕಲಿ ಐಡೆಂಟಿಟಿ) ಸತ್ತುಹೋಗಿದ್ದಾನೆ” ಎಂದು ಮತ್ತೊಂದು ಪ್ರೊಫೈಲ್ ಮೂಲಕ ನಂಬಿಸಿದ್ದ. ಅಷ್ಟೇ ಅಲ್ಲದೆ, ಮಹಿಳೆಯರು ಕಳುಹಿಸಿದ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಇಟ್ಟುಕೊಂಡು ಅವರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎಂಬ ಆಘಾತಕಾರಿ ಮಾಹಿತಿ ತನಿಖೆಯಲ್ಲಿ ತಿಳಿದುಬಂದಿದೆ.

ಆನ್‌ಲೈನ್ ಗೇಮಿಂಗ್‌ಗೆ ಹಣ ವ್ಯಯ: ಪಶ್ಚಿಮ ಬಂಗಾಳದಲ್ಲಿ ತಲೆಮರೆಸಿಕೊಂಡಿದ್ದ ಈತನನ್ನು ತಾಂತ್ರಿಕ ಮಾಹಿತಿ ಆಧಾರದ ಮೇಲೆ ಬಂಧಿಸಲಾಗಿದೆ. ಈತನಿಂದ 4 ಸ್ಮಾರ್ಟ್‌ಫೋನ್, 8 ಸಿಮ್ ಕಾರ್ಡ್ ಹಾಗೂ ವಂಚಿಸಿದ ಹಣದಿಂದ ಖರೀದಿಸಿದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ವಂಚಿಸಿದ ಹಣವನ್ನೆಲ್ಲ ಈತ ಆನ್‌ಲೈನ್ ಗೇಮಿಂಗ್ ಮತ್ತು ಐಷಾರಾಮಿ ಜೀವನಕ್ಕೆ ವ್ಯಯಿಸುತ್ತಿದ್ದ. ಸದ್ಯ ಪೊಲೀಸರು ಈತನಿಂದ ವಂಚನೆಗೊಳಗಾದ ಇನ್ನಷ್ಟು ಸಂತ್ರಸ್ತೆಯರ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.

ಇದನ್ನೂ ಓದಿ: ಸ್ಟಾರ್‌ಬಕ್ಸ್ ಕಂಪನಿ ಡ್ರಿಂಕ್‌ ಕ್ಯಾನ್‌ ಒಳಗೆ ಸತ್ತ ಇಲಿ ಪತ್ತೆ, ಅನುಮಾನ ಸೃಷ್ಟಿ ಮಾಡಿದ ವಿಡಿಯೋ

Leave a Reply

Your email address will not be published. Required fields are marked *