Narendra Modi: ಮೀಸಲಾತಿ ವಿರೋಧಿಸುವವರನ್ನ ದೇಶದ ಮಹಿಳೆಯರು ಕ್ಷಮಿಸಲ್ಲ: ನರೇಂದ್ರ ಮೋದಿ

Narendra modi talks in parliament regarding women reservation

ನವದೆಹಲಿ: ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಬಹುನಿರೀಕ್ಷಿತ ಮಹಿಳಾ ಮೀಸಲಾತಿ ವಿಧೇಯಕದ ಪರವಾಗಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi), ಈ ಐತಿಹಾಸಿಕ ನಡೆಯನ್ನು ವಿರೋಧಿಸುವವರನ್ನು ದೇಶದ ಮಹಿಳೆಯರು ಎಂದಿಗೂ ಕ್ಷಮಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ. “ಈ ವಿಧೇಯಕವು ‘ವಿಕಸಿತ ಭಾರತ’ ನಿರ್ಮಾಣದ ಪಯಣದಲ್ಲಿ ಒಂದು ಹೊಸ ಅಧ್ಯಾಯ ಬರೆಯಲಿದೆ. ಈ ಮೂಲಕ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಮಂತ್ರವು ನಿಜವಾಗಲಿದೆ,” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

30 ವರ್ಷಗಳ ಹಿಂದೆಯೇ ಆಗಬೇಕಿತ್ತು: “ಭಾರತವು ಪ್ರಜಾಪ್ರಭುತ್ವದ ತಾಯಿ. ಈ ಅಭಿವೃದ್ಧಿಯ ಹಾದಿಯಲ್ಲಿ ಮಹಿಳಾ ಶಕ್ತಿಯನ್ನು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಒಳಗೊಳ್ಳುತ್ತಿರುವುದು ನಮ್ಮ ಸೌಭಾಗ್ಯ” ಎಂದ ಪ್ರಧಾನಿ, ಈ ಕೆಲಸ 30 ವರ್ಷಗಳ ಹಿಂದೆಯೇ ಆಗಬೇಕಿತ್ತು ಎಂದು ಅಭಿಪ್ರಾಯಪಟ್ಟರು. ಒಂದು ವೇಳೆ ಅಂದೇ ಈ ವಿಧೇಯಕ ಜಾರಿಯಾಗಿದ್ದರೆ, ಇವತ್ತಿನ ವೇಳೆಗೆ ಈ ವ್ಯವಸ್ಥೆಯು ಸಾಕಷ್ಟು ಪರಿಪಕ್ವತೆಯನ್ನು ಸಾಧಿಸುತ್ತಿತ್ತು ಮತ್ತು ಕಾಲಕಾಲಕ್ಕೆ ಅಗತ್ಯ ಸುಧಾರಣೆಗಳೂ ಕಂಡುಬರುತ್ತಿದ್ದವು ಎಂದು ಅವರು ತಿಳಿಸಿದರು.

ರಾಜಕೀಯ ಬಣ್ಣ ಬಳಿಯಬೇಡಿ: ಈ ಮಹತ್ವದ ನಿರ್ಧಾರಕ್ಕೆ ರಾಜಕೀಯ ಬಣ್ಣ ಬಳಿಯುವ ಅಗತ್ಯವಿಲ್ಲ ಎಂದು ಪ್ರತಿಪಕ್ಷಗಳಿಗೆ ಕಿವಿಮಾತು ಹೇಳಿದ ಮೋದಿ, ದೇಶದ ಪ್ರತಿಯೊಬ್ಬ ಸೋದರಿ ಮತ್ತು ಮಗಳ ಇಚ್ಛೆಯನ್ನು ಈಡೇರಿಸಲು ಎಲ್ಲಾ ಪಕ್ಷಗಳು ಒಮ್ಮತದಿಂದ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು. “ರಾಷ್ಟ್ರದ ಜೀವನದಲ್ಲಿ ಇಂತಹ ನಿರ್ಣಾಯಕ ಕ್ಷಣಗಳು ಬಂದಾಗ ನಾಯಕತ್ವವು ಅದನ್ನು ಸರಿಯಾಗಿ ಗ್ರಹಿಸಿ ದೇಶದ ಪರಂಪರೆಯನ್ನಾಗಿ ಬದಲಿಸಬೇಕು. ಇದು ಕೇವಲ ಒಂದು ಪಕ್ಷಕ್ಕೆ ಲಾಭ ತರುವ ವಿಷಯವಲ್ಲ, ಬದಲಾಗಿ ಇಡೀ ದೇಶದ ಪ್ರಜಾಪ್ರಭುತ್ವಕ್ಕೆ ಸಿಕ್ಕ ಜಯ,” ಎಂದು ಅವರು ಪ್ರತಿಪಾದಿಸಿದರು.

ವಿರೋಧಿಸಿದವರಿಗೆ ಎಚ್ಚರಿಕೆ: ಇದೇ ವೇಳೆ ಈ ಹಿಂದೆ ಮಹಿಳಾ ಮೀಸಲಾತಿಯನ್ನು ವಿರೋಧಿಸಿದ್ದ ಪಕ್ಷಗಳ ವಿರುದ್ಧ ಹರಿಹಾಯ್ದ ಪ್ರಧಾನಿ, ಅಂತಹವರನ್ನು ಮಹಿಳೆಯರು ಕ್ಷಮಿಸಿಲ್ಲ ಮತ್ತು ಅವರು ಅದರ ಪರಿಣಾಮವನ್ನು ಈಗಾಗಲೇ ಎದುರಿಸಿದ್ದಾರೆ ಎಂದು ತೀಕ್ಷ್ಣವಾಗಿ ತಿವಿದರು. ಸದ್ಯ ಸಂವಿಧಾನದ 131ನೇ ತಿದ್ದುಪಡಿ ಸೇರಿದಂತೆ ಮೂರು ಪ್ರಮುಖ ವಿಧೇಯಕಗಳನ್ನು ಮಂಡಿಸಲಾಗಿದ್ದು, 2029ರ ಸಾರ್ವತ್ರಿಕ ಚುನಾವಣೆಯಿಂದ ಮಹಿಳಾ ಮೀಸಲಾತಿ ಜಾರಿಗೆ ತರುವ ಗುರಿಯನ್ನು ಸರ್ಕಾರ ಹೊಂದಿದೆ. ಏಪ್ರಿಲ್ 17ರಂದು ಈ ವಿಧೇಯಕಗಳ ಭವಿಷ್ಯದ ಬಗ್ಗೆ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ.

ಇದನ್ನೂ ಓದಿ: ಮೋಸ್ಟ್ ವಾಂಟೆಡ್ ಉಗ್ರ ಅಮೀರ್ ಹಮ್ಜಾ ಮೇಲೆ ಭೀಕರ ಗುಂಡಿನ ದಾಳಿ

Leave a Reply

Your email address will not be published. Required fields are marked *