ನಾಶಿಕ್: ಮಹಾರಾಷ್ಟ್ರದ ನಾಶಿಕ್‌ನಲ್ಲಿರುವ ಪ್ರತಿಷ್ಠಿತ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS Conversion) ಬಿಪಿಒ ಘಟಕದಲ್ಲಿ ಬೆಚ್ಚಿಬೀಳಿಸುವ ಹಗರಣವೊಂದು ಬಯಲಾಗಿದ್ದು, ಮಹಿಳಾ ಉದ್ಯೋಗಿಗಳ ಮೇಲೆ ದೈಹಿಕ, ಮಾನಸಿಕ ಮತ್ತು ಧಾರ್ಮಿಕ ದೌರ್ಜನ್ಯ ನಡೆಸಿರುವ ಗಂಭೀರ ಆರೋಪಗಳು ಕೇಳಿಬಂದಿವೆ. 18 ರಿಂದ 25 ವರ್ಷದ ಯುವತಿಯರನ್ನು ಗುರಿಯಾಗಿಸಿಕೊಂಡು ಕಳೆದ ಮೂರು ವರ್ಷಗಳಿಂದ ಈ ದೃಷ್ಕೃತ್ಯ ನಡೆಯುತ್ತಿದ್ದು, ಮತಾಂತರದ ಸಂಚು ಕೂಡ ಇದರ ಹಿಂದೆ ಅಡಗಿದೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
9 ಎಫ್‌ಐಆರ್ ದಾಖಲು, ಏಳು ಮಂದಿ ಅರೆಸ್ಟ್: ಈ ಇಡೀ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಟ್ಟು 9 ಎಫ್‌ಐಆರ್‌ಗಳನ್ನು ದಾಖಲಿಸಿಕೊಂಡಿದ್ದಾರೆ. ಆಸಿಫ್ ಅನ್ಸಾರಿ, ದಾನಿಶ್, ಶಫಿ ಶೇಖ್, ಶಾರುಖ್ ಖುರೇಷಿ, ರಜಾ ಮೆಮನ್ ಮತ್ತು ತೌಸಿಫ್ ಅತ್ತಾರ್ ಎಂಬ ಆರು ಆರೋಪಿಗಳನ್ನು ಬಂಧಿಸಲಾಗಿದೆ. ಅತ್ಯಂತ ಆಘಾತಕಾರಿ ಎಂದರೆ, ಮಹಿಳೆಯರ ಸುರಕ್ಷತೆಗಾಗಿ ಇರುವ ‘ಪೋಶ್’ (POSH) ಸಮಿತಿಯ ಮ್ಯಾನೇಜರ್ ಅಶ್ವಿನ್ ಚೈನಾನಿ ಅವರನ್ನೂ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಎಚ್‌ಆರ್ ಮ್ಯಾನೇಜರ್ ನಿದಾ ಖಾನ್ ಸದ್ಯ ತಲೆಮರೆಸಿಕೊಂಡಿದ್ದು, ತನಿಖೆಗಾಗಿ ವಿಶೇಷ ತನಿಖಾ ತಂಡ (SIT) ರಚಿಸಲಾಗಿದೆ.
ದೌರ್ಜನ್ಯದ ಕರಾಳ ಮುಖಗಳು: ದೂರಿನ ಅನ್ವಯ, ಆರೋಪಿಗಳಾದ ದಾನಿಶ್ ಶೇಖ್ ಮತ್ತು ತೌಸಿಫ್ ಅತ್ತಾರ್ ಹಿಂದೂ ದೇವತೆಗಳ ಬಗ್ಗೆ ಅಸಭ್ಯವಾಗಿ ಮಾತನಾಡುತ್ತಿದ್ದರು. ತೌಸಿಫ್ ಅತ್ತಾರ್ ಎಂಬಾತ ಸಂತ್ರಸ್ತೆಯೊಬ್ಬಳಿಗೆ ಮದುವೆಯ ಆಮಿಷವೊಡ್ಡಿ ಅತ್ಯಾಚಾರ ಎಸಗಿದ್ದಾನೆ. ಕಚೇರಿಯ ಲಾಬಿ ಮತ್ತು ಸಭೆಗಳ ನಡುವೆಯೇ ಮಹಿಳೆಯರನ್ನು ಅಸಭ್ಯವಾಗಿ ಮುಟ್ಟುವುದು, ಅವರ ದೈಹಿಕ ಅಂಗಾಂಗಗಳ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುವುದು ಮತ್ತು ಮಕ್ಕಳಿಲ್ಲದ ಮಹಿಳೆಯರನ್ನು ಹೀಯಾಳಿಸಿ ಮಾನಸಿಕ ಹಿಂಸೆ ನೀಡಿರುವುದು ತನಿಖೆಯಲ್ಲಿ ಬಯಲಾಗಿದೆ.
ಬಲವಂತದ ನಮಾಜ್ ಮತ್ತು ಮತಾಂತರ ಯತ್ನ: ಪ್ರಕರಣದ ಮತ್ತೊಂದು ಗಂಭೀರ ಅಂಶವೆಂದರೆ ಧಾರ್ಮಿಕ ಕಿರುಕುಳ. ಆರೋಪಿಗಳು ಮಹಿಳಾ ಉದ್ಯೋಗಿಗಳಿಗೆ ಕಚೇರಿಯಲ್ಲೇ ಬಲವಂತವಾಗಿ ನಮಾಜ್ ಮಾಡಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಮತಾಂತರ ಮಾಡುವ ದುರುದ್ದೇಶದಿಂದ ಸಸ್ಯಾಹಾರಿ ಯುವತಿಯರಿಗೂ ಬಲವಂತವಾಗಿ ಮಾಂಸಾಹಾರ ತಿನ್ನಿಸಲಾಗುತ್ತಿತ್ತು. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರೂ ಅವರು ಯಾವುದೇ ಕ್ರಮ ಕೈಗೊಳ್ಳದೆ ಆರೋಪಿಗಳಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.
ಸದ್ಯ ಸಿಸಿಟಿವಿ ದೃಶ್ಯಾವಳಿ ಮತ್ತು ಡಿಜಿಟಲ್ ಪುರಾವೆಗಳ ಆಧಾರದ ಮೇಲೆ ಎಸ್‌ಐಟಿ ತನಿಖೆ ಮುಂದುವರಿಸಿದೆ. ಈ ಘಟನೆಯು ಕಾರ್ಪೊರೇಟ್ ವಲಯದಲ್ಲಿ ಮಹಿಳಾ ಸುರಕ್ಷತೆಯ ಬಗ್ಗೆ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ.
