ಮನೆಯಲ್ಲೇ ಮಾಡಿ ರೆಸ್ಟೋರೆಂಟ್ ಶೈಲಿಯ ‘ಚಿಕನ್ ಕ್ರಿಸ್ಪಿ’ (Chicken Crispy) ಮಾಡೋದು ಬಹಳ ಸುಲಭ. ಇದನ್ನ ಮಾಡೋಕೆ ಜಾಸ್ತಿ ಐಟಮ್‌ಗಳು ಸಹ ಬೇಕಿಲ್ಲ. ಹಾಗಾದ್ರೆ ಮಾಡೋದು ಹೇಗೆ? ಇಲ್ಲಿದೆ ನೋಡಿ
‘ಚಿಕನ್ ಕ್ರಿಸ್ಪಿ’ ಮಾಡಲು ಬೇಕಾಗುವ ಸಾಮಾಗ್ರಿಗಳು
300 ಗ್ರಾಂ ಮೂಳೆ ಇಲ್ಲದ ಚಿಕನ್ (ಉದ್ದನೆಯ ಪಟ್ಟಿಗಳಂತೆ ಕತ್ತರಿಸಿರಲಿ)
3 ದೊಡ್ಡ ಚಮಚ ಕಾರ್ನ್‌ಫ್ಲೋರ್ (ಮೆಕ್ಕೆಜೋಳದ ಹಿಟ್ಟು)
2 ದೊಡ್ಡ ಚಮಚ ಮೈದಾ ಹಿಟ್ಟು
1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್
1 ಚಮಚ ಅಚ್ಚಖಾರದ ಪುಡಿ
ಅರ್ಧ ಚಮಚ ಕಾಳುಮೆಣಸಿನ ಪುಡಿ
ರುಚಿಗೆ ತಕ್ಕಷ್ಟು ಉಪ್ಪು
1 ಚಮಚ ಸೋಯಾ ಸಾಸ್
ಕರಿಯಲು ಎಣ್ಣೆ
ಒಗ್ಗರಣೆ ಮಾಡಲು:
1 ಚಮಚ ಎಣ್ಣೆ
1 ಚಮಚ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ
1 ಚಮಚ ಚಿಲ್ಲಿ ಫ್ಲೇಕ್ಸ್ (ಒಣಮೆಣಸಿನಕಾಯಿ ಚೂರುಗಳು)
ಸ್ವಲ್ಪ ಈರುಳ್ಳಿ ಹೂವು (ಸ್ಪ್ರಿಂಗ್ ಆನಿಯನ್ – ಬೇಕಿದ್ದರೆ ಮಾತ್ರ)
‘ಚಿಕನ್ ಕ್ರಿಸ್ಪಿ’ ಮಾಡುವ ಸುಲಭ ವಿಧಾನ
ಮೊದಲು ಒಂದು ಪಾತ್ರೆಯಲ್ಲಿ ಚಿಕನ್ ಪೀಸ್‌ಗಳನ್ನ ತೆಗೆದುಕೊಂಡು ಅದಕ್ಕೆ ಕಾರ್ನ್‌ಫ್ಲೋರ್, ಮೈದಾ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ, ಕಾಳುಮೆಣಸಿನ ಪುಡಿ, ಉಪ್ಪು ಮತ್ತು ಸೋಯಾ ಸಾಸ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮಸಾಲೆ ಚಿಕನ್‌ಗೆ ಸರಿಯಾಗಿ ಅಂಟಿಕೊಳ್ಳಲು ಸ್ವಲ್ಪ ನೀರು ಚಿಮುಕಿಸಿ ಮಿಶ್ರಣ ಮಾಡಿ. ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಮಸಾಲೆ ಹಚ್ಚಿದ ಚಿಕನ್ ಪೀಸ್‌ಗಳನ್ನ ಮಧ್ಯಮ ಉರಿಯಲ್ಲಿ ಹೊಂಬಣ್ಣ ಬರುವವರೆಗೆ ಗರಿಗರಿಯಾಗಿ ಕರಿದು ಪಕ್ಕಕ್ಕೆ ಎತ್ತಿಟ್ಟುಕೊಳ್ಳಿ.
ಇನ್ನೊಂದು ಪ್ಯಾನ್‌ನಲ್ಲಿ ಒಂದು ಚಮಚ ಎಣ್ಣೆ ಬಿಸಿ ಮಾಡಿ, ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ನಂತರ ಅದಕ್ಕೆ ಚಿಲ್ಲಿ ಫ್ಲೇಕ್ಸ್ ಸೇರಿಸಿ. ಈಗ ಕರಿದು ಇಟ್ಟುಕೊಂಡ ಚಿಕನ್ ತುಂಡುಗಳನ್ನು ಹಾಕಿ ಒಂದು ನಿಮಿಷದ ಕಾಲ ಹೆಚ್ಚಿನ ಉರಿಯಲ್ಲಿ ಚೆನ್ನಾಗಿ ಮಿಶ್ರಣ ಮಾಡಿ. ಕೊನೆಯಲ್ಲಿ ಸಣ್ಣಗೆ ಹೆಚ್ಚಿದ ಈರುಳ್ಳಿ ಹೂವಿನಿಂದ ಅಲಂಕರಿಸಿದರೆ ಬಿಸಿಬಿಸಿಯಾದ ಮತ್ತು ಗರಿಗರಿಯಾದ ಚಿಕನ್ ಕ್ರಿಸ್ಪಿ ಸವಿಯಲು ಸಿದ್ಧ.
