ರಾಮನಗರ : ರಾಜ್ಯಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಿಡದಿ ಸಮೀಪದ ರೆಸಾರ್ಟ್ನಲ್ಲಿ ತಂಗಿರುವ ಒಡಿಶಾ (Odisha) ಕಾಂಗ್ರೆಸ್ ಶಾಸಕರಿಗೆ ಆಮಿಷ ಒಡ್ಡಲು ಯತ್ನಿಸಿದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾಜ್ಯದಲ್ಲಿ 8 ಶಾಸಕರ ವಾಸ್ತವ್ಯ
ನಾಳೆ ನಡೆಯಲಿರುವ ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷಾಂತರ ಅಥವಾ ಅಡ್ಡ ಮತದಾನದ ಭೀತಿಯಿಂದ ಒಡಿಶಾದ 8 ಕಾಂಗ್ರೆಸ್ ಶಾಸಕರು ಈ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಈ ವೇಳೆ ಶಾಸಕರನ್ನು ಸಂಪರ್ಕಿಸಿ ಮತದಾನದ ಮೇಲೆ ಪ್ರಭಾವ ಬೀರಲು ಒಡಿಶಾದಿಂದ ಬಂದಿದ್ದರೆನ್ನಲಾದ ನಾಲ್ವರು ವ್ಯಕ್ತಿಗಳ ತಂಡವೊಂದು, ಕೋಟ್ಯಂತರ ರೂಪಾಯಿ ಹಣದ ಆಮಿಷ ಒಡ್ಡಿದ್ದಲ್ಲದೆ ಖಾಲಿ ಚೆಕ್ ನೀಡಲು ಮುಂದಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕರು ದೂರಿದ್ದಾರೆ. ಈ ಕುರಿತು ಒಡಿಶಾ ಕಾಂಗ್ರೆಸ್ ಶಾಸಕಾಂಗ ಪಕ್ಷದ ಉಪನಾಯಕ ಅಶೋಕ್ ಕುಮಾರ್ ದಾಸ್ ಬಿಡದಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಶಾಸಕರು ಆಮಿಷವನ್ನು ತಿರಸ್ಕರಿಸಿದಾಗ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಆರ್. ಶ್ರೀನಿವಾಸ ಗೌಡ ಅವರು, “ಶಾಸಕರಿಂದ ಬಂದಿರುವ ದೂರಿನ ಪ್ರಾಥಮಿಕ ಪರಿಶೀಲನೆ ನಡೆಯುತ್ತಿದ್ದು, ಈಗಾಗಲೇ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ” ಎಂದು ಖಚಿತಪಡಿಸಿದ್ದಾರೆ. ಶೀಘ್ರದಲ್ಲೇ ಈ ದೂರನ್ನು ಎಫ್ಐಆರ್ (FIR) ಆಗಿ ಪರಿವರ್ತಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಆಕ್ಸಿಡೆಂಟ್ ಮಾಡಿಸಿ ಹೆಂಡತಿ ಸಾಯಿಸಿದ ಭೂಪ, ಪೊಲೀಸರಿಗೆ ಆರೋಪಿ ಸಿಕ್ಕಿದ್ದು ಹೇಗೆ?
