ಟಮಾಟರ್ ಚಾಟ್, (Tamatar Chat) ಇದು ಬನಾರಸ್‌ನ ಗಲ್ಲಿಗಳಲ್ಲಿ ಸಖತ್ ಫೇಮಸ್ ಇರುವ ಚಾಟ್. ಇದನ್ನ ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕು ಅನಿಸುತ್ತದೆ. ಸಾಮಾನ್ಯವಾಗಿ ಇದು ದಕ್ಷಿಣ ಭಾರತದಲ್ಲಿ ಇದು ಸುಲಭವಾಗಿ ಸಿಗುವುದಿಲ್ಲ. ಬಹಳ ಅಪರೂಪಕ್ಕೆ ಇದು ಚಾಟ್ ಸೆಂಟರ್‌ಗಳಲ್ಲಿ ಸಿಗುತ್ತದೆ. ಆದರೆ ಇದನ್ನ ಬಹಳ ಸುಲಭವಾಗಿ ಮನೆಯಲ್ಲಿ ಮಾಡಬಹುದು. ನೀವೂ ಸಹ ಕಾಶಿ ಸ್ಟೈಲ್‌ನಲ್ಲಿ ಟಮಾಟರ್ ಚಾಟ್ ತಿನ್ನಬೇಕು ಅಂದ್ರೆ ಇಲ್ಲಿದೆ ರೆಸಿಪಿ.
ಟಮಾಟರ್ ಚಾಟ್ ಮಾಡಲು ಬೇಕಾಗುವ ಸಾಮಾಗ್ರಿಗಳು
4 ಟೊಮ್ಯಾಟೋ (ಸಣ್ಣ ಹೋಳುಗಳಾಗಿ ಕತ್ತರಿಸಿಕೊಳ್ಳಿ)
2 ಚಮಚ ತುಪ್ಪ
1/4 ಕಪ್ ಈರುಳ್ಳಿ, ಕತ್ತರಿಸಿಕೊಂಡಿರಿ
1/2 ಟೀಸ್ಪೂನ್ ಹಸಿ ಮೆಣಸಿನಕಾಯಿ, ಸಣ್ಣಗೆ ಹೆಚ್ಚಿಕೊಳ್ಳಿ
1/2 ಕಪ್ ನೀರು
ಶುಂಠಿ ಒಂದು ಚೂರು
1/4 ಕಪ್ ಆಲೂಗಡ್ಡೆ (ಬೇಯಿಸಿಕೊಂಡಿರಿ)
1 ಚಮಚ ಹೆಚ್ಚಿದ ಹಸಿರು ಕೊತ್ತಂಬರಿ ಸೊಪ್ಪು
1 ಟೀಸ್ಪೂನ್ ನಿಂಬೆ ರಸ
1 ಟೀಸ್ಪೂನ್ ಕಾಶ್ಮೀರಿ ಮಿರ್ಚಿ
1/2 ಟೀಸ್ಪೂನ್ ಉಪ್ಪು
1/2 ಟೀಸ್ಪೂನ್ ಕಪ್ಪು ಉಪ್ಪು
1 ಟೀಸ್ಪೂನ್ ಜೀರಿಗೆ ಪುಡಿ
1 ಚಮಚ ಒಣದ್ರಾಕ್ಷಿ
ಸಕ್ಕರೆ ಪಾಕ
1 ಕಪ್ ನೀರು
3 ಕಪ್ ಸಕ್ಕರೆ
1 ಟೀಸ್ಪೂನ್ ಹುರಿದ ಜೀರಿಗೆ ಪುಡಿ
1/2 ಟೀಸ್ಪೂನ್ ಚಾಟ್ ಮಸಾಲಾ
ಟಮಾಟರ್ ಚಾಟ್ ಮಾಡುವ ಸುಲಭ ವಿಧಾನ ಹೀಗಿದೆ
ಮೊದಲು ಒಂದು ಪ್ಯಾನ್ ನಲ್ಲಿ ತುಪ್ಪವನ್ನು ಬಿಸಿ ಮಾಡಿ. ಅದಕ್ಕೆ ಶುಂಠಿ ಮತ್ತು ಹಸಿ ಮೆಣಸಿನಕಾಯಿಗಳನ್ನು ಸೇರಿಸಿ ಮಧ್ಯಮ ಉರಿಯಲ್ಲಿ 30 ಸೆಕೆಂಡುಗಳ ಕಾಲ ಫ್ರೈ ಮಾಡಿ. ಈಗ ಅದಕ್ಕೆ ಈರುಳ್ಳಿ ಸೇರಿಸಿ ತಿಳಿ ಕಂದು ಬಣ್ಣ ಬರುವವರೆಗೆ ಮತ್ತೆ ಫ್ರೈ ಮಾಡಿ. ನಂತರ ಅದಕ್ಕೆ ಹೆಚ್ಚಿಕೊಂಡ ಟೊಮ್ಯಾಟೊ, ಉಪ್ಪು ಮತ್ತು ಕಾಶ್ಮೀರಿ ಚಿಲ್ಲಿ ಪೌಡರ್ ಹಾಕಿ ಸುಮಾರು 2 ನಿಮಿಷ ಬೇಯಿಸಿ. ನಂತರ ಅದಕ್ಕೆ ನೀರು ಸೇರಿಸಿ ಟೊಮೆಟೊ ಚೆನ್ನಾಗಿ ಮ್ಯಾಶ್ ಆಗುವವರೆಗೆ ಸುಮಾರು 10 ನಿಮಿಷಗಳ ಕಾಲ ಕುದಿಸಿ.

ಸಕ್ಕರೆ ಪಾಕ ಮಾಡುವ ವಿಧಾನ
ಒಂದು ಕಪ್ ನೀರು ತೆಗೆದುಕೊಂಡು ಚೆನ್ನಾಗಿ ಕುದಿಸಿ, ಅದಕ್ಕೆ ಸಕ್ಕರೆ ಸೇರಿಸಿ ಕರಗುವ ತನಕ ಕಾಯಿಸಿ. 1 ಟೀಸ್ಪೂನ್ ಜೀರಿಗೆ ಪುಡಿ, ಚಾಟ್ ಮಸಾಲಾ ಹಾಕಿ. ಈಗ ತಯಾರಾದ ಟೊಮೆಟೊ ಮಿಶ್ರಣವನ್ನು 4 ಚಮಚ ತಟ್ಟೆಯಲ್ಲಿ ತೆಗೆದುಕೊಳ್ಳಿ. ಅದಕ್ಕೆ ತಯಾರಾದ ಸಕ್ಕರೆ ಪಾಕದಲ್ಲಿ ಒಂದು ಚಮಚ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮೇಲೆ ಒಂದು ಚಮಚ ಹಸಿರು ಚಟ್ನಿ ಹಾಕಿ. ಕೊತ್ತಂಬರಿ ಸೊಪ್ಪು ಹಾಕಿ ಅಲಂಕಾರ ಮಾಡಿದರೆ ಟಮಾಟರ್ ಚಾಟ್ ಸವಿಯಲು ಸಿದ್ದ.
ಇದನ್ನೂ ಓದಿ: ಕೀಲು ನೋವಿನ ಸಮಸ್ಯೆಗೆ ಪರಿಹಾರ ಈ ಸೌತೆಕಾಯಿ, ಮಧುಮೇಹಕ್ಕೂ ಮುಕ್ತಿ ಕೊಡುತ್ತೆ
