TOP NEWS

Jwala Gutta: ಎದೆಹಾಲು ದಾನದ ಮೂಲಕ ಹೊಸ ಕ್ರಾಂತಿ; ನವಜಾತ ಶಿಶುಗಳ ಪಾಲಿಗೆ ಸಂಜೀವಿನಿಯಾದ ಜ್ವಾಲಾ ಗುಟ್ಟಾ!

60 litres and counting Jwala Gutta’s postpartum journey by milk donation

ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ (Jwala Gutta) ಅವರು ಮಾಡಿರುವ ಮಾನವೀಯ ಕಾರ್ಯವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ತಮ್ಮ ಹೆಣ್ಣು ಮಗುವಿನ ಜನನದ ನಂತರದ ಮೊದಲ ಒಂದು ವರ್ಷದಲ್ಲಿ ಜ್ವಾಲಾ ಅವರು ಸುಮಾರು 60 ಲೀಟರ್‌ಗಳಷ್ಟು ಎದೆಹಾಲನ್ನು ಹೈದರಾಬಾದ್ ಮತ್ತು ಚೆನ್ನೈನ ಸರ್ಕಾರಿ ಆಸ್ಪತ್ರೆಗಳಿಗೆ ದಾನ ಮಾಡುವ ಮೂಲಕ ನೂರಾರು ನವಜಾತ ಶಿಶುಗಳ ಜೀವ ಉಳಿಸಲು ನೆರವಾಗಿದ್ದಾರೆ. ಈ ಕುರಿತು ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಮನಸ್ಪರ್ಶಿಯಾದ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿರುವ (NICU) ಪುಟ್ಟ ಕಂದಮ್ಮಗಳ ಪಾಲಿಗೆ ಎದೆಹಾಲು ಎಷ್ಟು ಮುಖ್ಯ ಎಂಬುದನ್ನು ವಿವರಿಸಿದ್ದಾರೆ.

100 ಮಿಲಿ ಹಾಲು ಜೀವ ಉಳಿಸುವ ಶಕ್ತಿ ಹೊಂದಿದೆ

ಸಾಮಾನ್ಯವಾಗಿ ಅವಧಿಗೂ ಮುನ್ನ ಜನಿಸಿದ ಅಥವಾ ಅನಾರೋಗ್ಯದಿಂದ ಬಳಲುತ್ತಿರುವ ಶಿಶುಗಳಿಗೆ ತಾಯಿಯ ಎದೆಹಾಲು ತಕ್ಷಣಕ್ಕೆ ಸಿಗದಿದ್ದಾಗ ಅಂತಹ ಕಂದಮ್ಮಗಳಿಗೆ ಈ ದಾನ ಮಾಡಿದ ಹಾಲು ವರದಾನವಾಗಲಿದೆ. ಕೇವಲ 100 ಮಿಲಿ ಲೀಟರ್ ಎದೆಹಾಲು ಒಂದು ಕೆಜಿ ತೂಕದ ಪುಟ್ಟ ಮಗುವಿಗೆ ಹಲವು ದಿನಗಳವರೆಗೆ ಆಹಾರವಾಗಬಲ್ಲದು ಎಂದು ಜ್ವಾಲಾ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ಎದೆಹಾಲು ದಾನ ಮಾಡುವುದು ಸಂಪೂರ್ಣ ಸುರಕ್ಷಿತವಾಗಿದ್ದು, ಹಾಲಿನ ಬ್ಯಾಂಕ್‌ಗಳಲ್ಲಿ ಇದರ ಅಗತ್ಯತೆ ತುಂಬಾ ಇದೆ ಎಂದು ಅವರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ.

ಬಾಣಂತಿಯರಲ್ಲಿ ಒತ್ತಡ, ಅನಾರೋಗ್ಯ ಅಥವಾ ಪೌಷ್ಟಿಕಾಂಶದ ಕೊರತೆಯಿಂದಾಗಿ ಹಾಲಿನ ಉತ್ಪಾದನೆ ತಡವಾಗಬಹುದು. ಅಂತಹ ಸಂದರ್ಭದಲ್ಲಿ ದಾನಿಗಳಿಂದ ಬರುವ ಎದೆಹಾಲು ಶಿಶುಗಳಿಗೆ ರೋಗನಿರೋಧಕ ಶಕ್ತಿಯನ್ನು ನೀಡುವುದಲ್ಲದೆ, ಪ್ರಾಣಾಪಾಯ ತಂದೊಡ್ಡುವ ಕರುಳಿನ ಸಂಬಂಧಿ ಕಾಯಿಲೆಗಳಿಂದ ಮಕ್ಕಳನ್ನು ರಕ್ಷಿಸುತ್ತದೆ. ಕಳೆದ ವರ್ಷ ನಟ ವಿಷ್ಣು ವಿಶಾಲ್ ಮತ್ತು ಜ್ವಾಲಾ ಗುಟ್ಟಾ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ತಮ್ಮ ತಾಯ್ತನದ ಈ ಅವಧಿಯನ್ನು ಕೇವಲ ತಮ್ಮ ಮಗುವಿಗೆ ಸೀಮಿತಗೊಳಿಸದೆ, ಇತರ ಅಸಹಾಯಕ ಶಿಶುಗಳಿಗೂ ಆಸರೆಯಾಗಿರುವ ಜ್ವಾಲಾ ಅವರ ನಡೆಗೆ ಈಗ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಅರ್ಹ ತಾಯಂದಿರು ಕೂಡ ಇಂತಹ ಉದಾತ್ತ ಕಾರ್ಯದಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ತಮ್ಮಂತೆಯೇ ಇರುವ ಪೊಲೀಸ್ ಅಧಿಕಾರಿಯನ್ನು ಭೇಟಿಯಾದ ಸಿಎಸ್‌ಕೆ ಸ್ಟಾರ್ ಅನ್ಶುಲ್ ಕಾಂಬೋಜ್

Leave a Reply

Your email address will not be published. Required fields are marked *