Yathindra: ಸಿಎಂ ಬದಲಾವಣೆ ಆಗಲ್ಲ ಎಂದ ಯತೀಂದ್ರ ಸಿದ್ದರಾಮಯ್ಯ

Yathindra Siddaramaiah on cm change

ಮೈಸೂರು: ರಾಜ್ಯ ರಾಜಕಾರಣದಲ್ಲಿ ಕೇಳಿಬರುತ್ತಿರುವ ಮುಖ್ಯಮಂತ್ರಿ ಬದಲಾವಣೆ ವದಂತಿಗಳಿಗೆ ವಿಧಾನಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ (Yathindra) ತೆರೆ ಎಳೆದಿದ್ದಾರೆ. ಮೈಸೂರಿನಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರೇ ಮುಂದಿನ ಐದು ವರ್ಷಗಳ ಕಾಲ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ದೃಢವಾಗಿ ಹೇಳಿದ್ದಾರೆ.

ಚರ್ಚೆಗಳ ಅಗತ್ಯವೇ ಇಲ್ಲ

ಈ ಬಗ್ಗೆ ವಿಧಾನಮಂಡಲ ಅಧಿವೇಶನದಲ್ಲೇ ಸ್ವತಃ ಮುಖ್ಯಮಂತ್ರಿಯವರು ಸ್ಪಷ್ಟನೆ ನೀಡಿದ್ದಾರೆ. ಹೀಗಿರುವಾಗ ನಾಯಕತ್ವ ಬದಲಾವಣೆ ಕುರಿತು ಅನಗತ್ಯ ಚರ್ಚೆಗಳ ಅಗತ್ಯವೇ ಇಲ್ಲ. ಕೆಲ ಶಾಸಕರು ಸಂಪುಟ ಪುನರ್‌ರಚನೆ ವಿಚಾರವಾಗಿ ದೆಹಲಿಗೆ ಹೋಗಿರುವುದು ನಿಜ, ಆದರೆ ಅದಕ್ಕೂ ಸಿಎಂ ಸ್ಥಾನಕ್ಕೂ ಯಾವುದೇ ಸಂಬಂಧವಿಲ್ಲ. ಉಪಚುನಾವಣೆ ಫಲಿತಾಂಶ ಏನೇ ಇದ್ದರೂ ನಮ್ಮ ಸರ್ಕಾರ ಮತ್ತು ಮುಖ್ಯಮಂತ್ರಿ ಸ್ಥಾನ ಎರಡೂ ಅತ್ಯಂತ ಭದ್ರವಾಗಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಸಚಿವ ಸ್ಥಾನದ ಕುರಿತು ಮಾತನಾಡಿದ ಯತೀಂದ್ರ, ತಾವು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದರು. “ನನ್ನ ತಂದೆ ಮುಖ್ಯಮಂತ್ರಿಯಾಗಿರುವವರೆಗೂ ನಾನು ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಡುವುದಿಲ್ಲ. ಸಂಪುಟ ಪುನರ್‌ರಚನೆ ಬಗ್ಗೆ ಹೈಕಮಾಂಡ್ ಸೂಕ್ತ ಸಮಯದಲ್ಲಿ ತೀರ್ಮಾನ ತೆಗೆದುಕೊಳ್ಳಲಿದೆ” ಎಂದು ತಿಳಿಸಿದರು.

ಇನ್ನು ಪ್ರತಿಪಕ್ಷಗಳ ‘ವಸೂಲಿ’ ಆರೋಪಗಳಿಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, “ನನ್ನನ್ನು ವಸೂಲಿ ಮಾಡಲು ತಂದೆಯವರು ನೇಮಿಸಿಕೊಂಡಿಲ್ಲ. ನಾನು ಅಂತಹ ಯಾವುದೇ ಕೆಲಸದಲ್ಲಿ ತೊಡಗಿಲ್ಲ. ಒಬ್ಬ ಜವಾಬ್ದಾರಿಯುತ ಮಗನಾಗಿ ವರುಣಾ ಕ್ಷೇತ್ರದ ಅಭಿವೃದ್ಧಿ ಹಾಗೂ ತಂದೆಯವರ ಪರವಾಗಿ ಕೆಲಸ ಮಾಡುತ್ತಿದ್ದೇನೆ ಅಷ್ಟೆ” ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ: ಮೋದಿ ಜೊತೆ ಸಿದ್ದರಾಮಯ್ಯ ಸೀಕ್ರೇಟ್‌ ಟಾಕ್‌, ಫೋಟೋ ವೈರಲ್

Leave a Reply

Your email address will not be published. Required fields are marked *