TOP NEWS

VS Ugrappa: ಚಿತ್ರದುರ್ಗದಲ್ಲಿ ವಿ.ಎಸ್. ಉಗ್ರಪ್ಪ ರೋಷಾವೇಷ: ನಟ ಕಿಚ್ಚ ಸುದೀಪ್ ವಿರುದ್ಧ ಗುಡುಗಿ ಮೀಸಲಾತಿ ಹೋರಾಟಕ್ಕೆ ಕರೆ!

VS Ugrappa Demands Restoring ST Quota to 56 Urges Actor Sudeep to Lead Street Protests

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ವಿಜೃಂಭಣೆಯಿಂದ ನಡೆದ ಮದಕರಿನಾಯಕರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಸಚಿವ ವಿ.ಎಸ್. ಉಗ್ರಪ್ಪ (VS Ugrappa) ಅವರು ಅತ್ಯಂತ ರೋಷಾವೇಷದ ಭಾಷಣ ಮಾಡಿದ್ದು, ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಅವರ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದಾರೆ. ನಾಯಕ ಸಮುದಾಯಕ್ಕೆ ಸೇರಿರುವ ಸುದೀಪ್ ಅವರು ಕೇವಲ ಅಭಿಮಾನಿಗಳಿಂದ ಕೇಕೆ ಮತ್ತು ಶಿಳ್ಳೆ ಗಿಟ್ಟಿಸಿಕೊಳ್ಳುವುದಕ್ಕೆ ಸೀಮಿತವಾಗದೆ, ಸಮುದಾಯದ ಏಳಿಗೆ ಹಾಗೂ ಮೀಸಲಾತಿ ಹೋರಾಟಕ್ಕಾಗಿ ಬೀದಿಗೆ ಇಳಿಯಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.

ನಟ ಕಿಚ್ಚ ಸುದೀಪ್‌ಗೆ ನೇರ ಸವಾಲು ಮತ್ತು ಆಕ್ರೋಶ

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನರು ‘ಕಿಚ್ಚ ಕಿಚ್ಚ’ ಎಂದು ಕೂಗುತ್ತಿದ್ದಾಗ ಅಸಮಾಧಾನ ವ್ಯಕ್ತಪಡಿಸಿದ ಉಗ್ರಪ್ಪ, ನೀವು ನಿಜಕ್ಕೂ ನಾಯಕ ಜನಾಂಗದ ಮನೆಯ ಮಗನಾಗಿದ್ದರೆ ನಮ್ಮ ಸಮುದಾಯದ ಹಕ್ಕುಗಳ ಪರವಾಗಿ ಧ್ವನಿ ಎತ್ತಿ ಎಂದು ನಟ ಸುದೀಪ್‌ಗೆ ಕರೆ ನೀಡಿದರು. “ನಿಮಗೆ ದಮ್ಮು, ತಾಕತ್ತು ಇದ್ದರೆ ಸಮುದಾಯದ ಮೀಸಲಾತಿ ಹೋರಾಟಕ್ಕೆ ಬನ್ನಿ. ಎಸ್‌ಟಿ ಸಮುದಾಯದ 56% ಮೀಸಲಾತಿ ಹೆಚ್ಚಳದ ಹೋರಾಟದ ಮುಂಚೂಣಿ ನಾಯಕರಾಗಿ ನಿಂತು ಜನಾಂಗಕ್ಕೆ ಶಕ್ತಿ ತುಂಬಿ” ಎಂದು ಸವಾಲು ಹಾಕಿದರು. ಅಭಿಮಾನಿಗಳ ಮುಂದೆ ನಟ ಸುದೀಪ್ ವಿರುದ್ಧ ಆಕ್ರೋಶ ಹೊರಹಾಕಿದ ಅವರು, ಚಿತ್ರರಂಗದ ಜನಪ್ರಿಯತೆಯ ಜೊತೆಗೆ ಸಮಾಜದ ಬದ್ಧತೆಯನ್ನೂ ತೋರಬೇಕಿದೆ ಎಂದು ಪ್ರತಿಪಾದಿಸಿದರು.

ಮೀಸಲಾತಿ ಇಳಿಕೆಗೆ ಆಕ್ರೋಶ – ಸರ್ಕಾರದ ವಿರುದ್ಧ ವಾಗ್ದಾಳಿ

ವೇದಿಕೆಯ ಮೇಲೆ ವೀರ ಮದಕರಿ ನಾಯಕರ ಜನನ ವೃತ್ತಾಂತ ಮತ್ತು ಐತಿಹಾಸಿಕ ಹಿನ್ನೆಲೆಯನ್ನು ಸ್ಮರಿಸಿದ ಉಗ್ರಪ್ಪ, ಯಾವ ಸಮಾಜದಲ್ಲಿ ವೈಚಾರಿಕತೆ, ಸಾಮಾಜಿಕ ಜಾಗೃತಿ ಮತ್ತು ಗಟ್ಟಿ ಸಂಘಟನೆ ಇರುವುದಿಲ್ಲವೋ ಆ ಸಮಾಜ ಎಂದಿಗೂ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದರು. ಪ್ರಸ್ತುತ ಹೈಕೋರ್ಟ್ ಆದೇಶದಿಂದಾಗಿ ಎಸ್‌ಟಿ ಸಮುದಾಯದ ಮೀಸಲಾತಿ ಪ್ರಮಾಣ ಕಡಿಮೆಯಾಗಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಜಾಗೃತಗೊಳ್ಳಬೇಕು ಎಂದರು. ಸರ್ಕಾರಗಳಿಗೆ ನಿಜಕ್ಕೂ ಧಮ್ಮು ತಾಕತ್ತು ಇದ್ದರೆ, ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ತಕ್ಷಣವೇ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬೇಕು. ಪಟ್ಟಭದ್ರ ಹಿತಾಸಕ್ತಿಗಳಿಂದ ಸಮುದಾಯವನ್ನು ರಕ್ಷಿಸಲು ಮೀಸಲಾತಿಯನ್ನು ಮತ್ತೆ ಶೇ. 56 ಕ್ಕೆ ಏರಿಸಿ, ಅದನ್ನು ಸಂವಿಧಾನದ 9ನೇ ಶೆಡ್ಯೂಲ್‌ಗೆ ಸೇರಿಸುವ ಮೂಲಕ ಶಾಶ್ವತ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.

ಸರ್ಕಾರಕ್ಕೆ ಪ್ರಮುಖ ಬೇಡಿಕೆಗಳು ಮತ್ತು ಸಮಾಜಸೇವೆಯ ಸಂಕಲ್ಪ

ಮದಕರಿ ನಾಯಕರ ಸ್ಮರಣಾರ್ಥ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮುಂದೆ ಹಲವು ಪ್ರಮುಖ ಬೇಡಿಕೆಗಳನ್ನು ಇಟ್ಟ ಮಾಜಿ ಸಚಿವರು:

  • ಚಿತ್ರದುರ್ಗದ ಕೇಂದ್ರ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ಜಿಲ್ಲಾಧಿಕಾರಿ (ಡಿಸಿ) ಕಚೇರಿಗೆ ವೀರ ಮದಕರಿ ನಾಯಕರ ಹೆಸರನ್ನು ಅಧಿಕೃತವಾಗಿ ಮರುನಾಮಕರಣ ಮಾಡಬೇಕು.
  • ರಾಜ್ಯ ಸರ್ಕಾರವು ವೀರ ಮದಕರಿ ನಾಯಕರ ಹೆಸರಿನಲ್ಲಿ ಪ್ರತ್ಯೇಕ ಪ್ರಾಧಿಕಾರವನ್ನು ರಚನೆ ಮಾಡಬೇಕು.
  • ಕೋಟೆನಾಡಿನಲ್ಲಿ ಮದಕರಿ ನಾಯಕರ ಭವ್ಯ ಸ್ಮಾರಕವನ್ನು ನಿರ್ಮಿಸಿ ಅವರ ಸೌರ್ಯವನ್ನು ಮುಂದಿನ ಪೀಳಿಗೆಗೆ ಸಾರಬೇಕು.

ತಮ್ಮ ಭಾಷಣದ ಕೊನೆಯಲ್ಲಿ ಭಾವುಕರಾದ ವಿ.ಎಸ್. ಉಗ್ರಪ್ಪ, “ನನ್ನ ದೇಹದಲ್ಲಿ ಕೊನೆಯ ಉಸಿರು ಇರುವವರೆಗೂ ಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ ವರ್ಗಗಳ (OBC) ಹಕ್ಕುಗಳಿಗಾಗಿ ಮತ್ತು ಶೋಷಿತರ ಸೇವೆಗಾಗಿ ನಿರಂತರವಾಗಿ ಹೋರಾಡುತ್ತೇನೆ” ಎಂದು ಶಪಥ ಮಾಡಿದರು.

ಇದನ್ನೂ ಓದಿ: KPSC ನೇಮಕಾತಿ ಅಕ್ರಮ ತನಿಖೆ: ಹೊಸ ಎಸ್‌ಐಟಿ ಅಧಿಕಾರಿಗಳ ಪಟ್ಟಿ ಸಲ್ಲಿಸಲು ಸುಪ್ರೀಂ ಕೋರ್ಟ್ ಸೂಚನೆ!

Leave a Reply

Your email address will not be published. Required fields are marked *