TOP NEWS

West Bengal: ಆರ್.ಜಿ. ಕರ್ ಪ್ರಕರಣ, ಮೂವರು ಅಧಿಕಾರಿಗಳ ವಜಾ

RG Kar case west Bengal suvendu Adhikari government suspends 3 IPS officers for misleading case

ಪಶ್ಚಿಮ ಬಂಗಾಳ: ರಾಜ್ಯದ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಆರ್.ಜಿ. ಕರ್ ವೈದ್ಯಕೀಯ ಕಾಲೇಜು (West Bengal) ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಮಹತ್ವದ ಕ್ರಮ ಕೈಗೊಂಡಿದ್ದಾರೆ. ಪ್ರಕರಣವನ್ನು ಸರಿಯಾಗಿ ನಿಭಾಯಿಸಿಲ್ಲ ಎಂಬ ಆರೋಪದ ಮೇಲೆ ಅಂದಿನ ಕೋಲ್ಕತ್ತಾ ಪೊಲೀಸ್ ಕಮಿಷನರ್ ವಿನೀತ್ ಗೋಯಲ್ ಸೇರಿದಂತೆ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ವಿನೀತ್ ಗೋಯಲ್ ಅವರೊಂದಿಗೆ ಅಭಿಷೇಕ್ ಗುಪ್ತಾ ಮತ್ತು ಇಂದಿರಾ ಮುಖೋಪಾಧ್ಯಾಯ ಅವರನ್ನೂ ಅಮಾನತು ಮಾಡಲಾಗಿದ್ದು, ಇವರ ವಿರುದ್ಧ ಇಲಾಖಾ ತನಿಖೆಗೆ ಚಾಲನೆ ನೀಡಲಾಗಿದೆ.

ಸಂತ್ರಸ್ತೆ ಕುಟುಂಬಕ್ಕೆ ಲಂಚ ನೀಡುವ ಯತ್ನ

ನಬನ್ನಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಈ ಅಧಿಕಾರಿಗಳು ಸಂತ್ರಸ್ತೆಯ ಕುಟುಂಬಕ್ಕೆ ಲಂಚ ನೀಡಲು ಯತ್ನಿಸಿದ್ದರು ಮತ್ತು ಲಿಖಿತ ಅನುಮತಿ ಪಡೆಯದೆಯೇ ಪತ್ರಿಕಾಗೋಷ್ಠಿ ನಡೆಸಿ ನಿಯಮ ಉಲ್ಲಂಘಿಸಿದ್ದರು ಎಂದು ಗಂಭೀರವಾಗಿ ಆರೋಪಿಸಿದ್ದಾರೆ. 2024ರ ಆಗಸ್ಟ್‌ನಲ್ಲಿ ನಡೆದ ಈ ಘೋರ ಪ್ರಕರಣವು ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಆಸ್ಪತ್ರೆಯಲ್ಲೇ ಕರ್ತವ್ಯದಲ್ಲಿದ್ದ 31 ವರ್ಷದ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಇದು ವೈದ್ಯರು ಮತ್ತು ನಾಗರಿಕ ಸಮಾಜದಿಂದ ಭಾರಿ ಪ್ರತಿಭಟನೆಗೆ ಕಾರಣವಾಗಿತ್ತು. ಸಾಕ್ಷ್ಯ ನಾಶ ಮತ್ತು ಪೊಲೀಸರ ವಿಳಂಬ ಧೋರಣೆಯ ಬಗ್ಗೆ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ನ್ಯಾಯಾಲಯದ ಮಧ್ಯಪ್ರವೇಶದಿಂದ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು.

ಬಂಗಾಳ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿಯೂ ಈ ಪ್ರಕರಣ ಪ್ರಮುಖ ಚರ್ಚಾ ವಿಷಯವಾಗಿತ್ತು. ಸಂತ್ರಸ್ತೆಯ ತಾಯಿಗೆ ಪಾನಿಹಟಿ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನೀಡಿತ್ತು. ಅಲ್ಲಿ ಅವರು ಭರ್ಜರಿ ಜಯ ಸಾಧಿಸುವ ಮೂಲಕ ಜನರ ಬೆಂಬಲ ಗಿಟ್ಟಿಸಿದ್ದರು. ಸಂತ್ರಸ್ತೆಗೆ ನ್ಯಾಯ ಒದಗಿಸುವುದು ಚುನಾವಣಾ ಪೂರ್ವದಲ್ಲಿ ಬಿಜೆಪಿಯ ಪ್ರಮುಖ ಭರವಸೆಗಳಲ್ಲಿ ಒಂದಾಗಿತ್ತು. ಇದೀಗ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಅವರು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ತಮ್ಮ ಭರವಸೆಯತ್ತ ಮೊದಲ ಹೆಜ್ಜೆ ಇಟ್ಟಿದ್ದಾರೆ.

ಇದೇ ವೇಳೆ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ನಂದಿಗ್ರಾಮ ವಿಧಾನಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದಾರೆ. ಭವಾನಿಪುರ ಮತ್ತು ನಂದಿಗ್ರಾಮ ಎರಡೂ ಕ್ಷೇತ್ರಗಳಲ್ಲಿ ಗೆದ್ದಿದ್ದ ಅವರು, ನಿಯಮದಂತೆ ಭವಾನಿಪುರ ಕ್ಷೇತ್ರವನ್ನು ಉಳಿಸಿಕೊಂಡು ನಂದಿಗ್ರಾಮವನ್ನು ತೆರವುಗೊಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರೂ ನಂದಿಗ್ರಾಮದ ಜನರ ಹಿತರಕ್ಷಣೆಯನ್ನು ಮುಂದುವರಿಸುವುದಾಗಿ ಭರವಸೆ ನೀಡಿದ್ದಾರೆ. ನಂದಿಗ್ರಾಮದ ಜನರು ಎಂದಿಗೂ ತಾವು ಒಬ್ಬಂಟಿ ಎಂದು ಭಾವಿಸದಂತೆ ನೋಡಿಕೊಳ್ಳುವುದಾಗಿ ಮತ್ತು ಆ ಭಾಗದ ಪ್ರತಿಯೊಂದು ಬೆಳವಣಿಗೆಯ ಮೇಲೆ ಗಮನ ಹರಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಭಜನಾ ಗಾಯಕನ ಮೇಲೆ ನೋಟುಗಳ ಮಳೆ! ಬ್ಯಾಗ್ ಮತ್ತು ಚೀಲಗಳಲ್ಲಿ ಹಣ ತಂದು ಸುರಿದ ಭಕ್ತರು

Leave a Reply

Your email address will not be published. Required fields are marked *