TOP NEWS

RBI: ಬ್ಯಾಂಕ್ ವಶಪಡಿಸಿಕೊಂಡ ಆಸ್ತಿ ಮಾರಾಟಕ್ಕೆ 7 ವರ್ಷಗಳ ಗಡುವು

rbi important information new rules for Immovable Assets

ನವದೆಹಲಿ: ಬ್ಯಾಂಕಿಂಗ್ ವಲಯದಲ್ಲಿ ಪಾರದರ್ಶಕತೆ ತರಲು ಮುಂದಾಗಿರುವ ಆರ್‌ಬಿಐ, (RBI) ಸಾಲದ ಬದಲಿಗೆ ವಶಪಡಿಸಿಕೊಂಡ ಸ್ಥಿರಾಸ್ತಿಗಳನ್ನು (Immovable Assets) ವಿಲೇವಾರಿ ಮಾಡಲು ಕಾಲಮಿತಿಯನ್ನು ನಿಗದಿಪಡಿಸಿದೆ. ಸಾಲ ಮರುಪಾವತಿಯಾಗದ ಸಂದರ್ಭದಲ್ಲಿ ಬ್ಯಾಂಕುಗಳು ಜಪ್ತಿ ಮಾಡಿದ ಆಸ್ತಿಗಳನ್ನು ದೀರ್ಘಕಾಲ ಇಟ್ಟುಕೊಳ್ಳುವಂತಿಲ್ಲ ಎಂದು ತಿಳಿಸಿದೆ.

ಆಸ್ತಿ ವಿಲೇವಾರಿಗೆ ಕಟ್ಟುನಿಟ್ಟಿನ ಕ್ರಮ: ಹೊಸ ನಿಯಮದ ಪ್ರಕಾರ, ಯಾವುದಾದರೂ ಸಾಲವು ‘ವಸೂಲಾಗದ ಸಾಲ’ (NPA) ಎಂದು ಘೋಷಣೆಯಾದ ನಂತರ, ಅದಕ್ಕೆ ಸಂಬಂಧಿಸಿದ ಅಡಮಾನ ಆಸ್ತಿಯನ್ನು ಬ್ಯಾಂಕುಗಳು ಗರಿಷ್ಠ 7 ವರ್ಷಗಳ ಒಳಗೆ ಮಾರಾಟ ಮಾಡಬೇಕಾಗುತ್ತದೆ. ಅಷ್ಟೇ ಅಲ್ಲದೆ, ಇಂತಹ ಆಸ್ತಿಗಳ ಮಾರುಕಟ್ಟೆ ಮೌಲ್ಯವನ್ನು ಬ್ಯಾಂಕುಗಳು ಕಾಲಕಾಲಕ್ಕೆ ಮರುಪರಿಶೀಲನೆ (Revaluation) ನಡೆಸಿ ಅಪ್‌ಡೇಟ್ ಮಾಡಬೇಕು. ಇದರಿಂದ ಬ್ಯಾಂಕಿನ ಲೆಕ್ಕಪತ್ರಗಳಲ್ಲಿ ಆಸ್ತಿಯ ನಿಖರವಾದ ಬೆಲೆ ದಾಖಲಾಗಲು ಸಹಕಾರಿಯಾಗಲಿದೆ.

ಸುಸ್ತಿದಾರರಿಗೆ ಸಂಕಷ್ಟ: ಒಬ್ಬ ವ್ಯಕ್ತಿ ಒಂದು ಬ್ಯಾಂಕಿನಿಂದ ಬೇರೆ ಬೇರೆ ಉದ್ದೇಶಗಳಿಗಾಗಿ ಹಲವು ಸಾಲಗಳನ್ನು ಪಡೆದಿದ್ದರೆ, ಅದರಲ್ಲಿ ಒಂದು ಸಾಲವನ್ನು ಮರುಪಾವತಿಸಲು ವಿಫಲರಾದರೂ ಸಹ ಅವರನ್ನು ‘ಸುಸ್ತಿದಾರ’ (Defaulter) ಎಂದು ಪರಿಗಣಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ಆ ವ್ಯಕ್ತಿಯ ಉಳಿದೆಲ್ಲಾ ಸಾಲಗಳನ್ನೂ ಎನ್‌ಪಿಎ ಎಂದು ವರ್ಗೀಕರಿಸಿ ಕಾನೂನು ಕ್ರಮ ಕೈಗೊಳ್ಳಲು ಆರ್‌ಬಿಐ ಬ್ಯಾಂಕುಗಳಿಗೆ ಅಧಿಕಾರ ನೀಡಿದೆ.

ಸಾಲಗಾರರಿಗೂ ಸಿಗಲಿದೆ ಪಾರದರ್ಶಕತೆಯ ಲಾಭ: ಈ ನಿಯಮ ಜಾರಿಗೆ ಬರುವುದರಿಂದ ಸಾಲಗಾರರಿಗೂ ಅನುಕೂಲವಾಗಲಿದೆ. ಆಸ್ತಿ ಮಾರಾಟ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇರುವುದರಿಂದ ಆಸ್ತಿಯು ಸರಿಯಾದ ಬೆಲೆಗೆ ಮಾರಾಟವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಸಾಲದ ಮೊತ್ತಕ್ಕಿಂತ ಹೆಚ್ಚಿನ ಹಣಕ್ಕೆ ಆಸ್ತಿ ಮಾರಾಟವಾದರೆ, ಉಳಿದ ಹಣವನ್ನು ಸಾಲಗಾರನಿಗೆ ಮರಳಿಸುವ ಪ್ರಕ್ರಿಯೆಯೂ ಸರಳಗೊಳ್ಳಲಿದೆ.

ಸದ್ಯಕ್ಕೆ ಈ ನಿಯಮಗಳು ಕರಡು ರೂಪದಲ್ಲಿದ್ದು, ಆರ್‌ಬಿಐ ಈ ಬಗ್ಗೆ ಸಾರ್ವಜನಿಕರು ಮತ್ತು ತಜ್ಞರ ಸಲಹೆಗಳನ್ನು ಕೇಳಿದೆ. ಈ ಎಲ್ಲ ಪ್ರಕ್ರಿಯೆಗಳ ನಂತರ ಅಧಿಕೃತ ಆದೇಶ ಹೊರಬೀಳಲಿದ್ದು, ಇದು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಆರ್ಥಿಕ ಶಿಸ್ತನ್ನು ಮತ್ತಷ್ಟು ಬಲಪಡಿಸಲಿದೆ.

ಇದನ್ನೂ ಓದಿ: ವಿಜಯ್ ಸರ್ಕಾರಕ್ಕೆ ಆರು ತಿಂಗಳ ಕಾಲ ಡಿಎಂಕೆ ತೊಂದರೆ ನೀಡುವುದಿಲ್ಲ ಎಂದ ಸ್ಟಾಲಿನ್!

Leave a Reply

Your email address will not be published. Required fields are marked *