TOP NEWS

RB Timmapur: ರಾಜ್ಯದಲ್ಲಿ ಸಿಎಂ ಬದಲಾವಣೆ ವದಂತಿಗೆ ಬ್ರೇಕ್ ಹಾಕಿದ ಸಚಿವ ತಿಮ್ಮಾಪುರ್

rb timmapur clarification about leadership change

ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ನಾಯಕತ್ವ ಬದಲಾವಣೆಯಾಗಲಿದೆ ಎಂಬ ಸುದ್ದಿಗಳಿಗೆ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ್ (RB Timmapur) ಅವರು ಸ್ಪಷ್ಟನೆ ನೀಡಿದ್ದಾರೆ. ಮುಖ್ಯಮಂತ್ರಿ ಬದಲಾವಣೆಯ ಕುರಿತು ಹೈಕಮಾಂಡ್ ಮಟ್ಟದಲ್ಲಿ ಯಾವುದೇ ಮಾತುಕತೆಗಳು ನಡೆದಿಲ್ಲ. ಇದೆಲ್ಲವೂ ಕೇವಲ ಮಾಧ್ಯಮಗಳಲ್ಲಿ ಸೃಷ್ಟಿಯಾಗಿರುವ ಚರ್ಚೆಯಷ್ಟೇ ಎಂದು ಹೇಳುವ ಮೂಲಕ ಗೊಂದಲಗಳಿಗೆ ತೆರೆ ಎಳೆಯಲು ಪ್ರಯತ್ನಿಸಿದ್ದಾರೆ.

ವೈಯಕ್ತಿಕ ಹೇಳಿಕೆಗಳಿಗೆ ಮಹತ್ವವಿಲ್ಲ: ಇದೇ ಸಂದರ್ಭದಲ್ಲಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಅದು ಅವರ ವೈಯಕ್ತಿಕ ಅನಿಸಿಕೆಯಾಗಿರಬಹುದು. ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವುದು ತಪ್ಪಲ್ಲ. ಆದರೆ, ನಾಯಕತ್ವದ ಬಗ್ಗೆ ಹೈಕಮಾಂಡ್ ಯಾವುದೇ ಅಧಿಕೃತ ಸೂಚನೆ ನೀಡಿಲ್ಲ ಎಂದು ತಿಳಿಸಿದರು. ಅಲ್ಲದೆ, ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿಗೆ ಸಂಬಂಧಿಸಿದಂತೆ ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದು ಅವರು ಮಾಹಿತಿ ನೀಡಿದರು.

ಮೇ 15ರಂದು ದೆಹಲಿಯಲ್ಲಿ ನಿರ್ಣಾಯಕ ಸಭೆ? ಸಚಿವರು ವದಂತಿಗಳನ್ನು ಅಲ್ಲಗಳೆಯುತ್ತಿದ್ದರೂ, ಇನ್ನೊಂದೆಡೆ ಕಾಂಗ್ರೆಸ್ ಹೈಕಮಾಂಡ್ ರಾಜ್ಯದ ಪವರ್ ಫೈಟ್‌ಗೆ ಅಂತ್ಯಹಾಡಲು ಸಜ್ಜಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಮೂಲಗಳ ಪ್ರಕಾರ, ಮೇ 15ರ ಆಸುಪಾಸಿನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ದೆಹಲಿಗೆ ಕರೆಸಿಕೊಳ್ಳುವ ಸಾಧ್ಯತೆಯಿದೆ. ಈ ಸಭೆಯಲ್ಲಿ ನಾಯಕತ್ವ ಬದಲಾವಣೆ ಹಾಗೂ ಸಂಪುಟದ ಪುನಾರಚನೆಯ ಕುರಿತು ಅಂತಿಮ ನಿರ್ಧಾರ ಹೊರಬೀಳಬಹುದು ಎಂದು ಅಂದಾಜಿಸಲಾಗಿದೆ.

ಕೇರಳದ ಬಳಿಕ ಕರ್ನಾಟಕದತ್ತ ಹೈಕಮಾಂಡ್ ಗಮನ: ಸದ್ಯ ಕಾಂಗ್ರೆಸ್ ನಾಯಕತ್ವವು ಕೇರಳದ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆಯಲ್ಲಿ ಕಾರ್ಯನಿರತವಾಗಿದೆ. ಮೇ 10ರೊಳಗೆ ಅಲ್ಲಿನ ಪ್ರಕ್ರಿಯೆಗಳು ಪೂರ್ಣಗೊಳ್ಳಲಿದ್ದು, ತದನಂತರ ಹೈಕಮಾಂಡ್ ಕರ್ನಾಟಕದ ರಾಜಕೀಯ ಬೆಳವಣಿಗೆಗಳತ್ತ ಗಮನ ಹರಿಸಲಿದೆ. ಮೇ ತಿಂಗಳ ಮಧ್ಯಭಾಗದಲ್ಲಿ ನಡೆಯಲಿರುವ ಈ ಸಭೆಯು ರಾಜ್ಯ ಕಾಂಗ್ರೆಸ್ ಸರ್ಕಾರದ ಮುಂದಿನ ಹಾದಿಯನ್ನು ನಿರ್ಧರಿಸಲಿದೆ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಮನೆಮಾಡಿದೆ.

ಇದನ್ನೂ ಓದಿ: ಮೇ ಮಧ್ಯಭಾಗದಲ್ಲಿ ರಾಜ್ಯ ಕಾಂಗ್ರೆಸ್ ‘ಪವರ್ ಫೈಟ್’ಗೆ ಸುಖಾಂತ್ಯ? ಹೈಕಮಾಂಡ್ ಸಭೆಗೆ ಕ್ಷಣಗಣನೆ!

Leave a Reply

Your email address will not be published. Required fields are marked *